ಸೋಮವಾರ, ಮೇ 23, 2022
21 °C
ಅಭಿನಂದನಾ ಸಮಾರಂಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಆರೋಪ

‘ಬಿಜೆಪಿ ಸರ್ಕಾರದಲ್ಲಿ ಎಲ್ಲದಕ್ಕೂ ದರ ನಿಗದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎಲ್ಲದಕ್ಕೂ ದರ ನಿಗದಿ ಮಾಡಿದೆ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದರು.

ಪಟ್ಟಣದ ಹುಮನಾಬಾದ್ ರಸ್ತೆಯ ಪ್ರಯಾಗ್ ಫಂಕ್ಷನ್ ಹಾಲ್‍ನಲ್ಲಿ ಕಾಂಗ್ರೆಸ್ ಪಕ್ಷದ ತಾಲ್ಲೂಕು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಲು ನೂರಾರು ಕೋಟಿ ರೂಪಾಯಿ ನೀಡಬೇಕಾಗುತ್ತದೆ ಎಂದು ಅವರದ್ದೆ ಪಕ್ಷದ ಶಾಸಕರು ಹೇಳುತ್ತಿದ್ದಾರೆ. ಮಠ ಮಾನ್ಯಗಳಿಗೂ ಅನುದಾನ ನೀಡಲು ಶೇ 30 ರಷ್ಟು ಮತ್ತು ಗುತ್ತಿಗೆದಾರರ ಕೆಲಸಕ್ಕೆ ಶೇ 40 ರಷ್ಟು ಕಮಿಷನ್ ಪಡೆಯುತ್ತಿರುವ ಬಗ್ಗೆ ಬಲವಾದ ಆರೋಪ ಕೇಳಿ ಬರುತ್ತಿದೆ. ಹೀಗಾದರೇ ರಾಜ್ಯದ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಇರುವ ಸಮಸ್ಯೆಗಳನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟು 371(ಜೆ) ಕಾಯ್ದೆ ತಿದ್ದುಪಡಿ ತಂದಿದ್ದರ ಪರಿಣಾಮ ಈ ಭಾಗದ ಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸಿಗುತ್ತಿದೆ ಎಂದರು.

ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನರಿಗೆ ಏನು ಕೊಡುಗೆ ನೀಡಿದೆ?. ನರೇಗಾದಡಿ ಕೇವಲ 49 ದಿನ ಕೆಲಸ ನೀಡಲಾಗುತ್ತಿದೆ. ಈ ಯೋಜನೆಗೆ ಈ ಬಾರಿಯ ಬಜೆಟ್‍ನಲ್ಲಿ ಕೇವಲ ₹77 ಸಾವಿರ ಕೋಟಿ ಮೀಸಲಿಟ್ಟು ಅರ್ಧದಷ್ಟು ಅನುದಾನ ಕಡಿತಗೊಳಿಸಲಾಗಿದೆ ಎಂದು ಹೇಳಿದರು.

ಬೀದರ್ ಜಿಲ್ಲೆ ಅದು ಶಾಸಕ ಖಂಡ್ರೆ ಪ್ರತಿನಿಧಿಸುವ ಭಾಲ್ಕಿ ತಾಲ್ಲೂಕಿನ ವರವಟ್ಟಿ ನನ್ನ ಹುಟ್ಟೂರು ಆಗಿರುವುದು ಹೆಮ್ಮೆ ಇದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ತವರಿನ ಅಭಿಮಾನ ಇದ್ದೆ ಇರುತ್ತದೆ. ಜತೆಗೆ ನಾನು ಪ್ರತಿನಿಧಿಸುವ ಗುರಮಠಕಲ್, ಕಲಬುರಗಿ ಕ್ಷೇತ್ರದ ಬಗ್ಗೆಯೂ ಅಭಿಮಾನ ಕಾಳಜಿ ಇದೆ ಎಂದು ಖರ್ಗೆ ತಿಳಿಸಿದರು.

ಬೀದರ್ ಶಾಸಕ ರಹೀಂಖಾನ್, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಅರವಿಂದ ಅರಳಿ, ಮುಖಂಡರಾದ ಶರಣು ಮೋದಿ, ಮಾಲಾ ನಾರಾಯಣರಾವ್, ಕಾಂಗ್ರೆಸ್ ಕಲಬುರಗಿ ಜಿಲ್ಲಾ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಪುಂಡಲೀಕ ರಾವ್, ಬಸವರಾಜ ಬುಳ್ಳಾ, ಮೀನಾಕ್ಷಿ ಸಂಗ್ರಾಮ, ಗೀತಾ ಚಿದ್ರಿ, ಅಮೃತರಾವ್ ಚಿಮಕೋಡೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಮಾಶೆಟ್ಟೆ, ಮಲ್ಲಿಕಾರ್ಜುನ ಪಾಟೀಲ ಮುಗನೂರ್, ದತ್ತಾತ್ರಿ ಮೂಲಗೆ, ಆನಂದ ದೇವಪ್ಪ, ಶಿವರಾಜ ಹಾಸನಕರ್, ವಿಲಾಸ ಮೋರೆ, ಶಂಕರ ದೊಡ್ಡಿ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ನಗರ ಘಟಕದ ಅಧ್ಯಕ್ಷ ಅಬ್ದುಲ್ ನಸೀರ್ ಸೇರಿದಂತೆ ಹಲವರು ಇದ್ದರು. ಕಾಂಗ್ರೆಸ್ ತಾಲ್ಲೂಕು ಸಮಿತಿ ಅಧ್ಯಕ್ಷ ಹಣಮಂತರಾವ್ ಚವ್ಹಾಣ್ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.