ಮಹಿಳೆಯರ ಅಂತಃಶಕ್ತಿ ಜಾಗೃತಗೊಳಿಸಿದ್ದ ಶರಣರು: ಅಕ್ಕ ಅನ್ನಪೂರ್ಣ ಅಭಿಮತ

7
‘ಮರಣವೇ ಮಹಾನವಮಿ’ ಮಹೋತ್ಸವಕ್ಕೆ ಚಾಲನೆ

ಮಹಿಳೆಯರ ಅಂತಃಶಕ್ತಿ ಜಾಗೃತಗೊಳಿಸಿದ್ದ ಶರಣರು: ಅಕ್ಕ ಅನ್ನಪೂರ್ಣ ಅಭಿಮತ

Published:
Updated:
Deccan Herald

ಬೀದರ್‌: ‘ಮಹಿಳೆಯರ ಅಂತಃಶಕ್ತಿ ಜಾಗೃತಿಗೆ ಬಸವಾದಿ ಶರಣರೇ ಕಾರಣರು. ಆದ್ದರಿಂದ ನಾವು ಅವರಿಗೆ ಕೃತಜ್ಞರಾಗಿರಬೇಕು’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

ನಗರದ ಶರಣ ಉದ್ಯಾನದಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ‘ಮರಣವೇ ಮಹಾನವಮಿ’ ಮಹೋತ್ಸವಕ್ಕೆ ಬುಧವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ‘ಇಂದು ಎಲ್ಲ ರಂಗಗಳಲ್ಲಿ ಮಹಿಳೆ ಪ್ರಗತಿಯತ್ತ ದಾಪುಗಾಲು ಇಟ್ಟಿದ್ದಾಳೆ’ ಎಂದು ತಿಳಿಸಿದರು.

‘ಬಸವ ಪೂರ್ವದಲ್ಲಿ ಮಹಿಳೆಯ ಸ್ಥಿತಿ ಹೀನಾಯವಾಗಿತ್ತು. ಆಕೆ ಪರಾವಲಂಬಿ ಜೀವನ ನಡೆಸಬೇಕಿತ್ತು. ದೇವರ ಪೂಜೆ, ಧಾರ್ಮಿಕ ಆಚರಣೆಗೆ ಅನರ್ಹಳೆಂದು ಘೋಷಿಸಿ, ಶೂದ್ರ ವರ್ಗಕ್ಕೆ ಸೇರಿಸಲಾಗಿತ್ತು’ ಎಂದು ಹೇಳಿದರು.

‘ಕೇವಲ ಭೋಗದ ಗೊಂಬೆಯಾಗಿ ಅಡುಗೆ ಮನೆಗೆ ಸೀಮಿತಳಾಗಿದ್ದ ಮಹಿಳೆಯ ಸ್ಥಿತಿ ಕಂಡು ಮರುಗಿದ ಬಸವಣ್ಣನವರು ಆಕೆಯ ಸಮಾನತೆಗೆ ಮತ್ತು ಸ್ವಾತಂತ್ರ್ಯಕ್ಕಾಗಿ ಮೊದಲು ಧ್ವನಿಯೆತ್ತಿದರು. ಮಹಿಳಾ ಘನತೆ ಎತ್ತಿ ಹಿಡಿದು, ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದರು. ಓದು, ಬರಹ ಕಲಿಸಿ, ಧಾರ್ಮಿಕ ಆಚರಣೆಗೆ ಅವಕಾಶ ಕಲ್ಪಿಸಿದರು. ಸ್ತ್ರೀಗೂ ಧಾರ್ಮಿಕ ದೀಕ್ಷೆ ನೀಡಿ, ಗುರುಸ್ಥಾನಕ್ಕೆ ಎತ್ತರಿಸಿದರು’ ಎಂದು ಬಣ್ಣಿಸಿದರು.

‘ಬಸವಣ್ಣನವರು ಕರುಳ ಕರೆಗೆ ಮೈಕೊಡವಿ ಎದ್ದು ನಿಂತ ಮಹಿಳೆಯರು ಅಂದು ‘ವಚನ’ ರಚಿಸುವ ಮಟ್ಟಕ್ಕೆ ಬೆಳೆದದ್ದು ಒಂದು ಪವಾಡವೇ ಸರಿ. ಮನುಷ್ಯನ ಅವನತಿಗೆ ಅವನಲ್ಲಿಯ ಭೀತಿಯ ಭೂತವೇ ಕಾರಣ. ಭಯದಿಂದ ಅಜ್ಞಾನ. ಅಜ್ಞಾನದಿಂದ ಅವನತಿ. ಶರಣರು ಜನರನ್ನು ಭಯ ಮುಕ್ತರನ್ನಾಗಿಸಿ ಸುಜ್ಞಾನದ ಬೆಳಕು ಚೆಲ್ಲಿದ್ದರಿಂದ ಸ್ತ್ರೀ ಸೇರಿದಂತೆ ಎಲ್ಲ ವರ್ಗದ ಶೋಷಿತರು ಜಾಗೃತರಾಗಿ ಶರಣತ್ವಕ್ಕೇರಿದರು’ ಎಂದು ನುಡಿದರು.

ಜ್ಞಾನದೇವಿ ಬಬಛಡೆ ಅವರು ಗುಡ್ಡಾಪುರದ ದಾನಮ್ಮ-ಸೋಮನಾಥೇಶ್ವರ ಜೀವನ-ಸಂದೇಶಗಳ ಕುರಿತು ಉಪನ್ಯಾಸ ನೀಡಿ, ‘ಬಸವ ಸಮಕಾಲೀನರಾದ ದಾನಮ್ಮ ಶರಣೆ ‘ಇಷ್ಟಲಿಂಗಯೋಗ’ದಲ್ಲಿ ಬಲ್ಲಿದರಾಗಿ, ಅದರ ಮಹತ್ವವನ್ನು ಈ ಜಗದಲ್ಲಿ ಸಾರಿದರು. ದಾನಮ್ಮರಿಂದ ಲಿಂಗಧರ್ಮದ ಹಿರಿಮೆ-ಗರಿಮೆಗಳಿಗೆ ಕಿರೀಟವಿಟ್ಟಂತಾಯಿತು ಎಂದರು.

ಶೋಭಾ ಚಾಂಗಲೇರಾ ಅಧ್ಯಕ್ಷತೆ ವಹಿಸಿದ್ದರು. ಕಮಲಮ್ಮ ನೀಲಾ, ಗುರುಮ್ಮ ಹೊನ್ನಾ, ಶೋಭಾ ದೇವಣಿ, ಪಾರ್ವತಿ ಹುಡೇದ, ನಿರ್ಮಲಾ ಮೊಟ್ಟೆ, ಚೆನ್ನಮ್ಮ ಪಾಟೀಲ, ಕಸ್ತೂರಿಬಾಯಿ ಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಲ್ಲಮ್ಮ ಮುಗಟೆ ಷಟ್‌ಸ್ಥಲ ಧ್ವಜಾರೋಹಣ ಮಾಡಿದರು. ಜಗದೇವಿ ಬಿರಾದಾರ ಅವರ ವಚನ ಗಾಯನ ಮನಸೂರೆಗೊಂಡಿತು. ಕಲಾವತಿ ಪರಶೆಟ್ಟಿ ಸ್ವಾಗತಿಸಿದರು. ಶೈಲಜಾ ಕುಂಬಾರ ವಚನ ಪಠಣ ಮಾಡಿದರು. ಶರಣಮ್ಮ ಪಾವಡಶೆಟ್ಟಿ ನಿರೂಪಿಸಿದರು. ಪದ್ಮಾ ಶೆಟಕಾರ ವಂದಿಸಿದರು.

ಮನರಂಜಿಸಿದ ವಚನ ವಡಪುಗಳು: ಕೊನೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆದರ್ಶ ಕಾಲೊನಿಯ ನೀಲಮ್ಮನ ಬಳಗದ ಸಹೋದರಿಯರು ವಚನ ವಡಪುಗಳನ್ನು ಹೇಳಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ವಚನ ವಡಪುಗಳು ನೆರೆದವರ ಮನರಂಜಿಸುವಲ್ಲಿ ಯಶಸ್ವಿಯಾದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !