ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ

ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಸಲಹೆ
Last Updated 1 ಅಕ್ಟೋಬರ್ 2022, 12:43 IST
ಅಕ್ಷರ ಗಾತ್ರ

ಬೀದರ್‌: ‘ವೈಯಕ್ತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ನಮ್ಮ ಪರಿಸರದಲ್ಲಿ ಅಕ್ರಮ ವ್ಯವಹಾರಗಳು ನಡೆಯದಂತೆ ಎಚ್ಚರಿಕೆ ವಹಿಸಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕು’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ.ಎನ್‍ ಹೇಳಿದರು.

ನಗರದ ಮೈಲೂರ ಪ್ರದೇಶದ ವಡ್ಡರ ಕಾಲೊನಿಯಲ್ಲಿ ಅಬಕಾರಿ ಇಲಾಖೆ, ಪೊಲೀಸ್‍ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಕಳ್ಳಬಟ್ಟಿ, ನಕಲಿ ಮದ್ಯ ಹಾಗೂ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೈಲೂರಿನಲ್ಲಿ ಕೆಲ ಅಪಾಯಕಾರಿ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿತ್ತು. ನೆರೆ ರಾಜ್ಯದ ಕೆಲವರು ಬೀದರ್‌ನಲ್ಲಿ ಅಕ್ರಮಗಳನ್ನು ನಡೆಸಿದ್ದರು. ಮಾದಕ ದ್ರವ್ಯಗಳ ಮಾರಾಟಕ್ಕೆ ಸ್ಥಳೀಯರನ್ನು ಗ್ರಾಹಕರನ್ನಾಗಿ ಮಾಡಿಕೊಂಡಿದ್ದರು. ಅದನ್ನು ಪತ್ತೆ ಹಚ್ಚಿ ಆರೋಗ್ಯಕ್ಕೆ ಹಾನಿಕರವಾದ ಹಾಗೂ ಅಪಾಯಕಾರಿ ದ್ರವ್ಯ ಉತ್ಪಾದಿಸುವವರನ್ನು ಮಟ್ಟ ಹಾಕಲಾಗಿದೆ. ಸಾರ್ವಜನಿಕರ ಸಹಕಾರದಿಂದ ಮಾತ್ರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ’ ಎಂದು ತಿಳಿಸಿದರು.

ಹಿರಿಯ ಸಿವಿಲ್‍ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಎಸ್‍.ಕೆ ಕನಕಟ್ಟಿ ಮಾತನಾಡಿ, ‘ಪ್ರತಿಯೊಬ್ಬರೂ ತಮ್ಮ ಪರಿಸರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

ಬೀದರ್‌ ಡಿವೈಎಸ್‌ಪಿ ಸತೀಶ ಮಾತನಾಡಿ, ‘ಬಡಾವಣೆಯಲ್ಲಿ ಯಾವುದೇ ತರಹದ ಅಕ್ರಮಗಳಿಗೆ ಆಸ್ಪದ ನೀಡಬಾರದು. ಯಾವುದೇ ವ್ಯಕ್ತಿಗಳ ಚಟುವಟಿಕೆ ಬಗ್ಗೆ ಅನುಮಾನ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದರು.

ಬ್ರಿಮ್ಸ್‌ನ ಹಿರಿಯ ವೈದ್ಯಾಧಿಕಾರಿ ಸತೀಶ್‍ ಮುಡಬಿ ಮಾತನಾಡಿ, ‘ನಕಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೇಹದ ಮೇಲೆ ದುಷ್ಪರಿಣಾಮ ಆಗುತ್ತದೆ. ಆದ್ದರಿಂದ ವ್ಯಸನಗಳಿಂದಲೇ ದೂರ ಇರಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ಅಮಲ್‍ ಶರೀಫ್‍ ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT