ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಸ್ಮರಿಸುವಂಥ ಸಾಧನೆ ಮಾಡಿ: ಸ್ವಾಮಿ ಜ್ಯೋತಿರ್ಮಯಾನಂದಜಿ

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದಜಿ ಹೇಳಿಕೆ
Last Updated 12 ಜನವರಿ 2022, 14:36 IST
ಅಕ್ಷರ ಗಾತ್ರ

ಬೀದರ್: ‘ಯಾರು ಇತರರಿಗಾಗಿ ಬದುಕಿದ್ದಾರೋ ಅವರೇ ಶ್ರೇಷ್ಠರಾಗಿ ಇತಿಹಾಸದಲ್ಲಿ ಉಳಿಯುತ್ತಾರೆ. ಮತ್ತೊಬ್ಬರಿಗಾಗಿ ಜೀವಿಸಿ ಜೀವನ ಅನುಭವಿಸುವುದು ದೊಡ್ಡದು. ಅಗಲಿಕೆ ನಂತರವೂ ಜಗತ್ತು ನಮ್ಮನ್ನು ಸ್ಮರಿಸುವಂಥ ಸಾಧನೆ ಮಾಡಬೇಕು’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದಜಿ ಹೇಳಿದರು.

ಇಲ್ಲಿಯ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಬುಧವಾರ ವಿವೇಕಾನಂದ ಅಕಾಡೆಮಿ ಫಾರ್ ಎಜುಕೇಷನಲ್ ಎಕ್ಸ್‌ಲೆನ್ಸ್ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸಿಇಟಿ ಸಿದ್ಧತೆಗಾಗಿ ಶೈಕ್ಷಣಿಕ ಮನೋವಿಜ್ಞಾನ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

‘ನಿನ್ನಲ್ಲಿ ಇರುವ ಶಕ್ತಿ ಜಾಗೃತಗೊಳಿಸಿದಾಗ ನೀನು ಮಹಾದೇವನಾಗುವೆ. ಬದುಕಿನಲ್ಲಿ ಎಷ್ಟೇ ಬಾರಿ ಸೋತರೂ ಗೆದ್ದೆ ಗೆಲ್ಲುತ್ತೇನೆಂಬ ವಿಶ್ವಾಸವಿದ್ದಾಗ ಸೋಲು ಸನಿಹವೇ ಬರದು. ಪ್ರತಿಯೊಬ್ಬರಲ್ಲಿ ಅಗಾಧ ಶಕ್ತಿ ಅಡಗಿದೆ. ಅದನ್ನು ಅರಿತು ಜಾಗೃತಿಗೊಳಿಸಬೇಕಿದೆ’ ಎಂದರು.

‘ವ್ಯಕ್ತಿಯ ಜವಾಬ್ದಾರಿ ಬೆಳೆಯದಿದ್ದರೆ ಆತನ ಸ್ವಾತಂತ್ರ್ಯವೂ ಕಳೆದುಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ವಿವೇಕಾನಂದರ ತತ್ವ, ಆದರ್ಶ, ಚಿಂತನೆಗಳಿಂದ ಯಾರು ಬೇಕಾದರೂ ಶ್ರೇಷ್ಠತೆಯಡೆಗೆ ಸಾಗಬಹುದು’ ಎಂದು ಹೇಳಿದರು.

ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ‘ಸ್ವಾಮಿ ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ. ವ್ಯಕ್ತಿಗೆ ಸಾಧನೆಯತ್ತ ಕೊಂಡೊಯ್ಯುವ ಸರಳ ಮಾರ್ಗ ಇದರಲ್ಲಿವೆ. ವಿದ್ಯಾರ್ಥಿಗಳು ವಿವೇಕಾನಂದರ ಬಗ್ಗೆ ತಿಳಿದುಕೊಂಡರೆ ಜೀವನದಲ್ಲಿ ಬಹುದೊಡ್ಡ ಸಾಧನೆ ಮಾಡಲು ಸಾಧ್ಯವಿದೆ’ ಎಂದರು.

ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಮಾತನಾಡಿ, ‘ಕೆಲಸದ ಒತ್ತಡ ನಿವಾರಣೆ ಹಾಗೂ ಮಾನಸಿಕ ನೆಮ್ಮದಿ, ಜ್ಞಾನಕ್ಕಾಗಿ ಬಹಳಷ್ಟು ಉನ್ನತ ಅಧಿಕಾರಿಗಳು ಇಲ್ಲಿನ ಆಶ್ರಮಕ್ಕೆ ಬರುತ್ತಾರೆ’ ಎಂದು ಹೇಳಿದರು.

‘ಯುವಕರು ವಿವೇಕಾನಂದ ಆಶ್ರಮ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು, ವಿವಕಾನಂದರ ಸಾಹಿತ್ಯ ಓದಲು ಮುಂದಾಗಬೇಕು. ಆಶ್ರಮದ ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕಗಳಿವೆ. ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಸಂಜುಕುಮಾರ ಮಾನೂರೆ ಮಾತನಾಡಿದರು. ಶೈಕ್ಷಣಿಕ ಚಿಂತಕ ಇಮಾಮ್‍ಸಾಬ್ ಮುಲ್ತಾನಿ ಕಾರ್ಯಾಗಾರ ನಡೆಸಿಕೊಟ್ಟರು. ವಿವೇಕ ಸಾಠೆ ಸ್ವಾಗತಿಸಿದರು. ಮಾಣಿಕರಾವ ಪಾಟೀಲ ನಿರೂಪಣೆ ಮಾಡಿದರು.

ಮೂರು ತಿಂಗಳು ಕಾರ್ಯಾಗಾರ

ಶಿಕ್ಷಕರ ನೇಮಕಕ್ಕೆ ಸಿಇಟಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳಿಗಾಗಿ ಶೈಕ್ಷಣಿಕ ಮನೋವಿಜ್ಞಾನ ಕುರಿತ ಉಚಿತ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಜಿಲ್ಲೆಯ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮೂರು ತಿಂಗಳು ಕಾರ್ಯಾಗಾರ ನಡೆಯಲಿದೆ. ಮೊದಲ ದಿನ ಶೈಕ್ಷಣಿಕ ಚಿಂತಕ ಇಮಾಮಸಾಬ್ ಮುಲ್ತಾನಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.
ಸಿಇಟಿ ಪರೀಕ್ಷೆ ಬರೆಯುವ ಆಸಕ್ತರು ತರಬೇತಿಯಲ್ಲಿ ಪಾಲ್ಗೊಳ್ಳಲು 9448036608, 9449274246, 08482-224666ಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT