ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ತಾಣ ಹಾವಗಿಲಿಂಗೇಶ್ವರ ಮಠ

ನಾಳೆಯಿಂದ ಮಾ.29ವರೆಗೆ ಬಸವದರ್ಶನ ಪ್ರವಚನ
Last Updated 23 ಫೆಬ್ರುವರಿ 2020, 10:50 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಸಮೀಪದ ಹುಲಸೂರ ತಾಲ್ಲೂಕಿನ ಗಡಿಗೌಡ ಗಾಂವದ ಹಾವಗಿಲಿಂಗೇಶ್ವರ ಹಿರೇಮಠ ಸಂಸ್ಥಾನವು 800 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು, ಈ ಭಾಗದ ಅತಿ ಹಳೆಯ, ಐತಿಹಾಸಿಕ ತಾಣವಾಗಿದೆ.

ಇಲ್ಲಿ ಈ ಸಲ ಹಾವಗಿಲಿಂಗೇಶ್ವರರ ಜಾತ್ರೆಯೊಂದಿಗೆ ಪೀಠಾಧಿಪತಿ ಶಾಂತವೀರ ಶಿವಾಚಾರ್ಯರ ಪಟ್ಟಾಧಿಕಾರದ 25 ನೇ ವರ್ಷಾಚರಣೆ ಹಾಗೂ ಜನ್ಮ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಫೆಬ್ರುವರಿ 24 ರಿಂದ ಮಾರ್ಚ್ 29 ರವರೆಗೆ ಬಸವ ದರ್ಶನ ಪ್ರವಚನ ಆಯೋಜಿಸಲಾಗಿದೆ.

ಗಡಿಗೌಡಗಾಂವಕ್ಕೂ ಇತಿಹಾಸವಿದೆ. ಇಲ್ಲಿ ಚಾಲುಕ್ಯರ ಕಾಲದ ಶಿಲ್ಪಗಳು ದೊರೆತಿವೆ. ಹೈದರಾಬಾದ್ ನಿಜಾಮರ ಕಾಲದ ಈ ಭಾಗದಲ್ಲಿಯೇ ದೊಡ್ಡ ಹುಡೆ, ಅಗಸೆ ಹಾಗೂ ಬಾವಿಗಳಿವೆ. ಊರ ಸುತ್ತ ಆವರಣಗೋಡೆ ಇದ್ದು ಬಹಳಷ್ಟು ಕಡೆ ಹಾಳಾಗಿದೆ. ಹುಡೆಯ ಮೇಲೆ ಒಂದು ಮತ್ತು ಹಾವಗಿಲಿಂಗೇಶ್ವರ ಮಠದ ಎದುರಲ್ಲಿ ಒಂದು ಪಂಚಧಾತು ವಿನಿಂದ ತಯಾರಿಸಿದ ತೋಪುಗಳಿದ್ದು ಸುಸ್ಥಿತಿಯಲ್ಲಿವೆ. ಹಾವಗಿಲಿಂಗೇಶ್ವರರ ಮಠದ ಗರ್ಭಗೃಹ ಹಾಗೂ ಮುಖ ಮಂಟಪಗಳು ಹಳೆಯ ಕಾಲದ್ದೇ ಇವೆ.

ಹಾವಗಿಲಿಂಗೇಶ್ವರರು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಸ್ವಾಮೀಜಿ ಆಶಯದಂತೆ ದೇಶ ಪರ್ಯಟನೆ ಕೈಗೊಂಡು ಬೀದರ್ ಜಿಲ್ಲೆಯಲ್ಲಿನ ಡೊಣಗಾಂವ ಹಾಗೂ ಗಡಿಗೌಡಗಾಂವದಲ್ಲಿ ಮಠ ಸ್ಥಾಪಿಸಿದ್ದಾರೆ. ಆಂಧ್ರ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧೆಡೆ ಅವರು 308 ಮಠಗಳನ್ನು ಸ್ಥಾಪಿಸಿದ್ದು, ಕೊನೆಗಾಲದಲ್ಲಿ ಗಡಿಗೌಡಗಾಂವದಲ್ಲಿಯೇ ವಾಸಿಸಿ ಜೀವಂತ ಸಮಾಧಿ ಹೊಂದಿದರು ಎನ್ನಲಾಗುತ್ತದೆ.

ಮಠವು ನೋಡಿಕೊಳ್ಳುವವರಿಲ್ಲದೆ ಹಾಳಾಗಿತ್ತು. ಶಾಂತವೀರ ಶಿವಾಚಾರ್ಯರು ಇಲ್ಲಿನ ಎರಡನೇ ಪೀಠಾಧಿಪತಿಯಾಗಿ 25 ವರ್ಷಗಳ ಹಿಂದೆ ಅಧಿಕಾರ ಪಡೆದರು. ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಕನ್ನೋಳಿಯ ಗಿರಿಮಲ್ಲಯ್ಯ ಹಾಗೂ ಶಾರದಾಬಾಯಿಯವರ ಪುತ್ರರಾದ ಇವರು ಬಾಲ್ಯದಲ್ಲಿಯೇ ವೈರಾಗ್ಯ ತಾಳಿ ಶಿವಯೋಗ ಮಂದಿರದಲ್ಲಿ ಮತ್ತು ಕೊಪ್ಪಳ ಗವಿಮಠದಲ್ಲಿ ಧಾರ್ಮಿಕ ಶಿಕ್ಷಣ ಪೊರೈಸಿದ್ದಾರೆ.

ಇವರು ಮಠದ ಅಧಿಕಾರ ವಹಿಸಿಕೊಂಡ ನಂತರದಲ್ಲಿ ತಿಪ್ಪೆಗುಂಡಿ, ಮುಳ್ಳುಕಂಟೆಗಳಿಂದ ಆವೃತ್ತವಾಗಿದ್ದ ಈ ಸ್ಥಳವನ್ನು ಸ್ವಚ್ಛಗೊಳಿಸಿ ಬೃಹತ್ ಮಠ, ಕಲ್ಯಾಣಮಂಟಪ ಕಟ್ಟಿದ್ದಾರೆ.

ಜಾತ್ರೆ ಆರಂಭಿಸಿ ರಥೋತ್ಸವ ನಡೆಸುತ್ತಾರೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳ ಜತೆಯಲ್ಲಿ ಕನ್ನಡ ಕೆಲಸಕ್ಕೂ ಮುಂದಿದ್ದು, ಕಳೆದ ವರ್ಷ ತಾಲ್ಲೂಕು ಮಟ್ಟದ ಯುವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದರು. ಜಿಲ್ಲಾ ಮಟ್ಟದ ಮಠಾಧೀಶರ ಸಮಾವೇಶ ಕೂಡ ನಡೆಸಿದ್ದಾರೆ. ಮುಖ್ಯವೆಂದರೆ, ಇವರು ನಾಡಿನ ಪ್ರಮುಖ ಪ್ರವಚನ ಕಾರರಲ್ಲಿ ಒಬ್ಬರಾಗಿದ್ದು, 415 ಸ್ಥಳಗಳಲ್ಲಿ ಕೆಲವೆಡೆ 21 ದಿನ, ಇನ್ನೂ ಕೆಲವೆಡೆ ತಿಂಗಳ ಪ್ರವಚನ ನೀಡಿದ್ದಾರೆ. ಈ ಕಾರಣ ಇವರಿಗೆ ಖೇಡಗಿ ದೇವಿಕವಠಾ ಮಠದಿಂದ ‘ಪುರಾಣ ಪ್ರವಚನ ಬ್ರಹ್ಮ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT