ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮಗಳಿಗೆ ಕಡಿವಾಣ: ಮಾಹಿತಿ ಹಂಚಿಕೆಗೆ ತೀರ್ಮಾನ

ಅಂತರರಾಜ್ಯ ಗಡಿ ಜಿಲ್ಲೆಗಳ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆ
Last Updated 27 ಸೆಪ್ಟೆಂಬರ್ 2022, 13:14 IST
ಅಕ್ಷರ ಗಾತ್ರ

ಬೀದರ್: ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ಪ್ರಯುಕ್ತ ನಗರದ ಹಬ್ಸಿಕೋಟ್ ಸರ್ಕಾರಿ ಅತಿಥಿ ಗೃಹದ ಸಭಾಂಗಣದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದ ಗಡಿ ಜಿಲ್ಲೆಗಳ ಅಬಕಾರಿ ಅಧಿಕಾರಿಗಳ ಸಮನ್ವಯ ಸಭೆ ನಡೆಯಿತು.

ಸಭೆಯಲ್ಲಿ ಅಂತರರಾಜ್ಯ ಮದ್ಯ, ಕೈಹೆಂಡ, ಕಳ್ಳಭಟ್ಟಿ, ಮದ್ಯಸಾರ ಹಾಗೂ ಮಾದಕ ಮತ್ತು ನಿದ್ರಾಜನಕ ವಸ್ತುಗಳ ಅಕ್ರಮ ಸಾಗಾಣಿಕೆ ಮತ್ತು ಮಾರಾಟದಂಥ ಗಂಭೀರ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ಮತ್ತು ಜಹೀರಾಬಾದ್ ತಾಲ್ಲೂಕುಗಳ ಮುಖಾಂತರ ಬೀದರ್ ಜಿಲ್ಲೆಯೊಳಗೆ ಅಕ್ರಮವಾಗಿ ಸಾಗಣೆಯಾಗಿರುವ ಗಾಂಜಾ ಮತ್ತು ಕೈಹೆಂಡದ ಕುರಿತು ತೆಲಂಗಾಣ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಯಿತು. ಬೀದರ್ ಜಿಲ್ಲೆಯ ಅಬಕಾರಿ ಪ್ರಕರಣಗಳಲ್ಲಿ ಭಾಗಿಯಾಗಿರುವ ತೆಲಂಗಾಣದ ಆರೋಪಿಗಳ ಮಾಹಿತಿ ಕೊಡಲಾಯಿತು.

ಮಹಾರಾಷ್ಟ್ರದ ಉಸ್ಮಾನಾಬಾದ್, ಲಾತೂರ್ ಮತ್ತು ನಾಂದೇಡ್ ಜಿಲ್ಲೆಯ ಅಬಕಾರಿ ಅಧಿಕಾರಿಗಳೊಂದಿಗೆ ಮಹಾರಾಷ್ಟ್ರ ರಾಜ್ಯದ ಮದ್ಯ ಅಕ್ರಮ ಸಾಗಣೆ ಮತ್ತು ನಕಲಿ ಮದ್ಯದ ಸಾಗಣೆ ತಡೆಗಟ್ಟಲು ಚರ್ಚೆ ನಡೆಸಲಾಯಿತು.

ತೆಲಂಗಾಣದ ಜಾಲವೊಂದು ಮಹಾರಾಷ್ಟ್ರದಿಂದ ಮಾದಕ ದ್ರವ್ಯದ ಕಚ್ಚಾ ಸರಕು ತರಿಸಿಕೊಂಡು ತಂಪು ಪಾನೀಯ ರೂಪದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮೂರು ರಾಜ್ಯಗಳಲ್ಲಿ ವ್ಯವಹಾರ ವಿಸ್ತರಿಸಿರುವ ಸಾಧ್ಯತೆಯೂ ಇದೆ. ಇಂಥ ಕೃತ್ಯಗಳ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಅಕ್ರಮ ವ್ಯವಹಾರದಲ್ಲಿ ತೊಡಗಿರುವವರು ಅಕ್ರಮ ಮದ್ಯ, ಮಾದಕ ವಸ್ತಗಳ ಸಾಗಣೆಗೆ ಹೊಸ ಹೊಸ ತಂತ್ರಗಾರಿಕೆ ಬಳಸುತ್ತಿದ್ದಾರೆ. ಅಬಕಾರಿ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಕದ್ದು ಮಚ್ಚಿ ವ್ಯವಹಾರ ನಡೆಸುತ್ತಿದ್ದಾರೆ. ಒಂದು ಜಿಲ್ಲೆಯಲ್ಲಿ ಇದ್ದು ನೆರೆಯ ರಾಜ್ಯದಲ್ಲಿ ವ್ಯವಹಾರ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಪರಸ್ಪರ ಮಾಹಿತಿ ಹಂಚಿಕೊಳ್ಳುವ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ. ಮಾಹಿತಿ ಹಂಚಿಕೆ ಹಾಗೂ ನಿರಂತರ ಸಂಪರ್ಕದ ಮೂಲಕ ಅಬಕಾರಿ ಅಕ್ರಮಗಳಿಗೆ ಕಡಿವಾಣ ಹಾಕಲು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ನಿಟ್ಟಿನಲ್ಲಿ ದೂರದೃಷ್ಟಿ ಕಾರ್ಯತಂತ್ರಗಳನ್ನು ಹಮ್ಮಿಕೊಳ್ಳುವ ಕುರಿತು ಒಮ್ಮತದಿಂದ ನಿರ್ಧರಿಸಲಾಯಿತು. ವಿಶೇಷವಾಗಿ ಈ ಮೂರು ರಾಜ್ಯದ ಗಡಿ ಜಿಲ್ಲೆಗಳಲ್ಲಿ ನಕಲಿ ಮದ್ಯ, ವಿಷಪೂರಿತ ಮದ್ಯ ಸೇವನೆಯಿಂದ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ, ಬೀದರ್‌ನ ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್, ಅಬಕಾರಿ ಅಧೀಕ್ಷಕ ಅನಿಲ ಪೋತದಾರ, ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ, ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು, ತೆಲಂಗಾಣ ಅಬಕಾರಿ ಇಲಾಖೆಯ ಮೇದಕ್ ವಿಭಾಗದ ಉಪ ಆಯುಕ್ತ ಹರಿಕಿಶನ್, ಸಂಗಾರೆಡ್ಡಿ ಜಿಲ್ಲೆಯ ಅಬಕಾರಿ ಅಧೀಕ್ಷಕಿ ಗಾಯತ್ರಿ, ಜಹೀರಾಬಾದ್‌ನ ಸ್ಟೇಶನ್‌ ಹೌಸ್‌ ಆಫೀಸರ್ ಅಶೋಕ, ನಾರಾಯಣಖೇಡದ ಸ್ಟೇಶನ್‌ ಹೌಸ್‌ ಆಫೀಸರ್ ಮಹೇಶ, ಮಹಾರಾಷ್ಟ್ರದ ಅಬಕಾರಿ ಇಲಾಖೆಯ ನಾಂದೇಡ್‌ ಜಿಲ್ಲೆಯ ಅಬಕಾರಿ ಅಧೀಕ್ಷಕ ಅತುಲ್ ಕಾನಡೆ, ಉಸ್ಮಾನಾಬಾದ್ ಜಿಲ್ಲೆಯ ಅಬಕಾರಿ ಅಧೀಕ್ಷಕ ಗಣೇಶ ಭರ್ಗಾಜೆ, ದೇಗಲೂರ್, ಉದಗಿರ್, ನೀಲಂಗಾ ಮತ್ತು ಉಮರ್ಗಾ ಅಬಕಾರಿ ಠಾಣೆಗಳ ಸಿಪಿಐ ಮತ್ತು ಉಪ ನಿರೀಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT