ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ಅಮಾನತಿಗೆ ಸಚಿವರ ಆದೇಶ

ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಅವ್ಯವಸ್ಥೆ
Last Updated 31 ಡಿಸೆಂಬರ್ 2019, 15:48 IST
ಅಕ್ಷರ ಗಾತ್ರ

ಬೀದರ್‌: ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆಯ ಮೂವರು ಅಧಿಕಾರಿಗಳ ಅಮಾನತಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಆದೇಶ ನೀಡಿದರು.

ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ದಂಗಾದರು.

ಸಮಾಜ ಕಲ್ಯಾಣ ಇಲಾಖೆಯ ಬೀದರ್‌ ತಾಲ್ಲೂಕು ಅಧಿಕಾರಿ ಅನಿಲಕುಮಾರ, ಮೆಟ್ರಿಕ್‌ ನಂತರದ ಎರಡು ವಸತಿ ನಿಲಯಗಳ ವಾರ್ಡನ್‌ ಮಹಮ್ಮದ್ ಹಫೀಜ್‌ ಹಾಗೂ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ನಾಗನಾಥ ಅವರನ್ನು ಅಮಾನತು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಅವರಿಗೆ ಸೂಚನೆ ನೀಡಿದರು.

ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಊಟು ಮಾಡುತ್ತಿದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಪ್ರತಿದಿನ ಯಾವ ಆಹಾರ ಕೊಡಬೇಕು ಎನ್ನುವ ವಾರದ ಪಟ್ಟಿಯನ್ನು ಮುಚ್ಚಿಟ್ಟು ಹಾಗೂ ಪಟ್ಟಿ ಪ್ರಕಾರ ವಿದ್ಯಾರ್ಥಿಗಳಿಗೆ ಆಹಾರ ಕೊಡದ ಹಾಸ್ಟೆಲ್‌ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರು ವಾರ್ಡನ್‌ ಅವರನ್ನು ಸ್ಥಳಕ್ಕೆ ಕರೆಸಿ ಕಡತಗಳನ್ನು ಪರಿಶೀಲಿಸಿದಾಗ ನಾಲ್ಕು ತಿಂಗಳ ವರೆಗೆ ನೋಂದಣಿ ಪುಸ್ತಕದಲ್ಲಿ ಆಹಾರ ಧಾನ್ಯ ಹಾಗೂ ತರಕಾರಿ ಖರೀದಿಸಿದ ಉಲ್ಲೇಖವೇ ಇರಲಿಲ್ಲ. ‘ನಾನು ನಾಲ್ಕು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದೆನೆ. ಕೆಲಸ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ರಜಿಸ್ಟರ್‌ನಲ್ಲಿ ಬರೆದಿಲ್ಲ’ ಎಂದು ವಾರ್ಡನ್‌ ತಿಳಿಸಿದರು.

‘ಕೆಲಸಕ್ಕೆ ಸೇರಿ ನಾಲ್ಕು ತಿಂಗಳಾದರೂ ಕೆಲಸದ ಸ್ವರೂಪವನ್ನು ತಿಳಿದುಕೊಳ್ಳದಿದ್ದರೆ ಹೇಗೆ. ನಿಮ್ಮಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಸರಿಯಾಗಿ ಬಿಸಿ ನೀರು ಹಾಗೂ ಗ್ರಂಥಾಲಯದಲ್ಲಿ ಪುಸ್ತಕಗಳು ಇಲ್ಲದಿರುವ ಬಗ್ಗೆ ದೂರಿದರು.

ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಕ್ಕೂ ತೆರಳಿ ಆವರಣದಲ್ಲಿ ಕಸ ತುಂಬಿಕೊಂಡಿರುವುದನ್ನು ನೋಡಿ ಸಚಿವರು ‘ಇದೇ ಸ್ವಚ್ಛ ಭಾರತವೇ’ ಎಂದು ಪ್ರಶ್ನಿಸಿದರು.

‘ಸಾರ್ವಜನಿಕರು ಹಾಸ್ಟೆಲ್‌ ಆವರಣದಲ್ಲಿ ಬಯಲು ಶೌಚ ಮಾಡಿ ಹೋಗುತ್ತಿದ್ದರೂ ಮೌನವಾಗಿರುವುದು ಹಾಗೂ ಹಾಸ್ಟೆಲ್‌ ಆವರಣದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶ ಕಲ್ಪಿಸಿರುವುದು ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದರು.

ಹಾಸ್ಟೆಲ್‌ನಲ್ಲಿ ಜನರೇಟರ್, ಸೋಲಾರ್‌ ಹೀಟರ್‌ ಹಾಳಾಗಿರುವುದು ಹಾಗೂ ಕಟ್ಟಡ ಸೋರುತ್ತಿರುವುದನ್ನು ಕಂಡು ತಕ್ಷಣ ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಸೂಚಿಸಿದರು.

ಖಾಸಗಿ ವ್ಯಕ್ತಿಗಳು ಆವರಣ ಗೋಡೆ ಒಡೆದಿರುವುದನ್ನು ತೋರಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT