ಜಿಲ್ಲೆಯಲ್ಲಿ ಮಳೆಯ ಕೊರತೆ

7
ತುಂಬದ ಕೆರೆ, ಕಟ್ಟೆಗಳು: ಹೆಚ್ಚದ ಅಂತರ್ಜಲ ಮಟ್ಟ

ಜಿಲ್ಲೆಯಲ್ಲಿ ಮಳೆಯ ಕೊರತೆ

Published:
Updated:
Deccan Herald

ಬೀದರ್‌: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಆದರೆ, ಬೀದರ್‌ ಜಿಲ್ಲೆ ಮಳೆಯ ಕೊರತೆ ಅನುಭವಿಸುತ್ತಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಬೆಟ್ಟಗುಡ್ಡಗಳು ಕುಸಿಯುತ್ತಿದ್ದರೆ, ಬೀದರ್‌ನಲ್ಲಿ ಕೆರೆ, ಕಟ್ಟೆ, ಬಾವಿಗಳು ತುಂಬುವಷ್ಟೂ ಮಳೆ ಸುರಿದಿಲ್ಲ.

ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 489.30 ಮಿ.ಮೀ ಮಳೆ ಬೀಳಬೇಕಿತ್ತು. ಆದರೆ, 361.33 ಮಿ.ಮೀ ಮಳೆ ಸುರಿದಿದೆ. ಎಂಟು ತಿಂಗಳ ಅವಧಿಯಲ್ಲಿ 28.95 ಮಿ.ಮೀ. ನಷ್ಟು ಮಳೆ ಕೊರತೆಯಾಗಿದೆ.

‘ಜೂನ್‌, ಜುಲೈ ಹಾಗೂ ಆಗಸ್ಟ್‌ನಲ್ಲಿ ವಾಡಿಕೆಯಂತೆ 600 ಮಿ.ಮೀ ಮಳೆಯಾಗಬೇಕಿತ್ತು. ಆದರೆ 20 ವರ್ಷಗಳ ಅವಧಿಯಲ್ಲೇ ಕನಿಷ್ಠ 466 ಮಿ.ಮೀ ಮಳೆಯಾಗಿದೆ. ಇನ್ನೂ 135 ಮಿ.ಮೀ ಮಳೆ ಸುರಿಯಬೇಕಿದೆ’ ಎಂದು ಹವಾಮಾನ ತಜ್ಞ ಬಸವರಾಜ ಬಿರಾದಾರ ವಿವರಿಸುತ್ತಾರೆ.

‘24 ಗಂಟೆಗಳ ಅವಧಿಯಲ್ಲಿ ಸರಾಸರಿ 5 ಮಿ.ಮೀ. ಮಳೆಯಾಗಿದೆ. ನಾಲ್ಕೈದು ದಿನಗಳಿಂದ ಜಿಟಿ ಜಿಟಿ ಮಳೆಯಾಗಿದೆ. ಶನಿವಾರ ಮಳೆ ಬರುವ ನಿರೀಕ್ಷೆ ಇಲ್ಲ. ಆದರೆ ಭಾನುವಾರದಿಂದ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ’ ಹೇಳುತ್ತಾರೆ.

ಬೀದರ್‌ ತಾಲ್ಲೂಕಿನ ಜನವಾಡದಲ್ಲಿ ಶುಕ್ರವಾರ ಬೆಳಿಗ್ಗೆ 30 ಮಿ.ಮೀ ಮಳೆ ದಾಖಲಾಗಿದೆ. ಗುರುವಾರ ಬಸವಕಲ್ಯಾಣದಲ್ಲಿ 34 ಮಿ.ಮೀ ಮಳೆಯಾಗಿದೆ. ಮಳೆ ಕೊರತೆಯಿಂದಾಗಿ ಬಾಡುತ್ತಿದ್ದ ಸೋಯಾ, ಉದ್ದು ಹಾಗೂ ಕಬ್ಬಿಗೆ ಅನುಕೂಲವಾಗಿದೆ. ಮುಂಗಾರಿನ ಆರಂಭದಲ್ಲಿ ಬಿತ್ತನೆ ಮಾಡಿದ ಹೆಸರು ಕಟಾವಿಗೆ ಬಂದಿದೆ.

‘ಜಿಲ್ಲೆಯಲ್ಲಿ ಒಂದು ವಾರದಿಂದ ಮೋಡ ಕವಿದ ವಾತಾವರಣ ಇರುವ ಕಾರಣ ಎಲೆ ತಿನ್ನುವ ಕೀಟ ಬಾಧೆ ಕಂಡು ಬರುವ ಸಾಧ್ಯತೆ ಇದೆ. ರೈತರು ಮುನ್ನೆಚ್ಚರಿಕೆ ವಹಿಸಿ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಹತೋಟಿ ಕ್ರಮಗಳನ್ನು ಅನುಸರಿಸಬೇಕು’ ಎಂದು ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರವಿ ದೇಶಮುಖ ಸಲಹೆ ನೀಡಿದ್ದಾರೆ.

‘ಜಿಲ್ಲೆಗೆ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ 300 ಕಂಬೈಂಡ್‌ ಹಾರ್ವೆಸ್ಟರ್ ಯಂತ್ರಗಳು ಬಂದಿವೆ. ಒಂದು ಎಕರೆಗೆ ₹ 1,200 ಬಾಡಿಗೆ ಪಡೆಯಲಾಗುತ್ತದೆ. ಮಳೆ ಬಂದರೂ ಒಂದು ಗಂಟೆಯಲ್ಲಿ 2.5 ಎಕರೆ ಕಟಾವು ಮಾಡಬಹುದಾಗಿದೆ. ಈಗಾಗಲೇ ಬೀದರ್‌ ಹಾಗೂ ಹುಮನಾಬಾದ್‌ ತಾಲ್ಲೂಕಿನಲ್ಲಿ ಹೆಸರು ಕಟಾವು ಮಾಡಲಾಗಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ.

‘ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿರುವ ಕಾರಣ ಕೊಳವೆಬಾವಿ ಹಾಗೂ ತೆರೆದ ಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆ ಇದೆ. ಅಂತರ್ಜಲ ಮಟ್ಟ ಹೆಚ್ಚಳವಾಗುವಷ್ಟು ಮಳೆ ಸುರಿದಿಲ್ಲ. ಆದರೆ ಜಿಲ್ಲೆಯಲ್ಲಿ ಮಳೆ ಕಡಿಮೆ ಇದ್ದರೂ ಬೆಳೆ ಚೆನ್ನಾಗಿ ಬಂದಿದೆ’ ಎಂದು ಹೇಳುತ್ತಾರೆ ಅವರು.

‘ಎರಡೂವರೆ ತಿಂಗಳಲ್ಲಿ ಬೀದರ್‌ ತಾಲ್ಲೂಕಿನ ಹೊನ್ನಿಕೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಹರಿದು ಹೋಗುವಷ್ಟು ಜೋರಾದ ಮಳೆ ಬಂದಿಲ್ಲ. ಬಾವಿಗಳಲ್ಲೂ ನೀರು ಕಡಿಮೆ ಇದೆ. ಕೃಷಿಕರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ’ ಎಂದು ಪ್ರಗತಿಪರ ರೈತ ರವೀಂದ್ರ ಪಾಟೀಲ ಹೇಳುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !