ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರ ಬದುಕು ಮುಳುಗಿಸಿದ ಮಾಂಜ್ರಾ

ಕಡಿಮೆಯಾಗದ ನದಿ ನೀರಿನ ಹರಿವು: ಕೊಚ್ಚಿ ಹೋದ ಸೋಯಾಬೀನ್ ಬೆಳೆ
Last Updated 18 ಅಕ್ಟೋಬರ್ 2020, 4:05 IST
ಅಕ್ಷರ ಗಾತ್ರ

ಔರಾದ್: ಗುರುವಾರ ಸಂಜೆಯಿಂದ ಮಳೆ ಬಿಡುವು ಕೊಟ್ಟರೂ ಮಾಂಜ್ರಾ ನದಿ ಉಕ್ಕಿ ಹರಿಯುತ್ತಿರುವುದು ರೈತರ ನಿದ್ದೆಗೆಡಿಸಿದೆ.

ಜಿಲ್ಲೆಯ ಕಾರಂಜಾ ಹಾಗೂ ಪಕ್ಕದ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೆಚ್ಚುವರಿ ನೀರು ಹರಿ ಬಿಡುತ್ತಿರುವುದರಿಂದ ಶುಕ್ರವಾರ ಮತ್ತು ಶನಿವಾರವೂ ಮಾಂಜ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಇದರಿಂದ ನದಿ ಪಾತ್ರದ ಸಂಗಮ, ಹೆಡಗಾಪುರ, ನಿಟ್ಟೂರ, ಬಳತ, ಹಾಲಹಳ್ಳಿ, ಕೌಠಾ, ಮಣಿಗೆಂಪುರ, ಬಾಬಳಿ, ಬಾಚೆಪಳ್ಳಿ, ಲಾಧಾ ಹಾಗೂ ಕಂದಗೂಳ ಸೇರಿದಂತೆ ಹತ್ತಾರು ಹಳ್ಳಿಗಳ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ವ್ಯಾಪಕ ಹಾನಿ ಆಗಿದೆ.

‘ಕಳೆದ ತಿಂಗಳು ಸುರಿದ ಮಳೆಯಿಂದಾಗಿ ಉದ್ದು ಹೆಸರು ಪೂರ್ಣ ಹಾಳಾಗಿದೆ. ಈ ತಿಂಗಳು ಸುರಿದ ಮಳೆಯಿಂದ ತಾಲ್ಲೂಕಿನ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದ ಸೋಯಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಮಳೆ, ಕೆಸರಲ್ಲೂ ಕಷ್ಟಪಟ್ಟು ಸಂಗ್ರಹಿಸಿದ ಸೋಯಾ ಬಣವೆಗಳು ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ’ ಎಂದು ಬಾಚೆಪಳ್ಳಿ ರೈತರು ಆತಂಕ ಹಾಗೂ ಅಸಹಾಯಕತೆ ವ್ಯಕ್ತಪಡಿಸಿದರು.

‘ಮಾಂಜ್ರಾ ನದಿ ಪಾತ್ರದ ಕೆಲ ಗ್ರಾಮಗಳ ರೈತರು ಜೀವನಕ್ಕೆ ಕಬ್ಬಿನ ಬೆಳೆಯನ್ನು ಅವಲಂಬಿಸಿದ್ದಾರೆ. ಮಳೆಯಿಂದ ನೂರಾರು ಎಕರೆ ಕಬ್ಬು ನೆಲಕ್ಕುರುಳಿ ರೈತರ ಬದುಕು ಬೀದಿಗೆ ಬಂದಿದೆ. ಕೃಷಿಯನ್ನೇ ಬದುಕಿನ ಅವಿಭಾಜ್ಯ ಅಂಗ ಮಾಡಕೊಂಡ ಅನೇಕ ರೈತರ ಹೊಲದಲ್ಲಿನ ಮಣ್ಣು ಕಿತ್ತು ಹೋಗಿ ಭೂಮಿ ಬರಡಾಗಿಸಿದೆ’ ಎಂದು ರೈತ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ.

‘ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದ ಆಗಿರುವ ಹಾನಿಗೆ ಇನ್ನು ತನಕ ಪರಿಹಾರ ಬಂದಿಲ್ಲ. ಇನ್ನು ಈಗ ಆದ ಹಾನಿಯಿಂದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ’ ಎಂದು ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಆದ ಹಾನಿ ಪರಿಹಾರ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಈ ವಾರ ಸುರಿದ ಮಳೆಯಿಂದ ಆಗಿರುವ ಹಾನಿ ಕುರಿತು ಸರ್ವೆ ಮಾಡಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್ ಮಾಜೀದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT