ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಂದು ಜೀವಿಯನ್ನು ಪ್ರೀತಿಸಿ

ಬುದ್ಧ ಧಮ್ಮ ಪ್ರವಚನದಲ್ಲಿ ಪ್ರಜ್ಞಾಶೀಲ ಮಹಾಥೇರೊ ನುಡಿ
Last Updated 23 ಫೆಬ್ರುವರಿ 2019, 13:36 IST
ಅಕ್ಷರ ಗಾತ್ರ

ಬೀದರ್‌: ‘ಯಾರಿಗೂ ಅನ್ಯ ಜೀವಿಯ ಪ್ರಾಣ ತೆಗೆಯುವ ಹಕ್ಕು ಇಲ್ಲ. ನಾವು ನಮ್ಮ ದೇಹ ಹಾಗೂ ಪ್ರಾಣವನ್ನು ಪ್ರೀತಿಸುವ ಹಾಗೆ ಪ್ರಾಣಿಗಳನ್ನೂ ಪ್ರೀತಿಸಬೇಕು’ ಎಂದು ಪ್ರಜ್ಞಾಶೀಲ ಮಹಾಥೇರೊ ನುಡಿದರು.

ನಗರದ ಸಿದ್ಧಾರ್ಥ ಕಾಲೇಜಿನ ಆವರಣದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿರುವ ಬುದ್ಧ ಧಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಜ್ಞ ಮಾಡಿ ಹೋತಗಳನ್ನು ಬಲಿಕೊಡುತ್ತಿದ್ದ ರಾಜ ಬಿಂದುಸಾರನಿಗೆ ಗೌತಮ ಬುದ್ಧ ಪ್ರಾಣದ ಮಹತ್ವವನ್ನು ತಿಳಿ ಹೇಳಿದಾಗ ಆತನಿಗೂ ಜ್ಞಾನೋದಯವಾಯಿತು’ ಎಂದು ತಿಳಿಸಿದರು.

‘ಅರಮನೆಯ ಒಳಗಿದ್ದ ಸಿದ್ಧಾರ್ಥ ಹೊರಗಿನ ಪ್ರಪಂಚವನ್ನು ನೋಡಲು ಬಯಸಿದ್ದ. ನಗರ ಪ್ರದರ್ಶನಕ್ಕೆ ಹೋದಾಗ ಅವನಿಗೆ ವೃದ್ಧ, ರೋಗಿ ಹಾಗೂ ಶವ ನೋಡಿ ಬಹಳ ಬೇಸರವಾಯಿತು. ಮುಪ್ಪು, ರೋಗ, ಸಾವು ಯಾರಿಗೂ ತಪ್ಪಿದ್ದಲ್ಲ ಎನ್ನುವುದು ತಿಳಿಯಿತು. ಸುಖ ಎನ್ನುವುದು ಸುಳ್ಳು ಎನಿಸಿತು. ಹೀಗಾಗಿ ಕಾಡಿನ ದಾರಿ ಹಿಡಿಯಬೇಕಾಯಿತು’ ಎಂದರು.

‘ಸಿದ್ಧಾರ್ಥ ಸನ್ಯಾಸಿಯಾಗಿ ಪ್ರಪಂಚದ ಕಷ್ಟಗಳಿಗೆ ಪರಿಹಾರ ಹುಡುಕಲು ಕಾಡಿನಲ್ಲಿ ತಪಸ್ಸು ಮಾಡಿದ. ಉಪವಾಸ, ಬಳಲಿಕೆಯಿಂದ ಪ್ರಜ್ಞೆ ತಪ್ಪುವಷ್ಟು ದೇಹವನ್ನು ದಂಡಿಸಿದ. ಆರು ವರ್ಷ ಧ್ಯಾನ ಮಾಡಿದ, ಆದರೆ ಜ್ಞಾನೋದಯವಾಗಲಿಲ್ಲ. ದೈಹಿಕ ದಂಡನೆಯಿಂದ ಕೂಡಿದ ತಪಸ್ಸಿನಿಂದ ತನ್ನ ಗುರಿ ಸಾಧನೆಗೆ ಯಾವ ಪ್ರಯೋಜನ ಇಲ್ಲ ಎನ್ನುವುದನ್ನು ಕಂಡುಕೊಂಡ. ಸಿದ್ಧಾರ್ಥನಿಗೆ ಗಯಾಕ್ಕೆ ಬಂದು ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನ ಮಗ್ನನಾದಾಗ ವೈಶಾಖ ಪೂರ್ಣಿಮೆಯ ಜ್ಞಾನೋದಯವಾಯಿತು’ ಎಂದು ತಿಳಿಸಿದರು.

‘ಬುದ್ಧ ದುರಾಸೆಯೇ ದುಃಖಕ್ಕೆ ಮೂಲ ಕಾರಣ ಎನ್ನುವ ಕಟು ಸತ್ಯವನ್ನು ನುಡಿದರು. ತಮ್ಮ ಧ್ಯಾನದಿಂದ, ಜ್ಞಾನದಿಂದ ವೈಜ್ಞಾನಿಕವಾಗಿ, ಆಳವಾಗಿ ಮತ್ತು ವಿಶಾಲವಾಗಿ ಚಿಂತನೆ ನಡೆಸಿ, ನಿಜವಾದ ಸತ್ಯವನ್ನು ಜನರಿಗೆ ತಿಳಿಸಿದರು.
ಮನುಷ್ಯ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಬದುಕಲು ಸರಳ ಮಾರ್ಗವನ್ನು ತೋರಿಸಿದರು’ ಎಂದು ಹೇಳಿದರು.

‘ಆತ್ಮ, ಪರಮಾತ್ಮ ಯಾವುದೂ ಇಲ್ಲ. ಈ ಶರೀರ ನಶ್ವರ ಎಂದು ಹೇಳಿದ ಅವರು ರಾಗ, ದ್ವೇಷ, ಮದ, ಮತ್ಸರ, ಲೋಭಗಳನ್ನು ಬಿಟ್ಟು, ಮೈತ್ರಿ, ಕರುಣೆ, ಉಪೇಕಗಳನ್ನು ಮೈಗೂಡಿಸಿಕೊಂಡು, ಮನುಷ್ಯತ್ವದಿಂದ ಬದುಕಬೇಕು. ಮನುಷ್ಯನಾಗಿ ಮನುಷ್ಯರನ್ನು ಪ್ರೀತಿಯಿಂದ ಕಾಣುವಂತೆ ಉಪದೇಶ ನೀಡಿದರು’ ಎಂದರು.

ಭಂತೆ ಧಮ್ಮ ಕೀರ್ತಿ, ಭಾರತೀಯ ಬೌದ್ಧ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ವೀರಶೆಟ್ಟಿ ದೀನೆ, ರಾಜ್ಯ ಪ್ರತಿನಿಧಿ ರಾಜಪ್ಪ ಗುನ್ನಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಬಡಿಗೇರ, ಪ್ರಧಾನ ಕಾರ್ಯದರ್ಶಿ ಬಾಬು ಆಣದೂರೆ, ತಾಲ್ಲೂಕು ಘಟಕದ ಅಧ್ಯಕ್ಷ ಭೀಮಶಾ ನಾಟಿಕರ್, ಗೋವಿಂದ ಪೂಜಾರಿ, ಅಶೋಕ ಆಲೂರಕರ್, ಧನರಾಜ ಜ್ಯೋತಿ, ಶೇಷರಾವ್ ಬೆಳಕುಣಿಕರ್ ಇದ್ದರು.

ವಿಜಯಲಕ್ಷ್ಮಿ ಸ್ವಾಗತಿಸಿದರು. ರತ್ನಮ್ಮ ಲಾಖೆ ನಿರೂಪಿಸಿದರು. ವಿಜಯಲಕ್ಷ್ಮಿ ಒಂಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT