ಟಿಕೆಟ್‌ ಕೊಡಿಸಿದ ವಾಜಪೇಯಿ ನೆನೆದ ಪಾಂಡೆ

7

ಟಿಕೆಟ್‌ ಕೊಡಿಸಿದ ವಾಜಪೇಯಿ ನೆನೆದ ಪಾಂಡೆ

Published:
Updated:
Deccan Herald

ಬೀದರ್‌: ದಿವಂಗತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮೂರು ಬಾರಿ ಬೀದರ್‌ ಜಿಲ್ಲೆಗೆ ಬಂದಿದ್ದರು. ಜಿಲ್ಲೆಗೆ ಬಂದಾಗಲೆಲ್ಲ ಮಾಜಿ ಶಾಸಕ ರಮೇಕುಮಾರ ಪಾಂಡೆ ಅವರ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಜಿಲ್ಲೆಗೆ ಬಂದಿದ್ದ ಸಂದರ್ಭದಲ್ಲಿ ವಾಜಪೇಯಿ ಅವರೊಂದಿಗೆ ಕಳೆದ ದಿನಗಳನ್ನು ರಮೇಶಕುಮಾರ ಪಾಂಡೆ ಸ್ಮರಿಸಿದ್ದಾರೆ.

‘ನಮ್ಮ ಪೂರ್ವಜರು ಉತ್ತರಪ್ರದೇಶದ ಅಲಹಾಬಾದ್‌ ಮೂಲದವರು. 300 ವರ್ಷಗಳ ಹಿಂದೆ ಬೀದರ್‌ಗೆ ಬಂದ ನೆಲೆಸಿದರು. ನಮ್ಮ ಮಾತೃ ಭಾಷೆ ಹಿಂದಿ. ದೇವಿ ಕಾಲೊನಿಯಲ್ಲಿರುವ ನಮ್ಮ ಮನೆಯಲ್ಲಿ ಉತ್ತರಭಾರತದ ಶೈಲಿಯಲ್ಲಿ ಅಡುಗೆ ಮಾಡುವ ಕಾರಣ ವಾಜಪೇಯಿ ನಮ್ಮ ಮನೆಯಲ್ಲಿ ಊಟ ಮಾಡಲು ಇಷ್ಟಪಡುತ್ತಿದ್ದರು’ ಎಂದು ಪಾಂಡೆ ತಿಳಿಸಿದರು.

‘ಬೀದರ್‌ ಸಂಸದರಾಗಿದ್ದ ರಾಮಚಂದ್ರ ವೀರಪ್ಪ ಹಾಗೂ ವಾಜಪೇಯಿ ಅವರು ಬಹಳ ಆತ್ಮೀಯರಾಗಿದ್ದರು. ಅವರೊಬ್ಬ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ. ಹಿಂದೂ, ಮುಸ್ಲಿಂ ಎನ್ನುವ ಭೇದಭಾವ ಇರಲಿಲ್ಲ. ಯಾವುದೇ ಒಂದು ಜಾತಿಗೂ ಮಣೆ ಹಾಕಿದವರಲ್ಲ. ಅವರ ವ್ಯಕ್ತಿತ್ವದಿಂದ ಪ್ರೇರಣೆ ಪಡೆದು ರಾಜಕೀಯ ಸೇರಿದ್ದೆ’ ಎಂದು ಹೇಳಿದರು.

‘ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ನಾನು ಬೀದರ್‌ ವಿಧಾನಸಭೆಯ ಟಿಕೆಟ್ ಕೇಳಲು ದೆಹಲಿಗೆ ಹೋಗಿದ್ದೆ. ಅವರು ಲೋಕಸಭಾ ಕ್ಷೇತ್ರದ ಟಿಕೆಟ್‌ ಕೊಡುವೆ. ವಿಧಾನಸಭೆಯ ಟಿಕೆಟ್‌ ಯಡಿಯೂರಪ್ಪ ಅವರಿಗೆ ಕೇಳಿ ಎಂದು ಹೇಳಿದರು. ಮರುಕ್ಷಣವೇ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಟಿಕೆಟ್ ನೀಡಲು ಸೂಚಿಸಿದ್ದರು. ಮುಂದೆ ನನಗೆ ಟಿಕೆಟ್‌ ದೊರೆಯಿತು. 1999ರಲ್ಲಿ ಶಾಸಕನಾಗಿ ಆಯ್ಕೆಯೂ ಆದೆ’ ಎಂದು ವಾಜಪೇಯಿ ಔದರ್ಯವನ್ನು ಸ್ಮರಿಸಿದರು.

1983ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಚಿಟಗುಪ್ಪ, 1985ರಲ್ಲಿ ಹುಮನಾಬಾದ್‌ನ ಥೇರು ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. 1996ರಲ್ಲಿ ನಡೆದ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬೀದರ್‌ಗೆ ಬಂದಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !