ಗುರುವಾರ , ಫೆಬ್ರವರಿ 20, 2020
23 °C
ಮೆರವಣಿಗೆಯ ಮೆರುಗು ಹೆಚ್ಚಿಸಿದ ಶರಣ, ಶರಣೆಯರ ವೇಷಧಾರಿಗಳು

ಬೀದರ್: ವಚನ ಗ್ರಂಥದ ಅದ್ಧೂರಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಲಿಂಗಾಯತ ಮಹಾಮಠದ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ವಚನ ವಿಜಯೋತ್ಸವದ ಪ್ರಯುಕ್ತ ನಗರದಲ್ಲಿ ಭಾನುವಾರ ಲಿಂಗಾಯತ ಧರ್ಮಗ್ರಂಥ ಗುರುವಚನ, ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ವಚನ ಸಾಹಿತ್ಯ, ಶರಣರ ಸ್ತಬ್ಧ ಚಿತ್ರಗಳು, ನೂರಾರು ಗ್ರಾಮಗಳ ಬಸವ ಜ್ಯೋತಿ ತಂಡಗಳು, ತಲೆಯ ಮೇಲೆ ವಚನ ಸಾಹಿತ್ಯ ಹೊತ್ತ ಸಾವಿರಾರು ಶರಣೆಯರ ಸಾಲು ಭಕ್ತಿಯ ಹೊನಲು ಹರಿಸಿತು.

ಸೋಲಾಪುರದ ನಂದಿಕೋಲು, ಬಸಾಪುರದ ಬಸವ ಸೇನಾ ಝಾಂಝ್‌ಮೇಳ, ದಾವಣಗೆರೆಯ ಭಜನಾ ಮೇಳ, ಮಂಡ್ಯದ ಪೂಜಾ ಕುಣಿತ, ತಮಟೆ ತಂಡ, ಬೆಳ್ಳೇರಿಯ ಮಹಿಳಾ ಡೊಳ್ಳು, ಬರೂರಿನ ಚಿಟಕಿ ಭಜನೆ, ಹಲಗೆ ತಂಡ, ಗದಗಿನ ಜಾನಪದ ಕಲಾ ತಂಡ, ಪೈತ್ರಿ ತಂಡ, ಮಹಿಳಾ ವೀರಗಾಸೆ, ಆಣದೂರಿನ ಕೋಲಾಟ ತಂಡ, ವಚನ ವಡಪು, ಭಜನಾ ತಂಡ, ಲಂಬಾಣಿ ನೃತ್ಯ ಮೆರವಣಿಗೆಯ ಮೆರುಗು ಹೆಚ್ಚಿಸಿದವು.

‘ವಚನ ವಿಜಯೋತ್ಸವ, ಕಲ್ಯಾಣ ಕ್ರಾಂತಿಯ ಪುನರೋತ್ಸವ...’ ಹಾಡಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ, ಶಾಸಕ ರಾಜಶೇಖರ ಪಾಟೀಲ, ಬಿಜೆಪಿ ಮುಖಂಡ ಬಾಬುವಾಲಿ, ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಮೊದಲಾದವರು ಹೆಜ್ಜೆ ಹಾಕಿದರು. ಪುಷ್ಪಗಳಿಂದ ಅಲಂಕರಿಸಲಾಗಿದ್ದ ಎರಡು ಪ್ರತ್ಯೇಕ ವಾಹನಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ವಚನ ಗ್ರಂಥ ಇಡಲಾಗಿತ್ತು.

ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆಯು ಭಗತ್‌ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ, ರೋಟರಿ ವೃತ್ತ, ಮಡಿವಾಳ ವೃತ್ತ, ಹೊಸ ಬಸ ನಿಲ್ದಾಣ್, ಶಿವನಗರ, ಪಾಪನಾಶ ಮಹಾದ್ವಾರ ಮೂಲಕ ಹಾಯ್ದು ಬಸವಗಿರಿಗೆ ತಲುಪಿ ಸಮಾರೋಪಗೊಂಡಿತು.

ಇದಕ್ಕೂ ಮುನ್ನ ಬಸವೇಶ್ವರ ವೃತ್ತದಲ್ಲಿ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಮೆರವಣಿಗೆಗೆ ಚಾಲನೆ ನೀಡಿದರು. ಅಕ್ಕಮಹಾದೇವಿ ಚಲನಚಿತ್ರದ ನಿರ್ಮಾಪಕಿ ರಾಜೇಶ್ರೀ ಥಳಂಗೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಅಕ್ಕಅನ್ನಪೂರ್ಣ ವಚನ ಪಠಣ ಮಾಡಿಸಿದರು. ಡಾ. ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು.

ಶಾಸಕರಾದ ರಹೀಂಖಾನ್, ಬಂಡೆಪ್ಪ ಕಾಶೆಂಪೂರ್, ಬಸವ ಮೃತ್ಯುಂಜಯ ಸ್ವಾಮೀಜಿ, ಮಾತೆ ನಾಗಲಾಂಬಿಕೆ, ಪುಣೆಯ ಭೂ ಮಾತಾ ಬ್ರಿಗೇಡ್ ಅಧ್ಯಕ್ಷೆ ತೃಪ್ತಿ ದೇಸಾಯಿ, ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ, ವಚನ ವಿಜಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಕಾರ್ಯಾಧ್ಯಕ್ಷ ಗುರುನಾಥ ಕೊಳ್ಳೂರ, ಶಾಂತಾ ಖಂಡ್ರೆ, ಶರಣಪ್ಪ ಮಿಠಾರೆ, ಪ್ರಭುರಾವ್ ವಸ್ಮತೆ, ರಮೇಶ ಮಠಪತಿ, ಸೋಮನಾಥ ಯಾಳವಾರ, ಬಸವ ಪ್ರಭು, ಬಸವರಾಜ ಧನ್ನೂರ, ಜೈರಾಜ ಖಂಡ್ರೆ, ಆನಂದ ದೇವಪ್ಪ, ರಾಜಕುಮಾರ ಪಾಟೀಲ, ಚಂದ್ರಶೇಖರ ಹೆಬ್ಬಾಳೆ, ವಿರೂಪಾಕ್ಷ ಗಾದಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು