ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಮೂಲಸೌಕರ್ಯ ಒದಗಿಸದ ಸ್ಥಳೀಯ ಸಂಸ್ಥೆಗಳು

ಸಚಿವರ ಮಾತಿಗೂ ಸ್ಪಂದಿಸದ ನಗರಸಭೆ ಅಧಿಕಾರಿಗಳು
Last Updated 26 ಜುಲೈ 2021, 3:38 IST
ಅಕ್ಷರ ಗಾತ್ರ

ಬೀದರ್‌: ನಗರ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಗೆ ಸರಿಯಾದ ಮೂಲಸೌಕರ್ಯ ಒದಗಿಸದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ಗುತ್ತಿಗೆದಾರರು ನಗರ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಗಟಾರ ನಿರ್ಮಿಸಿ ಬಿಲ್‌ ಪಾವತಿಸಿಕೊಂಡು ಕೈತೊಳೆದುಕೊಂಡಿದ್ದಾರೆ. ನೀರು ಹರಿದು ಹೋಗದ ಕಾರಣ ಜನ ಸಂಕಷ್ಟ ಎದುರಿಸುತ್ತಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಕಳೆದ ವರ್ಷ ಬೀದರ್‌ ನಗರಸಭೆ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡಿದ್ದರು. ಆದರೆ, ಈ ಬಾರಿ ಅಧಿಕಾರಿಗಳು ಮಳೆಗಾಲ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಿಲ್ಲ. ಹೀಗಾಗಿ ನಗರದ ಜನ ಹಲವು ಬಗೆಯ ಸಮಸ್ಯೆ ಎದರಿಸುವಂತಾಗಿದೆ. ಜ್ಯೋತಿ ಕಾಲೊನಿ, ಸಂಗಮೇಶ್ವರ ಕಾಲೊನಿ, ವಿದ್ಯಾನಗರ ಸೇರಿದಂತೆ ಹಲವು ಕಡೆ ಕಳೆದ ವರ್ಷ ಗಟಾರ ನಿರ್ಮಿಸಿದ್ದಾರೆ. ಆದರೆ, ಅದರಲ್ಲಿನ ನೀರು ಹರಿದು ಹೋಗುತ್ತಿಲ್ಲ. ಮಳೆಯಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ.

ಬಚ್ಚಲು ನೀರು ಹರಿದು ಹೋಗಲು ಸಾಧ್ಯವಾಗದ ಕಾರಣ ಜ್ಯೋತಿ ಕಾಲೊನಿ, ಶರಣ ಉದ್ಯಾನ ಕಾಲೊನಿಯಲ್ಲಿ ಮನೆಗಳ ಮಾಲೀಕರು ರಸ್ತೆ ಬದಿಯಲ್ಲೇ ಆಳವಾದ ಹೊಂಡ ತೋಡಿಕೊಂಡು ನೀರು ಬಿಟ್ಟಿದ್ದಾರೆ. ಶೌಚಾಲಯದ ನೀರನ್ನೂ ಅದಕ್ಕೆ ಬಿಡುತ್ತಿರುವುದರಿಂದ ಕಾರಣ ಅಂತರ್ಜಲ ಮಟ್ಟ ಕಲುಷಿತಗೊಳ್ಳುತ್ತಿದೆ. ಬಾವಿಗಳ ನೀರು ಕಲುಷಿತಗೊಂಡಿದೆ.ಈ ಸಂಬಂಧ ನಗರಸಭೆ ಎಂಜಿನಿಯರ್‌ಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಹಕ್‌ ಹಾಗೂ ಬಿದರಿ ಕಾಲೊನಿ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿ ಸರಿಯಾದ ರಸ್ತೆಗಳು ಇಲ್ಲ. ಗಟಾರಗಳೂ ವ್ಯವಸ್ಥಿತವಾಗಿಲ್ಲ. ಕೆಸರು ತುಂಬಿದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ನಗರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಹಕ್‌ ಕಾಲೊನಿ ನಿವಾಸಿಗಳು ದೂರುತ್ತಾರೆ.

ರಾಜ್ಯ ಸರ್ಕಾರ ಪ್ರತಿ ವಾರ್ಡ್‌ಗೊಂದು ವಾಹನ ಕೊಟ್ಟಿದೆ. ನಿತ್ಯ ಘನತ್ಯಾಜ್ಯ ವಿಲೇವಾರಿಗೂ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನಿಯೋಜಿಸಿದೆ. ಈಗ ಕಾರ್ಮಿಕರ ಸಂಖ್ಯೆ ಹೆಚ್ಚು ತೋರಿಸಿ ಕಡಿಮೆ ಜನರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಆರೋಪಗಳಿವೆ. ಜಿಲ್ಲಾಧಿಕಾರಿ ಅವರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮಲ್ಲಿಕಾರ್ಜುನ ಚಿಟ್ಟಾ ಕೋರಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಹುಮನಾಬಾದ್‌ ಶಾಸಕ ರಾಜಶೇಖರ್ ಪಾಟೀಲ, ಬಸವಕಲ್ಯಾಣ ಶಾಸಕ ಶರಣು ಸಲಗರ ಅಧಿಕಾರಿಗಳ ಸಭೆ ನಡೆಸಿ ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಕೆಲಸ ಮಾಡಲು ಆಸಕ್ತಿ ಇಲ್ಲದವರು ಬೇರೆ ಕಡೆ ಹೋಗುವಂತೆ ಸ್ಪಷ್ಟವಾಗಿಯೇ ಹೇಳಿದ್ದಾರೆ. ಆದರೆ, ನಗರ ಸ್ವಚ್ಛತೆಯಲ್ಲಿ ನಿರೀಕ್ಷೆಯಷ್ಟು ಪ್ರಗತಿ ಕಂಡುಬಂದಿಲ್ಲ.

ರಸ್ತೆ ಮೇಲೆ ಕಸ, ಕೆಸರು
ಹುಮನಾಬಾದ್‌:
ರಸ್ತೆ ಕಾಮಗಾರಿಯಿಂದ ಪಟ್ಟಣದಲ್ಲಿ ಕೆಸರು ತುಂಬಿಕೊಂಡಿದೆ. ಬಸ್‌ ನಿಲ್ದಾಣ ಮುಂಭಾಗದ ರಸ್ತೆಯ ಬದಿಗೆ ಇರುವ ಚರಂಡಿಗಳು ಹಲವು ವರ್ಷಗಳಿಂದ ತುಂಬಿಕೊಂಡಿವೆ. ಮಳೆ ಬಂದಾಗಲೆಲ್ಲ. ಗಟಾರ ತುಂಬಿ ರಸ್ತೆ ಮೇಲೆಯೇ ಹರಿಯುತ್ತದೆ.

ಜನ ಗಟಾರದಲ್ಲಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್, ಪ್ಲಾಸ್ಟಿಕ್‌ ಕಪ್‌ ಎಸೆಯುತ್ತಿರುವ ಕಾರಣ ಗಟಾರಗಳಲ್ಲಿ ನೀರು ಕಟ್ಟುತ್ತಿದೆ. ಪುರಸಭೆಯವರು ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಗಟಾರಗಳನ್ನು ಸ್ವಚ್ಛಗೊಳಿಸಿ ನೀರು ಹರಿದು ಹೋಗುವಂತೆ ಮಾಡಬೇಕು ಎಂದು ಯಶೋದಾ ಹೇಳುತ್ತಾರೆ.

ನಗರದ ಅಲ್ಲಲ್ಲಿ ಕೊಳಚೆ ನೀರು ನಿಂತು ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ. ಕ್ರಿಮಿನಾಶಕ ಸಿಂಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಚಿಟಗುಪ್ಪ ಪಟ್ಟಣದ ಹಳೆ ಹನುಮಾನ ಮಂದಿರ ಸಮೀಪ ಮಳೆ ಬಂದಾಗ ನೀರು ಹರಿದು ಹೋಗಲು ಸಾಧ್ಯವಾಗದೇ ಅಲ್ಲಿಯೇ ನಿಂತು ಹೊಲಸು ಆಗುತ್ತಿದೆ. ಬನಶಂಕರಿ ಕಾಲೊನಿಯಲ್ಲೂ ಗಟಾರಗಳಲ್ಲಿ ಸರಿಯಾಗಿ ನೀರು ಹರಿದು ಹೋಗುವುದಿಲ್ಲ. ಬನಶಂಕರಿ ಕಾಲೊನಿಯಲ್ಲಿ ಅಚ್ಚುಕಟ್ಟಾದ ಸಿಸಿ ರಸ್ತೆ ನಿರ್ಮಿಸಬೇಕು. ನೀರು ಹರಿದು ಹೋಗುವ ಹಾಗೆ ಗಟಾರ ನಿರ್ಮಿಸಬೇಕು ಎಂದು ಕಾಲೊನಿ ನಿವಾಸಿಗಳು ಮನವಿ ಮಾಡಿದ್ದಾರೆ. ಹಳ್ಳಿಖೇಡ ಪಟ್ಟಣದಲ್ಲಿ ₹8.90 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿ.ಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿ ಕಳಪೆ ಮಟ್ಟದ್ದಾಗಿದೆ ಎಂದು ವೀರೇಶರೆಡ್ಡಿ ಬೊತಗಿಕರ್‌ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ವಿವಿಧೆಡೆ ಅಸ್ವಚ್ಛತೆ; ರೋಗ ಭೀತಿ
ಭಾಲ್ಕಿ:
ಹಳೇ ಪಟ್ಟಣದ ಆನಂದವಾಡಿ, ನಿಡೇಬನ್‌ ರಸ್ತೆ, ಹಳೇ ಭೀಮನಗರ ಬಡಾವಣೆ, ಎಲ್‌ಐಜಿ ಕಾಲೊನಿಯ ಹಲವೆಡೆ, ತರಕಾರಿ ಮಾರುಕಟ್ಟೆ, ಚನ್ನಬಸವಾಶ್ರಮ ಪಕ್ಕದ ರಸ್ತೆ ಸೇರಿದಂತೆ ವಿವಿಧೆಡೆ ಮಳೆಗಾಲದಲ್ಲಿ ಸಕಾಲಕ್ಕೆ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲ. ಹೀಗಾಗಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.

ಮಳೆ ನೀರು ಹಾಗೂ ಮನೆಗಳ ತ್ಯಾಜ್ಯ ನೀರು ಹರಿದು ಹೋಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪಟ್ಟಣ ನಿವಾಸಿಗಳು ಆಗ್ರಹಿಸಿದ್ದಾರೆ.

ಔರಾದ್‌ನಲ್ಲಿ ನೈರ್ಮಲ್ಯ ಸಮಸ್ಯೆ
ಔರಾದ್:
ಪಟ್ಟಣದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದೆ. ಮಳೆ ನೀರು ಸುಗಮವಾಗಿ ಹರಿದು ಹೋಗದೆ ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ. ಚರಂಡಿಯಲ್ಲಿ ಹೂಳು ತುಂಬಿ ಹೊಲಸು ನೀರು ರಸ್ತೆಗೆ ಬಂದು ಗಬ್ಬು ನಾರುತ್ತಿದೆ.

ಶಿಕ್ಷಕರ ಕಾಲೊನಿ ಸೇರಿದಂತೆ ಕೆಲ ಬಡಾವಣೆಗಳಲ್ಲಿ ಸಮಸ್ಯೆ ತೀವ್ರವಾಗಿ ಹದಗೆಟ್ಟಿದೆ. ಉದ್ಯಾನಗಳಲ್ಲಿ ನೀರು ನಿಂತಿದೆ‌. ಇದರಿಂದ ಪಕ್ಕದ ಮನೆಗಳಲ್ಲೂ ನೀರು ಹೋಗುತ್ತಿದೆ. ಜನ ಕಂಗಾಲಾಗಿ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ಸಂತೋಷ ಕಾಲೊನಿಯಲ್ಲಿ ಚರಂಡಿ ಇಲ್ಲದೆ ಮಳೆ ನೀರು ಮನೆಗಳಿಗೆ ನುಗ್ಗಿದೆ. ಅಲ್ಲಿಯ ನಿವಾಸಿಗಳು ಸ್ಥಳೀಯ ಜ‌ನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

‘ಮಳೆ ಬಂದರೆ ಪಟ್ಟಣದ ವಿವಿಧೆಡೆ ತೊಂದರೆಯಾಗುತ್ತಿದೆ. ಅದರಲ್ಲೂ ಶಿಕ್ಷಕರ ಕಾಲೊನಿ ಜನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜ‌ನವಾಗಿಲ್ಲ’ ಎಂದು ಅಂಬಾದಾಸ ನೇಳಗೆ ಬೇಸರ ವ್ಯಕ್ತಪಡಿಸುತ್ತಾರೆ.

‘ಪಟ್ಟಣದ ಕೆಲ ಕಡೆ ಚರಂಡಿ ಇಲ್ಲ. ತುರ್ತು ಅಗತ್ಯವಿರುವ ಕಡೆ ಗಟಾರ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು’ ಎಂದು ಔರಾದ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಹೇಳುತ್ತಾರೆ.

ಭಾರಿ ಮಳೆಯಿಂದ ಅಂಗಡಿಗಳಿಗೆ ನೀರು
ಬಸವಕಲ್ಯಾಣ:
ನಗರದ ಜನಸಂಖ್ಯೆ ವರ್ಷ ವರ್ಷ ಹೆಚ್ಚಾಗುತ್ತಿದೆ. ನಗರ ವಿಸ್ತರಣೆಯಾಗುತ್ತಿದ್ದರೂ ನೀರು ಹರಿದು ಹೋಗಲು ಅಗತ್ಯವಿರುವ ಕಡೆಗೆ ನಗರಸಭೆ ಗಟಾರ ನಿರ್ಮಿಸಿಲ್ಲ.

ಉಪ ಚುನಾವಣೆಯಲ್ಲಿ ಗೆದ್ದಿರುವ ಶಾಸಕ ಶರಣು ಸಲಗರ ಚುನಾವಣೆ ಫಲಿತಾಂಶ ಪ್ರಕಟವಾದ ಮರುದಿನವೇ ನಗರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಓಣಿಗಳಿಗೆ ಹೋಗಿ ಸ್ವಚ್ಛತಾ ಕಾರ್ಯ ಪರಿಶೀಲಿಸುತ್ತಿದ್ದಾರೆ. ಆದರೆ, ಅಷ್ಟಕಷ್ಟೇ ಕೆಲಸ ಆಗಿದೆ.

ಜೈಶಂಕರ ಓಣಿಯ ನೀರು, ವಿವೇಕಾನಂದ ಕಾಲೇಜಿನ ಎದುರಿನ ಗಟಾರಗಳಲ್ಲಿ ನೀರು ನಿಂತಿದೆ. ಮುಖ್ಯ ರಸ್ತೆಯಲ್ಲಿನ ಮಳೆ ನೀರು ಅಂಬೇಡ್ಕರ್ ವೃತ್ತದಲ್ಲಿನ ಬಿಇಒ ಕಚೇರಿ ಸಮೀಪದಲ್ಲಿ ಸಂಗ್ರಹಗೊಳ್ಳುತ್ತದೆ. ತಹಶೀಲ್ದಾರ್ ಹಳೆಯ ಕಚೇರಿ ಹಾಗೂ ಶಾಸಕರ ಕಚೇರಿ ಎದುರಿನ ಗಟಾರ ನೀರು ಸಹ ಮುಂದೆ ಸಾಗುತ್ತಿಲ್ಲ. ಹೀಗಾಗಿ ಭಾರಿ ‌ಮಳೆಗೆ ಅಂಗಡಿಗಳಿಗೆ‌ ನೀರು ನುಗ್ಗುತ್ತದೆ. ಮುಖ್ಯ ಬಸ್‌ನಿಲ್ದಾಣ, ಕೈಕಾಡಿ ಓಣಿ, ಪಾರಧಿ ಓಣಿಗಳ ಭಾಗ ಇಳಿಜಾರು ಪ್ರದೇಶದಲ್ಲಿದೆ. ಮಳೆ ನೀರು ಇಲ್ಲಿಗೆ ಬಂದು ಸಂಗ್ರಹಗೊಳ್ಳುತ್ತದೆ. ಕೆಲಸಲ ಮನೆಗಳು ಜಲಾವೃತಗೊಳ್ಳುತ್ತವೆ. ಕಣ್ಣಾರೆ ನೋಡಿದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತಿಲ್ಲ.

ಪೂರಕ ಮಾಹಿತಿ: ಮನ್ಮಥಪ್ಪ ಸ್ವಾಮಿ, ಬಸವರಾಜ ಪ್ರಭಾ, ಮಾಣಿಕ ಭುರೆ, ಗುಂಡು ಅತಿವಾಳ, ವೀರೇಶ ಮಠಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT