ಶುಕ್ರವಾರ, ಆಗಸ್ಟ್ 6, 2021
21 °C

ಲಾಕ್‍ಡೌನ್ ಸಡಿಲಿಕೆ: ಎಚ್ಚರಿಕೆ ವಹಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಸೋಮವಾರ ಜೂನ್ 21ರಿಂದ ಹಗಲಿನ ವೇಳೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ತೆರವಾಗಲಿದೆ. ಸಾರ್ವಜನಿಕರು ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ಹರಡುವಿಕೆ ತಡೆಯಲು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮನವಿ ಮಾಡಿದ್ದಾರೆ.

ಬೆಳಿಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಅಂಗಡಿಗಳನ್ನು ತೆರೆಯಬಹುದು. ಅಗತ್ಯ ವಸ್ತುಗಳ ಜತೆಗೆ ಎಲ್ಲ ಬಗೆಯ ಅಂಗಡಿಗಳನ್ನೂ ತೆರೆಯಲು ಅವಕಾಶ ನೀಡಲಾಗಿದೆ. ಸಾರ್ವಜನಿಕರು ಅಂತರ ಕಾಯ್ದುಕೊಂಡು ಅಂಗಡಿಗಳಲ್ಲಿ ಸಾಮಗ್ರಿ ಖರೀದಿಸಬೇಕು ಎಂದು ಹೇಳಿದ್ದಾರೆ.

ಕೆಎಸ್‍ಆರ್‌ಟಿಸಿ ಬಸ್‍ಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಸ್‍ಗಳು ಶೇ 50ರಷ್ಟು ಪ್ರಮಾಣಿಕರ ಮಿತಿಯಲ್ಲಿ ಸಂಚರಿಸಲಿವೆ. ಆದರೂ ಜನತೆ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಬೇಕು. ತೀರಾ ಅವಶ್ಯವಿರುವ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗಡೆ ಬರಬೇಕು ಎಂದು ತಿಳಿಸಿದ್ದಾರೆ.

ಹೋಟೆಲ್, ರೆಸ್ಟೊರೆಂಟ್‍ಗಳನ್ನು ಸಂಜೆ 5ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಶೇ 50ರಷ್ಟು ಮಿತಿಯಲ್ಲಿ ಕುಳಿತು ತಿನ್ನಲು ಅನುಮತಿ ನೀಡಲಾಗಿದೆ. ವಾರಾಂತ್ಯದಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ. ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೂ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗಿದೆ. ಆದರೆ ಸೋಂಕು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮನೆಯಲ್ಲಿಯೇ ಯೋಗ ದಿನ ಆಚರಿಸಿ:

ಅಂತರರಾಷ್ಟ್ರೀಯ ಯೋಗದಿನವನ್ನು ಮನೆಗಳಲ್ಲೇ ಆಚರಿಸಬೇಕು ಎಂದು ಸಚಿವ ಪ್ರಭು ಚವಾಣ್‌ ತಿಳಿಸಿದ್ದಾರೆ.

ಝೂಮ್ ಮೀಟಿಂಗ್ ಲಿಂಕ್: https://us04web.zoom.us/j/7654918378?pwd=b0dRMWxjWlBpbG93S0tocHh1aklVQT09 (ಮೀಟಿಂಗ್ ಐಡಿ- 765 491 8378 ಪಾಸ್‍ಕೋಡ್- anands123) ಪ್ರವೇಶಿಸುವ ಮೂಲಕ ಯೋಗ ತರಬೇತಿಯಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು