ಗುರುವಾರ , ಫೆಬ್ರವರಿ 20, 2020
27 °C

ಡಿಸೆಂಬರ್‌ 14 ರಂದು ಲೋಕ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಡಿಸೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಮನಗೂಳಿ ಪ್ರೇಮಾವತಿ ತಿಳಿಸಿದರು.

‘ಲೋಕ್ ಅದಾಲತ್‍ನಲ್ಲಿ ಪ್ರಕರಣದ ಉಭಯ ಪಕ್ಷಗಾರರಲ್ಲಿ ರಾಜಿ ಸಂಧಾನ ಆಯೋಜಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು. ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ, ಶೀಘ್ರ ಮತ್ತು ಅಂತಿಮವಾಗಿ ಇತ್ಯರ್ಥಪಡಿಸುವುದು ರಾಷ್ಟ್ರೀಯ ಲೋಕ ಅದಾಲತ್‍ನ ವೈಶಿಷ್ಠತೆಯಾಗಿದೆ’ ಎಂದು ಇಲ್ಲಿಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಕಕ್ಷಿಗಾರರು, ವಕೀಲರು, ಸಾರ್ವಜನಿಕರು, ಅಧಿಕಾರಿಗಳು, ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿ ರಾಷ್ಟ್ರೀಯ ಲೋಕ ಅದಾಲತ್‍ನ ಲಾಭ ಪಡೆಯಬೇಕು’ ಎಂದು ಮನವಿ ಮಾಡಿಕೊಂಡರು.

‘ಲೋಕ ಅದಾಲತ್‍ನಲ್ಲಿ ಯಾವುದೇ ಕೋರ್ಟ್ ಶುಲ್ಕ ಕೊಡಬೇಕಾಗಿಲ್ಲ. ಕಕ್ಷಿಗಾರರ ಪರವಾಗಿ ಭಾಗವಹಿಸುವವರು ಅವಕಾಶವಿರುತ್ತದೆ. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು’ ಎಂದು ಹೇಳಿದರು.

‘ಸಿವಿಲ್ ಪ್ರಕರಣ ಇತ್ಯರ್ಥಗೊಂಡರೆ ಅವಾರ್ಡ್ ಮಾಡಲಾಗುವುದು.ಇಲ್ಲಿ ಪ್ರಕರಣ ರಾಜಿ ಮಾಡಿಕೊಂಡಲ್ಲಿ ಶೇಕಡ 75 ರಷ್ಟು ನ್ಯಾಯಾಲಯದ ಶುಲ್ಕವನ್ನು ಮರಳಿ ನೀಡಲಾಗುತ್ತದೆ. ಲೋಕ ಅದಾಲತ್ ತೀರ್ಪಿನ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ’ ಎಂದು ವಿವರಿಸಿದರು.

‘ಸೆಪ್ಟೆಂಬರ್‌ನಲ್ಲಿ ನಡೆದ ಲೋಕ ಅದಾಲತ್‍ನಲ್ಲಿ 4,819 ಪ್ರಕರಣಗಳನ್ನು ಗುರುತಿಸಲಾಗಿತ್ತು. ಅವುಗಳ ಪೈಕಿ 1,625 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ 6,63,16,904 ರಾಜಿ ಮಾಡಲಾಗಿದೆ. ಡಿಸೆಂಬರ್‌ 14 ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ 1,819 ಪ್ರಕರಣಗಳನ್ನು ಗುರುತಿಸಲಾಗಿದೆ’ ಎಂದರು.

‘ರೈತರ ಸಾಲ ಮನ್ನಾ ಆಗಿದ ಪ್ರಕರಣಗಳಲ್ಲಿ ರೈತರು ತಮ್ಮ ಸಾಲ ಮನ್ನಾ ಆಗಿದ್ದ ಬಗ್ಗೆ ಮತ್ತು ಉಳಿದ ಬಾಕಿ ಮೊತ್ತ ಪಾವತಿಸುವಲ್ಲಿ ರಿಯಾಯಿತಿ ಪಡೆದುಕೊಳ್ಳುವ ಪ್ರಕರಣಗಳಲ್ಲಿಯೂ ಸಹ ರೈತರು ಭಾಗವಹಿಸಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು. ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿಕೊಂಡರು.

‘ ಚೆಕ್ ಬೌನ್ಸ್ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳ ಪ್ರಕರಣಗಳು, ಕ್ರಿಮಿನಲ್ ಪ್ರಕರಣಗಳು, ವೈವಾಹಿಕ ಮತ್ತು ಇತರ ಸಿವಿಲ್ ಪ್ರಕರಣಗಳನ್ನು ಬಗೆಹರಿಸಲಾಗುವುದು’ ಎಂದು ತಿಳಿಸಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಝರೀನಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ.ಟಿ.ಪಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ, ಉಪಾಧ್ಯಕ್ಷ ಪ್ರಕಾಶ.ವಿ.ಎಂ, ಪ್ರಧಾನ ಕಾರ್ಯದರ್ಶಿ ಧನರಾಜ್ ಬಿರಾದಾರ, ಜಂಟಿ ಕಾರ್ಯದರ್ಶಿ ಅಂಬಾದಾಸ ವಾಗರಾಜ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು