ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ಬೇಡಿಕೆ ಕೊರತೆ, ಹೊಲದಲ್ಲಿಯೇ ಉಳಿದ ಕಲ್ಲಂಗಡಿ

ಲಾಕ್‌ಡೌನ್‌ ಪರಿಣಾಮ: ನಷ್ಟದಲ್ಲಿ ಬೆಳೆಗಾರ
Last Updated 19 ಮೇ 2020, 20:00 IST
ಅಕ್ಷರ ಗಾತ್ರ

ಔರಾದ್: ಕಲ್ಲಂಗಡಿ ಹಣ್ಣು ಮಾರಾಟ ಮಾಡಿ ಕೈತುಂಬ ಹಣ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ತಾಲ್ಲೂಕಿನ ರೈತರೊಬ್ಬರಿಗೆ ಲಾಕ್‌ಡೌನ್‌ನಿಂದಾಗಿ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ನಾಗೂರ (ಬಿ) ಗ್ರಾಮದ ರೈತ ರಮೇಶರೆಡ್ಡಿ ಅವರ ಹೊಲದಲ್ಲಿ ಕಟಾವಿಗೆ ಬಂದ 600 ಕ್ವಿಂಟಲ್‌ನಷ್ಟು ಕಲ್ಲಂಗಡಿ ಹಣ್ಣು ಮಾರಾಟವಾಗದೆ ಹೊಲದಲ್ಲಿಯೇ ಕೊಳೆಯುತ್ತಿದೆ.

’ಕಳೆದ ವರ್ಷ ಇದೇ ಹೊತ್ತಿಗೆ ಒಂದೂವರೆ ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಒಬ್ಬರೇ ವ್ಯಾಪಾರಿ ₹ 3 ಲಕ್ಷ ಕೊಟ್ಟು ಖರೀದಿ ಮಾಡಿದ್ದರು. ಆದರೆ, ಈ ವರ್ಷ ಮೂರು ಎಕರೆಯಲ್ಲಿ ಬೆಳೆದ ಕಲ್ಲಂಗಡಿಗೆ ಯಾವ ಖರೀದಿದಾರರೂ ಸಿಗುತ್ತಿಲ್ಲ‘ ಎಂದು ರೈತ ರಮೇಶರೆಡ್ಡಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಬೀದರ್‌ಗೆ ಕೊಂಡೊಯ್ಯದರೆ ವಾಹನ ಬಾಡಿಗೆ ಖರ್ಚು ಕೂಡ ಸಿಗುವುದಿಲ್ಲ. ಅಕ್ಕ ಪಕ್ಕದ ಊರುಗಳಲ್ಲಿ ಒಂದು ಕೆಜಿಗೆ ₹ 5ಕ್ಕೆ ಮಾರಾಟ ಮಾಡುತ್ತಿದ್ದೇನೆ. ಇಷ್ಟು ಕಡಿಮೆ ಬೆಲೆಗೆ ಕೊಟ್ಟರೂ ಗ್ರಾಹಕರು ಖರೀದಿಗೆ ಬರುತ್ತಿಲ್ಲ. ಹೊಲದಲ್ಲಿ ಇನ್ನು 400 ಕ್ವಿಂಟಲ್‌ನಷ್ಟು ಕಲ್ಲಂಗಡಿ ಉಳಿದಿದೆ' ಎಂದು ಅವರು ಕಣ್ಣೀರಿಟ್ಟರು.

'ಕಳೆದ ವರ್ಷ ಮಳೆ ಕೊರತೆಯಾಗಿ ತೊಗರಿ, ಸೋಯಾ, ಜೋಳದಂತಹ ಸಾಂಪ್ರದಾಯಿಕ ಬೆಳೆ ಸರಿಯಾಗಿ ಬಾರದೆ ಹಾನಿ ಅನುಭವಿಸಿದ್ದೆ. ಗೆಳೆಯರೊಬ್ಬರ ಸಲಹೆ ಮೇರೆಗೆ ₹ 5 ಲಕ್ಷ ಖರ್ಚು ಮಾಡಿ ಕೊಳವೆ ಬಾವಿ ತೋಡಿಸಿ, ಹಣ್ಣು, ತರಕಾರಿ ಬೆಳೆಯಲು ಆರಂಭಿಸಿದೆ. ಆರಂಭದ ವರ್ಷಗಳಲ್ಲಿ ಕೈತುಂಬ ಹಣ ಬಂತು. ಆದರೆ ಈ ವರ್ಷ ಲಾಕ್‌ಡೌನ್‌ನಿಂದಾಗಿ ಎಲ್ಲವೂ ಹಾಳಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ' ಎಂದು ರೈತ ರೆಡ್ಡಿ ದುಃಖ ವ್ಯಕ್ತಪಡಿಸಿದರು.

'ತಾಲ್ಲೂಕಿನಾದ್ಯಂತ ಹಾನಿಯಾದ ತೋಟಗಾರಿಕೆ ಬೆಳೆಗಳ ಬಗ್ಗೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಬಂದ ಕೂಡಲೇ ಬೆಳೆಹಾನಿ ಸರ್ವೆ ಮಾಡಿ, ವರದಿ ಸಲ್ಲಿಸಲಾಗುವುದು‘ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ.

*
ಅತಿಯಾದ ಬಿಸಿಲಿನಲ್ಲಿಯೂ ಸಕಾಲಕ್ಕೆ ನೀರು ಹರಿಸಿ ಬೆಳೆಸಿದ ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಇಲ್ಲದೆ ಹೊಲದಲ್ಲಿಯೇ ಕೊಳೆಯುತ್ತಿದೆ. ಇದರಿಂದ ₹ 3 ಲಕ್ಷ ಹಾನಿಯಾಗಿದೆ.
-ರಮೇಶರೆಡ್ಡಿ, ನಾಗೂರ ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT