ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಯ್ಗೆಯಿಂದ ಶಿವಯೋಗ ಸಾಧಿಸಿದ ಅಮುಗಿ ದೇವಯ್ಯ: ಅಕ್ಕ ಅನ್ನಪೂರ್ಣ

ಅಮುಗಿ ದೇವಯ್ಯ-ರಾಯಮ್ಮರ ಚಿಂತನಗೋಷ್ಠಿ
Last Updated 13 ಅಕ್ಟೋಬರ್ 2018, 15:16 IST
ಅಕ್ಷರ ಗಾತ್ರ

ಬೀದರ್‌: ‘ಅನುಭವ ಮಂಟಪದ ಪ್ರಮುಖ ಶರಣರಾದ ಅಮುಗಿ ದೇವಯ್ಯ-ರಾಯಮ್ಮ. ಮಂಟಪದ ಬೆನ್ನುಹುರಿಯಂತೆ ಕಾರ್ಯ ನಿರ್ವಹಿಸಿದರು. ನೇಯ್ಗೆ ಕಾಯಕ ಮಾಡಿ ಶಿವಯೋಗ ಸಾಧಿಸಿದವರು ಅಮುಗಿ ದೇವಯ್ಯ’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

ನಗರದ ಶರಣ ಉದ್ಯಾನದಲ್ಲಿ ಮಹಾನವಮಿ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಅಮುಗಿ ದೇವಯ್ಯ-ರಾಯಮ್ಮರ ಚಿಂತನಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಅನುಭವ ಮಂಟಪದ ಕಂಪನ್ನು ಕಸ್ತೂರಿಯಂತೆ ಎಲ್ಲೆಡೆ ಪಸರಿಸಿದರು. ಅವರ ಮಾತುಗಳು ಮುತ್ತಿನಂತೆ ಇದ್ದವು. ಅವರಿವರ ಬಗೆಗೆ ಮಾತನಾಡುವುದರಿಂದ ಮಲೀನಭಾವ ಆವರಿಸುವುದು. ನಿಂದೆಯ ಮಾತು ಮತ್ತೊಬ್ಬರ ಪ್ರಾಣಹಾನಿಗೆ ಕಾರಣವಾಗಬಹುದು. ಹೀಗಾಗಿ ಅಮುಗಿ ದೇವಯ್ಯರಂತೆ ನಾವು ಒಂದು ವರ್ಷದವರೆಗಾದರೂ ನಿಂದೆಯ ಮಾತನಾಡಲಾರೆನೆಂಬ ವೃತ ಹಿಡಿಯಬೇಕು’ ಎಂದು ಸಲಹೆ ನೀಡಿದರು.

‘ಹುಡಿ ಹತ್ತದ ಗಾಳಿಯಂತೆ, ಕಾಡಿಗೆ ಹತ್ತದ ಆಲಿಯಂತೆ, ತುಪ್ಪ ಹತ್ತದ ನಾಲಿಗೆಯಂತೆ, ಮಂಗಲ ಮಣ್ಣ ಬೆರೆಸದಂತೆ ಬಾಳಿದ ಅವರ ನಡೆ-ನುಡಿ ನಾಡಿಗೆ ಆದರ್ಶವಾಗಬೇಕು. ವೈಚಾರಿಕ ಜನಾಂಗ ನಿರ್ಮಾಣವಾಗಬೇಕು’ ಎಂದು ಮಾರ್ಮಿಕವಾಗಿ ನುಡಿದರು.

ಕಸಾಪ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸುಕಾಲೆ ಮಾತನಾಡಿ, ‘ಕಲ್ಯಾಣ ಕ್ರಾಂತಿಯ ನಂತರವೂ ಬಸವಧರ್ಮ ಪ್ರಚಾರ ಮಾಡಿದ ಅಮುಗಿ ದೇವಯ್ಯ ತಂದೆ ವಾಡಿಯ ರಾಜ ಸಿಂಘಣನಿಗೂ ಲಿಂಗತತ್ವ ಬೋಧಿಸಿದ್ದು ಉಲ್ಲೇಖನೀಯ.

ಸಿಂಘಣನು ಲಿಂಗ ಧರಿಸಿ ಸಂತುಷ್ಟನಾಗಿ ಇತ್ಥೆಯೆಂಬ ಗ್ರಾಮ ಧಾರೆಯೆರೆದು ಕೊಟ್ಟಿದ್ದರು. ಸಿದ್ಧಸೋಮನಾಥ ವಚನಾಂಕಿತದಿಂದ ವಚನಗಳನ್ನು ಬರೆದಿದ್ದಾರೆ’ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಲೀಲಾವತಿ ಚಾಕೋತೆ ಮಾತನಾಡಿದರು. ಚಂದ್ರಕಲಾ ಪಾಟೀಲ ನೇತೃತ್ವ ವಹಿಸಿದ್ದರು. ರತ್ನಮ್ಮ ಚಪಟೆ, ಶಾರದಾ ಕಾಜಿ, ಸುವರ್ಣ ಧನ್ನೂರ, ಸೂರ್ಯಕಲಾ ಖದ್ಮೆ, ಮಹಾದೇವಿ ಬಿರಾದಾರ ಮತ್ತು ನೀಲಾಂಬಿಕೆ ಪಾಖಾಲ ಅತಿಥಿಯಾಗಿದ್ದರು.

ಪ್ರೇಮಲಾ ಪಾಟೀಲ ಧ್ವಜಾರೋಹಣ ಮಾಡಿದರು. ಶಾರದಾ ಭುಯ್ಯಾ ವಚನ ಗಾಯನ ನಡೆಸಿಕೊಟ್ಟರು. ಕಲಾವತಿ ಹದನೂರೆ ವಚನ ಪಠಣ ಮಾಡಿದರು. ಜಗದೇವಿ ಬಿಚಕುಂದೆ ಸ್ವಾಗತಿಸಿದರು. ನೀಲಗಂಗಾ ಹೆಬ್ಬಾಳೆ ವಂದಿಸಿದರು. ಸಂಗೀತಾ ಮತ್ತು ಗೀತಾ ಜಂಟಿಯಾಗಿ ನಿರೂಪಿಸಿದರು.

ಗಮನ ಸೆಳೆದ ಕವನ ರೂಪಕ: ಶರಣ ನಗರದ ನೀಲಮ್ಮನ ಬಳಗದವರಿಂದ ಪ್ರದರ್ಶಿತಗೊಂಡ ಹಸನಾದ ಬದುಕು ಕಲಿಸ್ಯಾರ ಎನ್ನುವ ಕವನ ರೂಪಕ ಗಮನ ಸೆಳೆಯಿತು.

ಮೇದಾರ ಕೇತಯ್ಯ-ಸಾತವ್ವೆ, ಹೂಗಾರ ಮಾದಯ್ಯ, ಬಹುರೂಪಿ ಚೌಡಯ್ಯ, ಕುಂಬಾರ ಗುಂಡಯ್ಯ, ಹರಳಯ್ಯ-ಮಧುವಯ್ಯ ಮಡಿವಾಳ ಮಾಚಿದೇವರ ರೂಪಕಗಳು ಆಕರ್ಷಕವಾಗಿ ಮೂಡಿ ಬಂದವು. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಉಳಿಸಲು ಹೋರಾಟದ ರೂಪಕ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT