ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಬಂದ ಸಂಸದರಿಗೆ ಪ್ರಬಲ ವಿರೋಧ: ವೇದಿಕೆ ಏರದೇ ಮರಳಿದ ಖೂಬಾ, ಸಲಗರ

Last Updated 2 ಏಪ್ರಿಲ್ 2021, 15:11 IST
ಅಕ್ಷರ ಗಾತ್ರ

ಬಸವಕಲ್ಯಾಣ: ಜಿಲ್ಲೆಯ ಮರಾಠಾ ಸಮಾಜವು ಉಪ ಚುನಾವಣೆ ಪ್ರಯುಕ್ತ ನಗರದ ಕ್ರಿಸ್ಟಲ್ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಸಭೆಗೆ ದಿಢೀರ್ ಆಗಿ ಬಂದ ಸಂಸದ ಭಗವಂತ ಖೂಬಾ ಹಾಗೂ ಬಿಜೆಪಿ ಅಭ್ಯರ್ಥಿ ಶರಣು ಸಲಗರ ತೀವ್ರ ಪ್ರತಿರೋಧ ಎದುರಿಸಬೇಕಾಯಿತು.

ಮರಾಠಾ ಸಮಾಜದ ಕಾರ್ಯಕರ್ತರು ಸಂಸದರ ವಿರುದ್ಧ ಧಿಕ್ಕಾರ ಕೂಗಿದರು. ‘ಗೋ ಬ್ಯಾಕ್ ಖೂಬಾ’ ಎಂದು ಘೋಷಣೆ ಕೂಗಿದರು. ಅವರು ಸಭೆಯಿಂದ ಹೊರ ಹೋಗುವವರೆಗೂ ಬೊಬ್ಬೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಖೂಬಾ ಕೆಲ ಹೊತ್ತು ವೇದಿಕೆ ಮುಂಭಾಗದಲ್ಲಿ ಕುಳಿತು ಕೈಮುಗಿದು ಮನವಿ ಮಾಡಿಕೊಂಡರೂ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಿಲ್ಲ. ಹೀಗಾಗಿ ಮುಜುಗರಕ್ಕೆ ಒಳಗಾಗಿ ಸಭೆಯಿಂದ ನಿರ್ಗಮಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮರಾಠಾ ನಿಗಮ ಸ್ಥಾಪಿಸಿ ಅದಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲ. ಮುಖ್ಯಮಂತ್ರಿ ಆದ 24 ಗಂಟೆಯಲ್ಲೇ ಮರಾಠಾ ಸಮಾಜವನ್ನು 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಈವರೆಗೆ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ನಿಮ್ಮ ಅಗತ್ಯ ನಮಗಿಲ್ಲ’ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು.

ಸಂಸದರು ಸುಮಾರು ಅರ್ಧ ಗಂಟೆ ತಟಸ್ಥರಾಗಿ ನಿಂತರಾದರೂ ಕಾರ್ಯಕರ್ತರು ವೇದಿಕೆಗೆ ಹೋಗಗೊಡಲಿಲ್ಲ. ಘೋಷಣೆ ಕೂಗುವುದು, ಚೀರಾಟ ಹೆಚ್ಚಾಯಿತು. ಗದ್ದಲ ಹೆಚ್ಚಾದ ಕಾರಣ ಸಮಾಜದ ಕೆಲ ಹಿರಿಯರು ಶಾಂತಿ ಕಾಪಾಡುವ ಸಲುವಾಗಿ ಸಂಸದರು ದಯವಿಟ್ಟು ಸಭೆಯಿಂದ ಹೊರ ಹೋಗಬೇಕು ಎಂದು ಮನವಿ ಮಾಡಿಕೊಂಡರು.

ಕೆಲ ಯುವಕರು ಸುತ್ತುವರಿದ ಘೋಷಣೆ ತೀವ್ರಗೊಳಿಸಿದಾಗ ಅಂಗ ರಕ್ಷಕರು ಹಾಗೂ ಪೊಲೀಸರು ರಕ್ಷಣೆಗೆ ಮುಂದಾದರು. ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿರುವ ಮುನ್ಸೂಚನೆ ದೊರೆಯುತ್ತಲೇ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕುರ್ಚಿ ಮೇಲೆ ನಿಂತು ಎಲ್ಲರಿಗೂ ನಮಸ್ಕರಿಸಿ ಸಭಾಭವನದಿಂದ ನಿರ್ಗಮಿಸಿದರು.

ನಂತರ ನಡೆದ ಮರಾಠಾ ಸಮಾಜದ ಸಭೆಯಲ್ಲಿ ಹಲವು ಮುಖಂಡರು ಮಾತನಾಡಿ,‘ನಮ್ಮ ಸಮುದಾಯದ ಮುಖಂಡರು ಬೇರೆ ಬೇರೆ ಪಕ್ಷಗಳಲ್ಲಿ ಇರಬಹುದು. ನಮಗೆ ಸಮಾಜದ ಹಿತವೇ ಮುಖ್ಯ’ ಎಂದು ಹೇಳಿದರು.

ಎನ್.ಸಿ.ಪಿ ಯಿಂದ ಸ್ಪರ್ಧಿಸಿರುವ ಮಾಜಿ ಶಾಸಕ ಎಂ.ಜಿ.ಮುಳೆ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಪದ್ಮಾಕರ್ ಪಾಟೀಲ, ಬಾಬುರಾವ್ ಕಾರಬಾರಿ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ದಿಗಂಬರರಾವ್ ಮಾನಕರಿ, ವಕೀಲ ನಾರಾಯಣ ಗಣೇಶ, ಎನ್.ಸಿ.ಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಭಾವು ಜಾಧವ, ಮರಾಠಾ ಕ್ರಾಂತಿ ಮೋರ್ಚಾದ ಜಿಲ್ಲಾ ಸಂಯೋಜಕ ವೆಂಕಟೇಶ ಮಾಯಿಂದೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT