ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಮ್ಮಗೆ ಟಿಕೆಟ್‌ ಕಾಂಗ್ರೆಸ್‌ನಲ್ಲಿ ಅಸಮಾಧಾನ

Last Updated 19 ಮಾರ್ಚ್ 2021, 16:42 IST
ಅಕ್ಷರ ಗಾತ್ರ

ಬೀದರ್‌: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್‌ ಟಿಕೆಟ್‌ ಬಿ.ನಾರಾಯಣರಾವ್ ಪತ್ನಿ ಮಲ್ಲಮ್ಮ ಅವರಿಗೆ ಘೋಷಣೆ ಮಾಡಿದ ನಂತರ ಬಸವಕಲ್ಯಾಣ ಬ್ಲಾಕ್‌ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿ.ನಾರಾಯಣರಾವ್ ಅವರ ಬೆಂಬಲಿಗರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮಲ್ಲಮ್ಮ ಅವರು ಬೆಂಗಳೂರಿನಲ್ಲೇ ಬಹುತೇಕ ದಿನಗಳನ್ನು ಕಳೆದಿದ್ದಾರೆ. ಕ್ಷೇತ್ರದ ಜನತೆಯೊಂದಿಗೆ ಸಂಪರ್ಕ ಹೊಂದಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಮಲ್ಲಮ್ಮ ಅವರಿಗೆ ಟಿಕೆಟ್‌ ಕೊಟ್ಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ. ನಾರಾಯಣರಾವ್‌ ಬೆಂಬಲಿಗರು ಎನ್ನಲಾದ ಕೆಲವರು ಶುಕ್ರವಾರ ಅಜ್ಞಾತ ಸ್ಥಳದಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು. ಮಲ್ಲಮ್ಮ ಅವರಿಗೆ ಪಕ್ಷದ ಬಿ ಫಾರಂ ಕೊಡುವುದಾದರೆ ಬ್ಲಾಕ್‌ ಕಾಂಗ್ರೆಸ್‌ಗೆ ರಾಜೀನಾಮೆ ಕೊಡುವುದೇ ಲೇಸು ಎಂದು ಆವೇಶಭರಿತವಾಗಿ ಮಾತನಾಡಿರುವುದು ಗುಟ್ಟಾಗಿ ಉಳಿದಿಲ್ಲ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಹಾಗೂ ಬೀದರ್‌ ಶಾಸಕ ರಹೀಂ ಖಾನ್‌ ಅವರು ಮಲ್ಲಮ್ಮ ಅವರನ್ನು ಗೆಲ್ಲಿಸಿ ತರುವ ಭರವಸೆ ನೀಡಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್‌ ನೀಡಿದೆ ಎನ್ನಲಾಗಿದೆ. ಆದರೆ, ಮುಖಂಡರ ನಿರ್ಧಾರ ಕಾರ್ಯಕರ್ತರಲ್ಲಿ ತಳಮಳ ಉಂಟು ಮಾಡಿದೆ.

ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಶುಕ್ರವಾರ ದಿನವಿಡೀ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಅವರ ಹೆಸರು ಕೇಳಿಬಂತು. ಸೂರ್ಯಕಾಂತ ಅಥವಾ ಮಲ್ಲಿಕಾರ್ಜುನ ಖೂಬಾ ಅವರಿಗೆ ಟಿಕೆಟ್‌ ದೊರೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ವಾಟ್ಸ್ಆ್ಯಪ್‌ನಲ್ಲೂ ಈ ಕುರಿತು ಸಂದೇಶಗಳು ಹರಿದಾಡುತ್ತಿವೆ.

‘ಬಿಜೆಪಿ ಟಿಕೆಟ್‌ ಪಡೆಯಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದೇನೆ. ಪಕ್ಷದ ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪಕ್ಷ ಕೈಬಿಡುವುದಿಲ್ಲ ಎನ್ನುವ ವಿಶ್ವಾಸ ಇದೆ. ಬೇರೆಯವರಿಗೆ ಟಿಕೆಟ್‌ ಸಿಕ್ಕರೂ ಗೆಲುವಿಗೆ ಶ್ರಮಿಸುವೆ’ ಎಂದು ಬಿಜೆಪಿ ಮುಖಂಡ ಸೂರ್ಯಕಾಂತ ತಿಳಿಸಿದರು.

ಎನ್‌ಸಿಪಿ ಖಾತೆ ತೆರೆಯಲು ಸಿದ್ಧತೆ: ಮಾಜಿ ಶಾಸಕ ಎಂ.ಜಿ.ಮುಳೆ ಅವರು ರಾಷ್ಟ್ರವಾದಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಎನ್‌ಸಿಪಿ ವರಿಷ್ಠ ಶರದ್ ಪವಾರ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಬಸವಕಲ್ಯಾಣದಲ್ಲಿ ಎನ್‌ಸಿಪಿ ಜಯ ಸಾಧಿಸಿದರೆ ಕರ್ನಾಟಕದಲ್ಲಿ ಮರಾಠರು ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಬರುವ ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಶರದ್‌ ಪವಾರ್ ಇದ್ದಾರೆ.

‘ಕಾಂಗ್ರೆಸ್‌ ಹಾಗೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿವೆ. ಬಿಜೆಪಿಯಿಂದ ಅಭ್ಯರ್ಥಿ ಘೋಷಣೆಯಾಗಬೇಕಿದೆ. ಮರಾಠ ಸಮುದಾಯ ಹಾಗೂ ಬೆಂಬಲಿಗರ ಅಭಿಪ್ರಾಯ ಪಡೆದ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇನೆ’ ಎಂದು ಎಂ.ಜಿ.ಮುಳೆ ತಿಳಿಸಿದ್ದಾರೆ.

‘ಬಸವಕಲ್ಯಾಣದ ಮತದಾರರು ಪಕ್ಷಕ್ಕಿಂತ ಜಾತಿಗೆ ಹೆಚ್ಚು ಮಹತ್ವ ಕೊಡುತ್ತಾರೆ. ಇದೇ ಕಾರಣ ಹಿಂದಿನ ಅನೇಕ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಗೆದ್ದಿಲ್ಲ. ಲಿಂಗಾಯತರು, ಮರಾಠರು, ಮುಸ್ಲಿಮರು ಹಾಗೂ ಪರಿಶಿಷ್ಟರ ಮತಗಳೇ ಇಲ್ಲಿ ನಿರ್ಣಾಯಕ’ ಎಂದು ಹೇಳಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಶುಕ್ರವಾರ ಅಧಿಕೃತವಾಗಿ ಪ್ರಚಾರ ಆರಂಭಿಸಿದರು. ಮುಸ್ಲಿಮರು ಅಪಾರ ಸಂಖ್ಯೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT