7

ಇರಾನಿಗಲ್ಲಿಯ ಯುವಕನ ಅಪಹರಣ

Published:
Updated:
ಬೀದರ್‌ನ ಇರಾನಿ ಗಲ್ಲಿಯಲ್ಲಿ ರಿವಾಲ್ವರ್‌ನಿಂದ ಹಾರಿಸಲಾಗಿದೆ ಎನ್ನಲಾದ ಬುಲೆಟ್‌ನ್ನು ಪೊಲೀಸರು ಮಂಗಳವಾರ ಶೋಧಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಇದ್ದಾರೆ

ಬೀದರ್: ನಂಬರ್‌ ಪ್ಲೇಟ್‌ ಇಲ್ಲದ ಎರಡು ಇನ್ನೋವಾ ಕಾರುಗಳಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಮಂಗಳವಾರ ಇಲ್ಲಿಯ ಇರಾನಿ ಗಲ್ಲಿಯ ಯುವಕನನ್ನು ಅಪಹರಿಸಿಕೊಂಡು ಹೋಗಿದ್ದಾರೆ.

ಅಫ್ರೇಜಿ(20) ಅಪಹರಣಕ್ಕೆ ಒಳಗಾದ ಯುವಕ. ಅಫ್ರೇಜಿ ಸೋಮವಾರ ಸಂಜೆ 6.15ಕ್ಕೆ ಮುಂಬೈನಿಂದ ಹೊರಟು ಮಂಗಳವಾರ ಬೆಳಿಗ್ಗೆ ವಿಆರ್‌ಎಲ್‌ ಬಸ್‌ನಲ್ಲಿ ಬೀದರ್‌ಗೆ ಬಂದಿದ್ದ. ಮನೆಗೆ ಹೋಗುವಷ್ಟರಲ್ಲಿ ಎರಡು ಇನ್ನೋವಾ ಕಾರಿನಿಂದ ಕೆಳಗಿಳಿದ ನಾಲ್ವರು ಅಫ್ರೇಜಿಯನ್ನು ಎಳೆದು ಒಯ್ದಿದ್ದಾರೆ. ಯುವಕನ ಸಂಬಂಧಿಕರು ಚೀನಿ ಫಾಸ್ಟ್‌ ಫುಡ್‌ ಅಂಗಡಿಯ ಸಮೀಪ ತಡೆಯಲು ಯತ್ನಿಸಿದಾಗ ಅಪಹರಣಕಾರರು ಪಿಸ್ತೂಲ್‌ ತೋರಿಸಿದ್ದಾರೆ ಎನ್ನಲಾಗಿದೆ.

ಅಪಹರಣಕಾರರು ಹಾಗೂ ಇರಾನಿಗಲ್ಲಿಯ ನಿವಾಸಿಗಳ ಮಧ್ಯೆ ಬಹಳ ಹೊತ್ತಿನ ವರೆಗೆ ಜಟಾಪಟಿ ನಡೆದಿದೆ. ಇದೇ ಹೊತ್ತಿನಲ್ಲಿ ಜೋರಾದ ಶಬ್ದ ಕೇಳಿ ಅಲ್ಲಿ ನೆರೆದಿದ್ದ ಜನ ಆತಂಕ ವ್ಯಕ್ತಪಡಿಸಿದರು. ಗುಂಡು ಹಾರಿಸಲಾಗಿದೆ ಎನ್ನುವ ಸುದ್ದಿಯೂ ಹರಡಿತು.
ಚಹಾ ಅಂಗಡಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಮೊಬೈಲ್‌ ಕ್ಯಾಮೆರಾದಲ್ಲಿ ದೃಶ್ಯ ಸೆರೆ ಹಿಡಿದಿದ್ದು, ಅಪಹರಣಕಾರ ಕೈಯಲ್ಲಿ ಪಿಸ್ತೂಲ್‌ ಹಿಡಿದಿರುವುದು ಕಂಡು ಬಂದಿದೆ.

ಸುದ್ದಿ ತಿಳಿದ ತಕ್ಷಣ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು, ಗಾಂಧಿಗಂಜ್‌ ಠಾಣೆಯ ಪಿಎಸ್‌ಐ ಬಸವರಾಜ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ ಅಪಹರಣಕಾರರು ಪರಾರಿಯಾಗಿದ್ದರು.  ‘ಮುಂಬೈನಿಂದ ಬಂದ ವ್ಯಕ್ತಿಗಳು ಇನ್ನೋವಾ ಕಾರಿನಲ್ಲಿ ಬೀದರ್‌ನ ಯುವಕನನ್ನು ಒಯ್ದಿದ್ದಾರೆ. ರೌಡಿಗಳು ಇದ್ದರೋ, ತನಿಖಾ ದಳದ ಸಿಬ್ಬಂದಿ ಇದ್ದಾರೋ ಸ್ಪಷ್ಟವಾಗಿ ತಿಳಿದಿಲ್ಲ. ಅಫ್ರೇಜಿ ಕುಟುಂಬದವರು ದೂರು ಕೊಟ್ಟ ಮೇಲೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಇರಾನಿಗಲ್ಲಿಯಲ್ಲಿ ಗುಂಡು ಹಾರಿಸಿರುವ ಮಾಹಿತಿ ಇಲ್ಲ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !