ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಹಿರಿಯ ಸಾಹಿತಿ ದೇಶಾಂಶ ಹುಡಗಿ

Last Updated 27 ನವೆಂಬರ್ 2020, 6:56 IST
ಅಕ್ಷರ ಗಾತ್ರ

ಬೀದರ್: ಧರಿನಾಡು ಕನ್ನಡ ಸಂಘ ಸ್ಥಾಪಿಸಿ ಜಿಲ್ಲೆಯಲ್ಲಿ ಸಾಹಿತ್ತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದ ಹಿರಿಯ ಸಾಹಿತಿ ದೇಶಾಂಶ ಹುಡಗಿ (91) ಕೊರೊನಾದಿಂದ ನಿಧನರಾದರು.

ಅನಾರೋಗ್ಯದ ಕಾರಣ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು.

‘ದೇಶಾಂಶ ಹುಡಗಿ’ ಕಾವ್ಯ ನಾಮದಿಂದ ಪ್ರಸಿದ್ಧರಾಗಿದ್ದ ಮೂಲತಃ ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ನಿವೃತ್ತ ಶಿಕ್ಷಕ ಶಾಂತಪ್ಪ ಶರಣಪ್ಪ ದೇವರಾಯ ಅವರು ಸಾಹಿತಿ, ಕವಿ, ಜಾನಪದ-ನಿಘಂಟು ತಜ್ಞ, ಕಥೆಗಾರ ಹಾಗೂ ಅನುವಾದಕರಾಗಿಯೂ ಗುರುತಿಸಿಕೊಂಡಿದ್ದರು.

ಬಾಲ್ಯದಿಂದಲೇ ಜಾನಪದದ ಆಸಕ್ತಿ ಬೆಳೆಸಿಕೊಂಡಿದ್ದರು. ಕನ್ನಡ ಪರ ಹಾಗೂ ಸಾಹಿತ್ತಿಕ ಚಟು ವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಧರಿನಾಡು ಕನ್ನಡ ಸಂಘ ಸ್ಥಾಪಿಸಿ, ಜಿಲ್ಲೆಯಲ್ಲಿ ಸಾಹಿತಿಗಳಿಗೆ ಹೊಸ ವೇದಿಕೆ ಕಲ್ಪಿಸಿದ್ದರು. ಸಂಘದ ಮೂಲಕ ಅನೇಕ ಸಮ್ಮೇಳನಗಳನ್ನು ಸಂಘಟಿಸಿದ್ದರು. 120ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ, ಯುವ ಸಾಹಿತಿಗಳನ್ನು ಪ್ರೋತ್ಸಾಹಿಸಿದ್ದರು.

ಧರಿನಾಡು ಜಾನಪದ ಗಾದೆಗಳು, ಬೀದರ್ ಜಿಲ್ಲೆಯ ಒಗಟುಗಳು, ಬೀದರ್ ಕನ್ನಡ ಕೋಶ ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದರು. ಜಾನಪದ ಸಾಹಿತ್ಯ, ಶರಣ ಸಾಹಿತ್ಯ, ಕವನ ಸಂಕಲನ, ಕಥೆ ಮೊದಲಾದ ಪ್ರಕಾರಗಳ ಕೃತಿಗಳ ರಚನೆಯಲ್ಲಿ ಎತ್ತಿದ ಕೈ ಆಗಿದ್ದರು.

ಶಿಕ್ಷಕ ವೃತ್ತಿ ಜತೆಗೇ ಸಾಹಿತ್ಯ ಕೃಷಿಯನ್ನೂ ಮಾಡಿದ್ದರು. 20 ನಾಟಕಗಳನ್ನು ನಿರ್ದೇಶಿಸಿದ್ದ ಅವರು, 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿಯಾನ ಕೂಡ ಮಾಡಿದ್ದರು.

ಸಾಹಿತ್ಯ ಹಾಗೂ ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 2012 ರಲ್ಲಿ ಜಾನಪದ ಅಕಾಡೆಮಿ ಹಾಗೂ 2018 ರಲ್ಲಿ ಕರ್ನಾಟಕ ಸಾಹಿತ್ಯ ಅಕಾ ಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಹುಡಗಿ ಅವರು 20 ವರ್ಷಗಳಿಂದ ನಗರದ ಅಲ್ಲಮಪ್ರಭು ನಗರದಲ್ಲಿ ವಾಸವಾಗಿದ್ದರು. ಅವರಿಗೆ ಪತ್ನಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಎದುರಿನ ಸ್ಮಶಾನ ಭೂಮಿಯಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT