ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿಯದ ಬಸ್‌: ಒಂದೇ ದಿನ ₹48 ಲಕ್ಷ ನಷ್ಟ

ಆರನೇ ವೇತನ ಆಯೋಗದ ಶಿಫಾರಸು ಜಾರಿಗಾಗಿ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ
Last Updated 8 ಏಪ್ರಿಲ್ 2021, 2:52 IST
ಅಕ್ಷರ ಗಾತ್ರ

ಬೀದರ್‌: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಮಾಡಬೇಕು ಎಂದು ಆಗ್ರಹಿಸಿ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಬುಧವಾರ ಮುಷ್ಕರ ನಡೆಸಿದ್ದರಿಂದ ಬಸ್‌ಗಳು ರಸ್ತೆಗಿಳಿಯಲಿಲ್ಲ. ಹೀಗಾಗಿ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.

ಜಿಲ್ಲೆಯ ಸಾರಿಗೆ ಘಟಕಗಳಿಂದ ದೂರದ ಊರುಗಳಿಗೆ ಹೋಗಿರುವ ಬಸ್‌ಗಳು ಮರಳಿಲ್ಲ. ತೆಲಂಗಾಣ ಹಾಗೂ ಮಹಾರಾಷ್ಟ್ರದ ಬಸ್‌ಗಳು ಜಿಲ್ಲೆಯಲ್ಲಿ ಸಂಚರಿಸಿದರೂ ಅವುಗಳ ಸಂಖ್ಯೆ ಕಡಿಮೆ ಇತ್ತು. ಕಲಬುರ್ಗಿ, ಹುಮನಾಬಾದ್‌ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ನಗರ ಸಾರಿಗೆ ಬಸ್‌ಗಳ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಪ್ರಯಾಣಿಕರು
ಮ್ಯಾಕ್ಸಿ ಕ್ಯಾಬ್, ಟಂಟಂ, ಕ್ರೂಸರ್ ವಾಹನಗಳಲ್ಲಿ ಊರುಗಳಿಗೆ ತೆರಳಿದರು. ಸಾರಿಗೆ ನೌಕರರ ಮುಷ್ಕರ ಮಾಹಿತಿ ಇಲ್ಲದೇ ಬಸ್‌ ನಿಲ್ದಾಣಕ್ಕೆ ಬಂದಿದ್ದ ಕೆಲ ಪ್ರಯಾಣಿಕರು ಅವರ ಊರುಗಳಿಗೆ ಹೋಗಲಾಗದೆ ನಿಲ್ದಾಣದಲ್ಲೇ ನಿದ್ರೆಗೆ ಜಾರಿದ್ದರು. ಕೆಲವರು ತಮ್ಮ ಮನೆಗಳಿಗೆ ಮರಳಿ ಹೋದರು. ಕೇಂದ್ರ ಬಸ್‌ ನಿಲ್ದಾಣ ಒಳಗಡೆ ಖಾಸಗಿ ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

‘ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸಿರುವ ಕಾರಣ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಬೀದರ್‌ ವಿಭಾಗಕ್ಕೆ ಒಂದೇ ದಿನದಲ್ಲಿ ಸರಾಸರಿ ₹48 ಲಕ್ಷ ನಷ್ಟವಾಗಿದೆ’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್‌ ವಿಭಾಗೀಯ ನಿಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ತಿಳಿಸಿದ್ದಾರೆ.

‘ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ನಿಗಾ ವಹಿಸಿ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸರ ನೆರವು ಪಡೆದು ಖಾಸಗಿ ಬಸ್‌ಗಳಲ್ಲಿ ಅವರನ್ನು ಕಳಿಸಿಕೊಡಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT