ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಯಾದ ಮೊಬೈಲ್‌ ಬಳಕೆ ಸಲ್ಲ: ಆರ್. ರಾಘವೇಂದ್ರ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
Last Updated 13 ಅಕ್ಟೋಬರ್ 2018, 13:51 IST
ಅಕ್ಷರ ಗಾತ್ರ

ಬೀದರ್‌: ‘ಅತಿಯಾದ ಮೊಬೈಲ್‌ ಬಳಕೆಯು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್‌ ಬಳಸಿ ಪ್ರತಿಯೊಬ್ಬರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್. ರಾಘವೇಂದ್ರ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಕರು ಬೆಳಿಗ್ಗೆ ಎಚ್ಚರಗೊಂಡ ತಕ್ಷಣ ನೇರವಾಗಿ ಮೊಬೈಲ್‌ನಲ್ಲಿ ತಲ್ಲೀನರಾಗುತ್ತಿದ್ದಾರೆ. ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುವ ಕಾರಣ ಮಾನಸಿಕವಾಗಿ ಬೇಗ ಸುಸ್ತಾಗುತ್ತಿದ್ದಾರೆ. ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ’ ಎಂದು ತಿಳಿಸಿದರು.

‘ಪ್ರಸ್ತುತ 15 ರಿಂದ 25 ವರ್ಷದೊಳಗಿನವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಓದುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ, ದುಶ್ಚಟಗಳು ಕಾಣಿಸಿಕೊಳ್ಳುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಕಾನೂನು ಪ್ರಾಧಿಕಾರಗಳು ಯುವಕರಲ್ಲಿ ಜಾಗೃತಿ ಮೂಡಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಕಾನೂನು ಅನ್ವಯ ಅವರಿಗೆ ರಕ್ಷಣೆ ಒದಗಿಸಲು ಮುಂದಾಗಬೇಕು’ ಎಂದು ಹೇಳಿದರು.

ಬ್ರಿಮ್ಸ್‌ನ ಮನೋರೋಗ ತಜ್ಞೆ ಡಾ.ಪೂರ್ಣಿಮಾ ಮಾತನಾಡಿ, ‘ಪ್ರತಿಯೊಬ್ಬರು ಒತ್ತಡ ನಿರ್ವಹಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಒತ್ತಡ ನಿರ್ವಹಣೆ ಮಾಡಿಕೊಳ್ಳದಿದ್ದರೆ ಮಾನಸಿಕ ದೌರ್ಬಲ್ಯ ಸೇರಿದಂತೆ ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ’ ಎಂದು ತಿಳಿಸಿದರು.

‘ಶೇಕಡ ಶೇ 80ರಷ್ಟು ಜನರಿಗೆ ಅತಿಯಾದ ಆಲೋಚನೆಯಿಂದ ಕಾಯಿಲೆಗಳು ಬರುತ್ತಿವೆ. ಜ್ಞಾನಕ್ಕೆ ಸಂಬಂಧಿಸಿದ ಎಲ್ಲವೂ ಮನಸ್ಸಿಗೆ ಸಂಬಂಧಿಸಿರುತ್ತದೆ. ಮನಸ್ಸು ಕಲುಷಿತಗೊಂಡರೆ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ಹೇಳಿದರು.

ಮನೋರೋಗ ತಜ್ಞ ಡಾ.ಅಭಿಜೀತ ಪಾಟೀಲ ಮಾತನಾಡಿ, ‘ಇಡೀ ವಿಶ್ವದಲ್ಲೇ ಭಾರತ ಅತಿ ಹೆಚ್ಚು ಯುವ ಜನರನ್ನು ಹೊಂದಿದೆ. ದೇಶದ ನಿಜವಾದ ಭವಿಷ್ಯ ಅವರ ಕೈಯಲ್ಲಿದೆ. ಆದರೆ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ’ ಎಂದರು.

‘ಚಂಚಲತೆ, ಚಿತ್ತ ವಿಕಲತೆ, ಮದ್ಯ ವ್ಯಸನ, ಮಾದಕ ವಸ್ತುಗಳ ಸೇವನೆ, ಖಿನ್ನತೆ, ಮನೋದೈಹಿಕ ಬೇನೆಗಳು
ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತೆ ಮಾಡುತ್ತಿವೆ’ ಎಂದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ರಾಜಶೇಖರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪ್ರಸ್ತುತ ವಿದ್ಯಾರ್ಥಿಗಳ ಮೇಲೂ ಒತ್ತಡ ಹೆಚ್ಚುತ್ತಿದೆ. ಪೋಷಕರು ಸ್ವಪ್ರತಿಷ್ಠೆಗಾಗಿ ಹೆಚ್ಚಿನ ಅಂಕಗಳಿಗೆ ಮಕ್ಕಳ ಮೇಲೆ ಒತ್ತಡ ಹೇರಿದರೆ, ಶಾಲೆಯಲ್ಲಿ ಶಿಕ್ಷಕರೂ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಮಾನಸಿಕ ಕಾಯಿಲೆಗೆ ಒಳಗಾಗುತ್ತಿದ್ದಾರೆ’ ಎಂದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಅನಿಲ ಚಿಂತಾಮಣಿ ಅಧ್ಯಕ್ಷತೆ ವಹಿಸಿದ್ದರು. ಮನೋರೋಗ ತಜ್ಞ ಡಾ.ರಾಘವೇಂದ್ರ ವಘಾಲೆ, ಸಹಾಯಕ ಔಷಧಿ ನಿಯಂತ್ರಣಾಧಿಕಾರಿ ಶರಣಬಸಪ್ಪ, ಡಾ.ಸಂಗಮೇಶ, ಸಹಾಯಕ ಆಡಳಿತಾಧಿಕಾರಿ ಅಬ್ದುಲ್ ಸಲೀಂ ಇದ್ದರು.

ಡಿ.ಎನ್.ಟಿ ಮೇಲ್ವಿಚಾರಕ ಪಂಢರಿನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೋಹನದಾಸ, ಹಿರಿಯ ಆರೋಗ್ಯ ಸಹಾಯಕ ಶಿವರಾಜ ಸಾಗರ, ಮನೋಹರ ಅಲಶೆಟ್ಟಿ ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುಧಾಳೆ ಸ್ವಾಗತಿಸಿದರು. ಸಂಗಪ್ಪ ಕಾಂಬಳೆ ನಿರೂಪಿಸಿದರು. ಜಿಲ್ಲಾ ಕುಷ್ಠರೋಗ ಮೇಲ್ವಿಚಾರಕ ವೀರಶೆಟ್ಟಿ ಚನಶೆಟ್ಟಿ ವಂದಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಹಾಗೂ ಬ್ರಿಮ್ಸ್ ಆಸ್ಪತ್ರೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT