ಬೀದರ್: ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಫ್ಲೆಮಿಂಗೊ; ವಲಸೆ ಹಕ್ಕಿ ಸಂಖ್ಯೆ ಇಳಿಮುಖ

7

ಬೀದರ್: ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಫ್ಲೆಮಿಂಗೊ; ವಲಸೆ ಹಕ್ಕಿ ಸಂಖ್ಯೆ ಇಳಿಮುಖ

Published:
Updated:
Prajavani

ಬೀದರ್: ಜಿಲ್ಲೆಯಲ್ಲಿ ಈ ವರ್ಷ ಮಳೆ ವಾಡಿಕೆಗಿಂತಲೂ ಕಡಿಮೆಯಾಗಿದೆ. ಡಿಸೆಂಬರ್‌ನಲ್ಲೇ ಕೆರೆ ಕಟ್ಟೆಗಳು ಬತ್ತಿವೆ. ಕಾರಂಜಾ ಜಲಾಶಯದಲ್ಲಿ ಮಾತ್ರ ನೀರು ಇದೆ. ಸಂತಾನೋತ್ಪತ್ತಿಗೆ ದೂರದ ದೇಶಗಳಿಂದ ಜಿಲ್ಲೆಗೆ ಪ್ರತಿ ವರ್ಷ ಬರುತ್ತಿದ್ದ ವಲಸೆ ಹಕ್ಕಿಗಳ ಸಂಖ್ಯೆ ಕ್ಷೀಣಿಸಿದೆ.

ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪ ಕಾರಂಜಾ ಹಿನ್ನೀರಲ್ಲಿ ಕಳೆದ ವಾರ ಫ್ಲಾಮಿಂಗೊ ಹಕ್ಕಿಗಳು ಸಂತಾನೋತ್ಪತ್ತಿಗೆ ಬಂದಿಳಿದಿವೆ. ಉತ್ತರ ಏಷ್ಯಾದ ‘ಪರ್ವತ ಹಕ್ಕಿ’ (ಬಾರ್‌ ಹೆಡೆಡ್‌ ಗೀಸ್‌), ಉದ್ದ ಮೂಗಿನ ಬಾತುಕೋಳಿ (ರೆಡ್ ಕ್ರೆಸ್ಟೆಡ್ ಪೋಚರ್ಡ್), ನಾರ್ಥರನ್ ಶೂವೆಲರ್, ಹಸಿರು ಗರಿಯ ಟೀಲ್, ಯುರೋಪ್‌ ಮೂಲದ ಯುರೇಶಿಯನ್ ವಿಗನ್, ಯುರೇಶಿಯನ್ ಸ್ಪೂನ್‌ಬಿಲ್, ಯುರೇಶಿಯನ್ ಮಾರ್ಷಾ ಹರ್ರೀರ್, ಯುರೇಶಿಯನ್ ಕೆಸ್ಟ್ರೆಲ್, ಸೈಬೇರಿಯನ್ ಸ್ಟೋನ್‌ಚಾಟ್, ಏಷ್ಯನ್ ಪೀಡ್ ಸ್ಟರಲಿಂಗ್, ಗ್ರೇ ನೆಕಡ್ ಬಂಟಿಂಗ್(ಬೂದು ಕುತ್ತಿಗೆಯ ಹಕ್ಕಿ) ಪಕ್ಷಿಗಳು ಕಾಣಿಸಿಕೊಂಡಿವೆ.

ವಲಸೆ ಬಂದಿರುವ ಬಹುತೇಕ ಹಕ್ಕಿಗಳು ಮಾರ್ಚ್‌ ವರೆಗೂ ಇಲ್ಲಿಯೇ ಉಳಿದು ಸಂತಾನೋತ್ಪತ್ತಿ ಮಾಡಿ ಯುರೋಪ್‌ ಹಾಗೂ ಮಂಗೋಲಿಯಾಕ್ಕೆ ಪ್ರಯಾಣ ಬೆಳೆಸಲಿವೆ. ಕಳೆದ ಹದಿನೈದು ದಿನಗಳಿಂದ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಪಕ್ಷಿ ವೀಕ್ಷಕರಾದ ಮೇಜರ್ ಪ್ರವೀಣಕುಮಾರ ಹಾಗೂ ವಿವೇಕ ಹಳ್ಳಿಖೇಡಕರ್ ಅವರು ವಲಸೆ ಹಕ್ಕಿಗಳ ಸಂಖ್ಯೆ ಕ್ಷೀಣಿಸಿರುವುದನ್ನು ಖಾತರಿ ಪಡಿಸಿದ್ದಾರೆ. ಇವರು ಅಂಕಿ ಅಂಶಗಳನ್ನು ದಾಖಲಿಸಿಕೊಂಡು ವೆಬ್‌ಸೈಟ್‌ನಲ್ಲೂ ಅಪ್‌ಲೋಡ್‌ ಮಾಡುತ್ತಿದ್ದಾರೆ.

ಯುರೋಪ್‌ ಮೂಲದ ಕೆಲ ಹಕ್ಕಿಗಳು ಭಾರತೀಯ ಉಪ ಖಂಡದಲ್ಲಿ ಚಳಿಗಾಲ ಕಳೆಯುತ್ತವೆ. ಜಲಾಶಯ ಅಥವಾ ನದಿಗಳಂತಹ ಒಳನಾಡಿನ ಜಲ ಸಮೂಹದಲ್ಲಿ ವಾಸ ಮಾಡುತ್ತವೆ. ಆಹಾರದ ಲಭ್ಯತೆ, ಹವಾಮಾನ ವೈಪರೀತ್ಯ ಹಾಗೂ ವಾಸಕ್ಕೆ ಪೂರಕವಾದ ವಾತಾವರಣ ಇದ್ದಕಡೆ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಇಲ್ಲದಿದ್ದರೆ ವಾಸಸ್ಥಾನವನ್ನೇ ಬದಲಿಸುತ್ತವೆ ಎಂದು ಹಕ್ಕಿ ಪ್ರೇಮಿಗಳು ಹೇಳುತ್ತಾರೆ.

‘ಹಕ್ಕಿಗಳು ವಲಸೆ ಹೋಗುವ ಪ್ರದೇಶಗಳನ್ನೇ ಬದಲಿಸಿದರೆ ಮುಂಗಾರು ಕಡಿಮೆಯಾಗುವ ಸಾಧ್ಯತೆ ಇದೆ ಎಂದರ್ಥ. ವಲಸೆ ಹಕ್ಕಿಗಳನ್ನು ಆಧಾರವಾಗಿಟ್ಟುಕೊಂಡು ಹವಾಮಾನ ತಜ್ಞರು ಮುಂಗಾರು ಅಧ್ಯಯನ ಮಾಡುವುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎನ್ನುತ್ತಾರೆ ವಿವೇಕ ಹಳ್ಳಿಖೇಡಕರ್‌.

ಸಮೀಕ್ಷೆ ಪ್ರಕಾರ ವರ್ಷದ ಅವಧಿಯಲ್ಲಿ 159 ಬಗೆಯ ಪಕ್ಷಿ ಪ್ರಬೇಧಗಳು ಕಾಣಿಸಿಕೊಳ್ಳುತ್ತವೆ. ಪ್ರತಿ ವರ್ಷ ವಿವಿಧ ಬಗೆಯ ಪಕ್ಷಿಗಳು ಬಂದು ಹೋಗುತ್ತವೆ. ಕಾರಂಜಾ ಜಲಾಶಯ ವಲಸೆ ಹಕ್ಕಿಗಳಿಗೆ ಶಾಶ್ವತ ತಾಣವಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಕಾರಂಜಾ ಹಿನ್ನೀರ ಪ್ರದೇಶವನ್ನು ಪಕ್ಷಿಧಾಮವನ್ನಾಗಿ ಘೋಷಣೆ ಮಾಡಬೇಕು’ ಎಂದು ಮೇಜರ್‌ ಪ್ರವೀಣಕುಮಾರ ಮನವಿ ಮಾಡುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !