ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜಿಲ್ಲೆಯಲ್ಲಿ ಲಾಕ್‌ಡೌನ್‌ ಇನ್ನಷ್ಟು ಬಿಗಿ

ಜಿಲ್ಲೆಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಮುಂದುವರಿದ ತಪಾಸಣೆ
Last Updated 22 ಮೇ 2021, 19:30 IST
ಅಕ್ಷರ ಗಾತ್ರ

ಬೀದರ್‌: ಕೊರೊನಾ ಸೋಂಕಿನ ಸರಪಳಿ ತುಂಡರಿಸಲು ವಿಧಿಸಲಾಗಿರುವ ಲಾಕ್‌ಡೌನ್‌ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಜಿಲ್ಲೆಯ ಗಡಿಗಳಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.

ಶನಿವಾರ ದಾಖಲೆ ಇಲ್ಲದೆ ನೆರೆ ಜಿಲ್ಲೆಗಳಿಂದ ಬಂದ ಹಲವರನ್ನು ಮರಳಿ ಕಳಿಸಲಾಯಿತು. ವಲಸೆ ಕಾರ್ಮಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಕೈಗಳ ಮೇಲೆ ಸೀಲ್‌ ಹಾಕಲಾಯಿತು. ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್‌ಡೌನ್‌ ಪೂರ್ಣಗೊಳ್ಳುವವರೆಗೂ ಮನೆಯಲ್ಲೇ ಉಳಿಯುವಂತೆ ತಿಳಿವಳಿಕೆ ನೀಡಿ ಕಳಿಸಲಾಯಿತು.

ಆಟೊರಿಕ್ಷಾ ಹಾಗೂ ಬೈಕ್‌ಗಳ ಮೇಲೆ ಕಳ್ಳದಾರಿಗಳ ಮೂಲಕ ಜಿಲ್ಲೆಯೊಳಗೆ ನುಸುಳಲು ಯತ್ನಿಸಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಕೆಲವರ ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡರು. ಇನ್ನು ಕೆಲವರಿಗೆ ದಂಡವನ್ನೂ ವಿಧಿಸಿದರು. ಮದುವೆ ಕಾರ್ಯಗಳಿಗೆ ಕೆಲವರು ಪ್ರಯಾಸಪಟ್ಟು ತೆರಳಿದರು. ವೈದ್ಯಕೀಯ ವರದಿ ಇರುವ ವ್ಯಕ್ತಿಗಳನ್ನು ಆಸ್ಪತ್ರೆಗಳಿಗೆ ತೆರಳಲು ಅವಕಾಶ ಮಾಡಿಕೊಡಲಾಯಿತು.

ಬೀದರ್‌ ನಗರದಲ್ಲೂ ಬೆಳಿಗ್ಗೆ ಹಾಗೂ ಸಂಜೆ ವೇಳೆ ತಪಾಸಣೆ ತೀವ್ರಗೊಳಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳಿಸಿದರು.

ಮಹಾರಾಷ್ಟ್ರ, ತೆಲಂಗಾಣ ಗಡಿಯಲ್ಲಿ ತೀವ್ರ ತಪಾಸಣೆ: ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಸಹ ಏಪ್ರಿಲ್ 30ರ ವರೆಗೆ ಕಠಿಣ ಲಾಕ್‌ಡೌನ್‌ ಘೋಷಿಸ ಲಾಗಿದೆ. ಗ್ರಾಮಗಳ ವ್ಯಾಪ್ತಿಯಲ್ಲೂ ಸಂಚಾರ ನಿರ್ಬಂಧ ಮಾಡಲಾಗಿದೆ. ಅನಗತ್ಯವಾಗಿ ಮನೆಗಳಿಂದ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅಧಿಕಾರ ನೀಡಿರುವ ಕಾರಣ ಪಂಚಾಯಿತಿಗಳು ಗ್ರಾಮಗಳ ಸುತ್ತ ಬ್ಯಾರಿಕೇಡ್‌ ಹಾಕಿವೆ.

ನೆರೆಯ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿರುವ ವರದಿ ಇಲ್ಲದ ವ್ಯಕ್ತಿಗಳಿಗೆ ಗ್ರಾಮದೊಳಗೆ ಪ್ರವೇಶ ನೀಡುತ್ತಿಲ್ಲ. ಹೀಗಾಗಿ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ತೆರಳಲು ಸಾಧ್ಯವಾಗಿಲ್ಲ. ಅಲ್ಲಿಯೂ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಕೆಲವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ.

ಭಾನುವಾರ ರಜೆ ಇರುವ ಕಾರಣ ತಮ್ಮ ಊರುಗಳಿಗೆ ತೆರಳಲು ಬಂದವರನ್ನು ಮರಳಿ ಕಳಿಸಲಾಯಿತು. ಲಾಕ್‌ಡೌನ್‌ ಮುಗಿಯುವವರೆಗೂ ಊರಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಯಿತು.

ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಂಚರಿಸುತ್ತಿರುವ ಸರಕು ಸಾಗಣೆ ವಾಹನಗಳ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ. ಸಗಟು ಮಾರುಕಟ್ಟೆಗಳು ಮುಚ್ಚಿರುವ ಕಾರಣ ಕೃಷಿ ಉತ್ಪನ್ನಗಳ ಸಾಗಣೆ ಪ್ರಮಾಣ ಕಡಿಮೆಯಾಗಿದೆ. ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT