ಮಂಗಳವಾರ, ನವೆಂಬರ್ 12, 2019
28 °C

ಅಲೆಮಾರಿ ಜನಾಂಗದ ಸಮೀಕ್ಷೆ ನಡೆಸಿ: ಹೆಚ್ಚುವರಿ ಡಿಸಿ ರುದ್ರೇಶ ಘಾಳಿ ಸೂಚನೆ

Published:
Updated:
Prajavani

ಬೀದರ್‌: ‘ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಇರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಸಮೀಕ್ಷೆ ನಡೆಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಸೌಲಭ್ಯಗಳ ಪ್ರಗತಿ ಪರಿಶೀಲನೆ ಹಾಗೂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಮೇಶ ದೇವಮಾನೆ ಮಾತನಾಡಿ, ‘ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅಲೆಮಾರಿ ಜನ ನೆಲೆಸಿದ್ದಾರೆ. ಇವರಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಬೇಕಿದೆ. ಪ್ರತಿ ತಾಲ್ಲೂಕಿಗೆ ಐದು ಎಕರೆಯಷ್ಟು ನಿವೇಶನದ ಅಗತ್ಯವಿದೆ’ ಎಂದು ತಿಳಿಸಿದರು.

ಬೀದರ್‌ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಮಾತನಾಡಿ, ‘ಬೀದರ್‌ ನಗರದಲ್ಲಿ ಇರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ನಗರಸಭೆಯಿಂದ ಎರಡು ಎಕರೆ ಭೂಮಿ ಹಾಗೂ ಕೆಲ ತಾಲ್ಲೂಕುಗಳಲ್ಲಿ ನಿವೇಶನಗಳನ್ನು ಕೊಡಲಾಗಿದೆ’ ಎಂದು ಹೇಳಿದರು.

‘ನೌಬಾದ್‌ನಲ್ಲಿರುವ ಅಲೆಮಾರಿ ಸಮುದಾಯದವರು ತಮ್ಮ ಮಕ್ಕಳನ್ನು ಸಮೀಪದ ಶಾಲೆಗೆ ದಾಖಲಿಸಿದ್ದಾರೆ. ಆ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡಬೇಕು ಎನ್ನುವ ಬೇಡಿಕೆ ಇದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಘಾಳಿ, ‘ಇಲಾಖೆಯಿಂದ ವಾಹನ ವ್ಯವಸ್ಥೆ ಕಲ್ಪಿಸಲು ಅವಕಾಶ ಇದೆಯೋ ಅಥವಾ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರ ಕಾಲೊನಿಗಳಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇಕಡ 70ರಷ್ಟು ಮಾತ್ರ ಪೂರ್ಣಗೊಂಡಿವೆ. ಬಾಕಿ ಉಳಿದ ಕೆಲಸಗಳನ್ನೂ ಶೀಘ್ರ ಪೂರ್ಣಗೊಳಿಸಬೇಕು’ ಎಂದು ಅಲೆಮಾರಿ ಸಮಾಜದ ಮುಖಂಡ ಸಿದ್ರಾಮ ವಾಘಮಾರೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ‘ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ನಿರ್ದೇಶನ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗಮಣಿ, ತಾಲ್ಲೂಕು ಅಧಿಕಾರಿಗಳಾದ ಅಶೋಕ ಶೇರಿಕಾರ, ಗದಗೆಪ್ಪ, ವಿಜಯಮಾಲಾ, ವಿಠ್ಠಲ, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)