ಪಾಪನಾಶ ದೇಗುಲಕ್ಕೆ ಹರಿದು ಬಂದ ಭಕ್ತ ಸಾಗರ

ಬುಧವಾರ, ಮಾರ್ಚ್ 20, 2019
26 °C
ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಭಕ್ತಿಪ್ರಿಯನಿಗೆ ವಿಶೇಷ ಪೂಜೆ

ಪಾಪನಾಶ ದೇಗುಲಕ್ಕೆ ಹರಿದು ಬಂದ ಭಕ್ತ ಸಾಗರ

Published:
Updated:
Prajavani

ಬೀದರ್: ಮಹಾಶಿವರಾತ್ರಿ ಪ್ರಯುಕ್ತ ಸೋಮವಾರ ಜಿಲ್ಲೆಯ ಶಿವ ದೇಗುಲಗಳಲ್ಲಿ ಭಕ್ತರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ದಾನ, ಅನ್ನದಾಸೋಹ ಮತ್ತಿತರ ಕೈಂಕರ್ಯಗಳಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.

ನಗರದ ಪಾಪನಾಶ ದೇಗುಲಕ್ಕೆ ಭಕ್ತರ ದಂಡೇ ಹರಿದು ಬಂದಿತು. ಶಿವನಗರದ ಪಾಪನಾಶ ಮಹಾದ್ವಾರದಿಂದ ಮಂದಿರದವರೆಗಿನ ರಸ್ತೆಯಲ್ಲಿ ಜನ ದಟ್ಟಣೆ ಕಂಡು ಬಂದಿತು. ನೆರೆಯ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಭಕ್ತರು ಉದ್ಭವಲಿಂಗದ ದರ್ಶನ ಪಡೆದರು.

ವಾಹನದಲ್ಲಿ ಬಂದವರು ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಂಭಾಗದ ಖಾಲಿ ಜಾಗ, ಉದಗಿರ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಗೆ ವಾಹನ ನಿಲ್ಲಿಸಿ ಮಂದಿರದವರೆಗೆ ಕಾಲ್ನಡಿಗೆಯಲ್ಲಿ ಸಾಗಿ ದೇವರ ದರ್ಶನ ಪಡೆದರು.

ಕೆಲವರು ಮನೆಯಲ್ಲಿ ಸ್ನಾನ ಮಾಡಿ ಮಡಿಯಲ್ಲಿ ಮಂದಿರವರೆಗೂ ಕಾಲ್ನಡಿಗೆಯಲ್ಲಿ ಬಂದು ಹರಕೆ ತೀರಿಸಿದರು. ಇನ್ನೂ ಕೆಲವರು ದೀರ್ಘದಂಡ ನಮಸ್ಕಾರ ಹಾಕಿದರು. ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಿ ಬಿಲ್ವಪತ್ರೆ, ಹೂವು ಅರ್ಪಿಸಿದರು.

ಮಂದಿರದ ಆವರಣದಲ್ಲಿ ಜನದಟ್ಟಣೆ ನಿಯಂತ್ರಿಸಲು ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಭಕ್ತರಿಗೆ ಬಿಸಿಲಿನಿಂದ ರಕ್ಷಣೆ ಒದಗಿಸಲು ಪೆಂಡಾಲ್‌ ಹಾಕಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗದ ದರ್ಶನ ಪಡೆದರು. ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದವರು ₹ 50 ಪಾವತಿಸಿ ವಿಶೇಷ ದರ್ಶನ ಪಡೆದರು.

ತೆಂಗಿನಕಾಯಿ, ಕರ್ಪೂರ, ಊದುಬತ್ತಿ, ವಿಭೂತಿ, ಹೂವು, ಬಿಲ್ವಪತ್ರೆ, ಬೆಂಡು ಬತಾಸು, ಅಳ್ಳು, ಬರ್ಫಿ, ಖವಾ, ಮಕ್ಕಳ ಆಟಿಕೆ, ತಂಪುಪಾನೀಯ, ಹಣ್ಣು ಮೊದಲಾದ ತಾತ್ಕಾಲಿಕ ಅಂಗಡಿಗಳು ತೆರೆದುಕೊಂಡಿದ್ದವು. ಭಕ್ತರು ಮಳಿಗೆಗಳಿಗೆ ತೆರಳಿ ತಮಗೆ ಬೇಕಿರುವ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಮಂದಿರದ ಪರಿಸರದಲ್ಲಿ ಜಾತ್ರೆ ವಾತಾವರಣ ನಿರ್ಮಾಣವಾಗಿತ್ತು.

ಮಧ್ಯಾಹ್ನ ಬಿಸಿಲು ಇದ್ದರೂ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆ ಕಡಿಮೆ ಆಗಿರಲಿಲ್ಲ. ಬಿಸಿಲಿನಿಂದಾಗಿ ಆಯಾಸಗೊಂಡಿದ್ದ ಭಕ್ತರು ಶಾಮಿಯಾನ ಕೆಳಗೆ ಕುಳಿತು ವಿಶ್ರಾಂತಿ ಪಡೆದರು. ವಿವಿಧ ಸಂಘ ಸಂಸ್ಥೆಗಳು ಭಕ್ತರಿಗೆ ಅನ್ನ ಪ್ರಸಾದ, (ಬಾಳೆಹಣ್ಣು,) ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದವು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರು ಟೆಂಟ್ ಹಾಕಿ ಬೃಹತ್‌ ಶಿವಲಿಂಗವನ್ನು ಇರಿಸಿದ್ದರು.

ಪ್ರಸಾದ ನಿಲಯ: ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿರುವ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಿತು.

ಬಸವರಾಜ ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !