ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಪೂರ್ಣ ಯೋಜನೆ: ಅರಣ್ಯ ಪ್ರದೇಶ ವಿಸ್ತರಣೆ

Last Updated 20 ನವೆಂಬರ್ 2022, 10:57 IST
ಅಕ್ಷರ ಗಾತ್ರ

ಬೀದರ್‌: ಅರಣ್ಯ ಇಲಾಖೆಯ ವನ್ಯಜೀವಿ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಮೂರು ವರ್ಷಗಳ ಅವಧಿಯಲ್ಲಿ ಯೋಜನಾ ಬದ್ಧ ಕಾರ್ಯಕ್ರಮ ಹಮ್ಮಿಕೊಂಡು ಅನುಷ್ಠಾನಗೊಳಿಸಿದ ಪರಿಣಾಮ ಜಿಲ್ಲೆಯಲ್ಲಿ 88.42 ಕಿ.ಮೀ ದಿಂದ 97.52 ಕಿ.ಮೀ ಅರಣ್ಯ ಪ್ರದೇಶ ಹೆಚ್ಚಾಗಿದೆ.

ಬೀದರ್‌ ವಿಭಾಗದಲ್ಲಿ 45,616 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಭೂಮಿ ಇದೆ. ಇದು ವಿಭಾಗದ ಭೌಗೋಳಿಕ ಪ್ರದೇಶದ (5,448 ಕಿ.ಮೀ) ಸುಮಾರು ಶೇಕಡ 8.37 ರಷ್ಟಿದೆ. ಬೀದರ್ ವಿಭಾಗದ ಅರಣ್ಯ ಕುರುಚಲು ಮಾದರಿಯಲ್ಲಿದೆ. ಬೀದರ್, ಹುಮನಾಬಾದ್ ಮತ್ತು ಬಸವಕಲ್ಯಾಣ ಭಾಗಗಳಲ್ಲಿ ಅರಣ್ಯ ಪ್ರದೇಶವು ಅಲ್ಲಲ್ಲಿ ಹಂಚಿ ಹೋಗಿದೆ. ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ, ಕಾರಪಾಕಪಳ್ಳಿ ಹಾಗೂ ಕರಕನಳ್ಳಿ ಪ್ರದೇಶಗಳಲ್ಲಿ ಹೆಚ್ಚು ತೇಗದ ಮರಗಳು ಬೆಳೆದಿವೆ.

45 ಸಾವಿರ ಇಂಗು ಗುಂಡಿ ನಿರ್ಮಾಣ

ಅರಣ್ಯ ಇಲಾಖೆ ಬೀದರ್‌ ವಿಭಾಗದಲ್ಲಿ ಹಸಿರೀಕರಣಕ್ಕಾಗಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ತೇವಾಂಶ ಹಾಗೂ ಅಂತರ್ಜಲ ಮಟ್ಟ ಹೆಚ್ಚಳವಾಗುವಂತೆ ಮಾಡಿರುವುದು ಹಸಿರೀಕರಣಕ್ಕೆ ನೆರವಾಗಿದೆ.

ಬೀದರ್‌ ತಾಲ್ಲೂಕಿನ ಕಮಠಾಣ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಇಂಗು ಗುಂಡಿ ತೋಡಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆ ಮೂರು ವರ್ಷಗಳಿಂದ ನೆಲ, ಜಲ, ಅರಣ್ಯೀಕರಣ, ಪರಿಸರ ಸಂರಕ್ಷಣೆಗೆ ನರೇಗಾದ ನೆರವು ಪಡೆದಿದೆ.

ಚಿಟ್ಟಾ, ಖಾನಾಪುರದ 260 ಎಕರೆ ಅರಣ್ಯ ಪ್ರದೇಶದಲ್ಲೇ ಸುಮಾರು 10 ಸಾವಿರ ಇಂಗು ಗುಂಡಿಗಳನ್ನು ತೆಗೆಯಲಾಗಿದೆ. 15 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳದ ಇಂಗು ಗುಂಡಿ ತೋಡಲಾಗಿದೆ. ಒಂದು ಗುಂಡಿಯಲ್ಲಿ ಸರಾಸರಿ 1 ಸಾವಿರ ಲೀಟರ್ ನೀರು ಇಂಗುತ್ತದೆ ಇಂತಹ 45 ಸಾವಿರ ಇಂಗುಗುಂಡಿಗಳನ್ನು ತೆಗೆದಿರುವ ಕಾರಣ ಅಧಿಕ ಪ್ರಮಾಣದಲ್ಲಿ ನೀರು ಭೂಮಿಯೊಳಗೆ ಇಂಗುತ್ತಿದೆ. ಇದರಿಂದ ಬೇಸಿಗೆಯಲ್ಲೂ ಗಿಡಗಳು ಒಣಗುತ್ತಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ವಿವರಿಸುತ್ತಾರೆ.

ರಸ್ತೆ ಬದಿಗೂ ಮರಗಳು

ಬೀದರ್ ಸಾಮಾಜಿಕ ಅರಣ್ಯ ವಿಭಾಗದಿಂದ 2022-23ನೇ ಸಾಲಿಗೆ ಒಟ್ಟು 291 ಹೆಕ್ಟೇರ್‌ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ.

ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಪ್ರಯುಕ್ತ ಜಿಲ್ಲೆಯ ಐದು ತಾಲ್ಲೂಕುಗಳ 140.62 ಹೆಕ್ಟೇರ್‌ ಪ್ರದೇಶದಲ್ಲಿ ಒಟ್ಟು 5,625 ಸಸಿಗಳನ್ನು ನೆಡಲಾಗಿದೆ.

ಗೋಮಾಳದ 100 ಹೆಕ್ಟೇರ್ ಮತ್ತು ಅರಣ್ಯ ಪ್ರದೇಶಗಳಲ್ಲಿ ಒಟ್ಟು 22 ಸಾವಿರ ಸಸಿ ಹಾಗೂ ರಸ್ತೆಬದಿ 35 ಕಿ.ಮೀ ವ್ಯಾಪ್ತಿಯಲ್ಲಿ 11,550 ಸಸಿಗಳನ್ನು ನೆಡಲಾಗಿದೆ. ಬೀದರ್ ಪ್ರಾದೇಶಿಕ ಅರಣ್ಯ ವಿಭಾಗವು 5,44,800 ಹೆಕ್ಟೇರ್‌ ಭೂಮಿ ಹೊಂದಿದೆ. ಇದರಲ್ಲಿ 39,493 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಶೇಕಡ 7.24 ರಷ್ಟು ಅರಣ್ಯ ಪ್ರದೇಶ ವಿಸ್ತಾರಗೊಂಡಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ಹೇಳುತ್ತಾರೆ.

6 ಲಕ್ಷ ಸಸಿ ಬೆಳೆಸಿದ ಅರಣ್ಯ ಇಲಾಖೆ

ಅರಣ್ಯ ಇಲಾಖೆಯು ಸಸ್ಯ ಕ್ಷೇತ್ರದಲ್ಲಿ ಒಟ್ಟು ಸುಮಾರು 6.57 ಲಕ್ಷ ಸಸಿಗಳನ್ನು ಬೆಳೆಸಿದೆ. 15 ಕಿ.ಮೀ ವ್ಯಾಪ್ತಿಯ 603 ಹೆಕ್ಟೇರ್‌ ಪ್ರದೇಶದಲ್ಲಿ ನೆಡುತೋಪು ನಿರ್ಮಿಸಿದೆ. ನೈಸರ್ಗಿಕವಾಗಿ ಬೆಳೆದಿರುವ ಅರಣ್ಯ ಪ್ರದೇಶವನ್ನು ರಕ್ಷಣೆ ಮಾಡಲು 61.02 ಕಿ.ಮೀ. ಮುಳ್ಳುತಂತಿ ಬೇಲಿ ನಿರ್ಮಾಣ ಮಾಡಲಾಗಿದೆ. ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವನ್ಯಜೀವಿ ಕಳ್ಳ ಬೇಟೆ ನಿಗ್ರಹ ಶಿಬಿರಗಳನ್ನು ಮಾಡಲಾಗಿದೆ. ಹಗಲು ರಾತ್ರಿ ಗಸ್ತು ಬಿಗಿಗೊಳಿಸಲಾಗಿದೆ.

‘ವನಮೋಹತ್ಸವ ಹಾಗೂ ಬೀಜೋತ್ಸವ ಅಭಿಯಾನ ಕಾರ್ಯಕ್ರಮವನ್ನು ಶಾಲಾ ಮಕ್ಕಳು, ಜನಪ್ರತಿನಿಧಿಗಳು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಯಶಸ್ವಿಗೊಳಿಸಲಾಗಿದೆ’ ಎಂದು ಬೀದರ್‌ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಂ.ಎಂ.ವಾನತಿ ಹೇಳುತ್ತಾರೆ.

....................................

ಬೀದರ್ ಪ್ರಾದೇಶಿಕ ಅರಣ್ಯ ವಿಭಾಗ (ಹೆಕ್ಟೇರ್‌ಗಳಲ್ಲಿ)

ಸಂರಕ್ಷಿತ ಅರಣ್ಯ–4,931.12

ಸೂಚಿತ ಅರಣ್ಯ–9,678.27

ಡೀಮ್ಡ್‌ ಅರಣ್ಯ–19,890.03

ಒಟ್ಟು ಅರಣ್ಯ ಪ್ರದೇಶ–36,318.58

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT