ಬುಧವಾರ, ಸೆಪ್ಟೆಂಬರ್ 18, 2019
25 °C
ಪಶು ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆ

ಬೀದರ್‌: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವ

Published:
Updated:
Prajavani

ಬೀದರ್‌: ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಸೋಮವಾರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಗರದ ವಿವಿಧ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು.

ಮದ್ಯ ಸೇವಿಸಿ ಬಂದಿದ್ದ ಒಬ್ಬ ಸಿಬ್ಬಂದಿಯನ್ನು ಸ್ಥಳದಲ್ಲೇ ಅಮಾನತು ಮಾಡಲು ಆದೇಶ ನೀಡಿದರೆ, ಕಚೇರಿಗೆ ಬಾರದ ಐವರಿಗೆ ಶೋಕಾಸ್‌ ನೋಟಿಸ್‌ ನೀಡಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮದ್ಯ ಸೇವಿಸಿ ಕಚೇರಿಗೆ ಬಂದಿದ್ದ ಜಿಲ್ಲಾ ಕೋಳಿ ಸಾಕಾಣಿಕೆ ಹಾಗೂ ತರಬೇತಿ ಕೇಂದ್ರದ ‘ಡಿ’ ದರ್ಜೆ ನೌಕರ ಬಾಬು ಅವರನ್ನು ಅಮಾನತುಗೊಳಿಸುವಂತೆ ಸೂಚನೆ ನೀಡಿದರು. ಕಚೇರಿಯಲ್ಲಿ ಗುಟ್ಕಾ ತಿಂದು ಆವರಣದಲ್ಲಿ ಉಗಿಯುತ್ತಿದ್ದ ಜಿಲ್ಲಾ ಕೋಳಿ ಸಾಕಾಣಿಕೆ ಹಾಗೂ ತರಬೇತಿ ಕೇಂದ್ರದ ಜಾನುವಾರು ಅಭಿವೃದ್ಧಿ ಅಧಿಕಾರಿ ಎನ್‌.ಗಾಂಧಿ ಅವರಿಗೆ ಎಚ್ಚರಿಕೆ ನೀಡಿದರು.

ಕಚೇರಿಗೆ ಬಾರದ ಉಪ ನಿರ್ದೇಶಕರ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿಯರಾದ ಸಾರಿಕಾ, ಝರಿನಾ, ಪಶು ವೈದ್ಯಕೀಯ ಪರೀಕ್ಷಕ ಅಣ್ಣಾರಾವ್, ಜಿಲ್ಲಾ ಕೋಳಿ ಸಾಕಾಣಿಕೆ ಹಾಗೂ ತರಬೇತಿ ಕೇಂದ್ರದ ಡಿ.ದರ್ಜೆ ನೌಕರ ಚೆನ್ನಬಸಪ್ಪ, ಎಸ್‌ಡಿಎ ಮಂಜುನಾಥ ಅವರ ಒಂದು ದಿನದ ವೇತನ ಕಡಿತಗೊಳಿಸಲು ಸಚಿವರು ಆದೇಶ ನೀಡಿದರು.

ಪ್ರಭು ಚವಾಣ್‌ ಅವರು ಪತ್ರಕರ್ತರೊಂದಿಗೆ ಬೆಳಿಗ್ಗೆ 10 ಗಂಟೆಗೆ ವಾರ್ತಾ ಇಲಾಖೆಯ ವಾಹನದಲ್ಲೇ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಬಂದರು. ವಾಹನದಿಂದ ಕೆಳಗೆ ಇಳಿಯುವವರೆಗೂ ಕಚೇರಿ ಸಿಬ್ಬಂದಿಗೆ ಏನೂ ತಿಳಿದಿರಲಿಲ್ಲ. ಸಚಿವರು ನೇರವಾಗಿ ಕಚೇರಿಯೊಳಗೆ ಪ್ರವೇಶಿಸುತ್ತಿದ್ದಂತೆ ಕೆಲವರು ಹೌಹಾರಿದರು.

ಬೆಳಿಗ್ಗೆ 10.40 ಆಗಿದ್ದರೂ ಕೆಲವರು ಕಚೇರಿಗೆ ಬಂದಿರಲಿಲ್ಲ. ಇನ್ನು ಕೆಲವರು ಸಚಿವರು ಕಚೇರಿಗೆ ಬಂದಿರುವ ಮಾಹಿತಿ ದೊರೆತ ತಕ್ಷಣ ಧಾವಿಸಿ ಬಂದರು. ಸಚಿವರು ಹಾಜರಿ ಪುಸ್ತಕ ಮುಂದೆ ಇಟ್ಟುಕೊಂಡು ಪ್ರತಿಯೊಬ್ಬರ ಹಾಜರಿ ತೆಗೆದುಕೊಂಡರು. ಕಚೇರಿಗೆ ಬಾರದ ಒಟ್ಟು ಐವರು ಸಿಬ್ಬಂದಿ ಹೆಸರಿನ ಮುಂದೆ ಗೈರು ಎಂದು ಬರೆದು ಸಹಿ ಹಾಕಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಹಿಂದಿಯಲ್ಲಿ ಮಾತನಾಡಲು ಶುರು ಮಾಡಿದಾಗ ಕನ್ನಡದಲ್ಲೇ ಮಾತನಾಡುವಂತೆ ತಾಕೀತು ಮಾಡಿದರು. ಗುಟ್ಕಾ ಜಗಿಯುತ್ತಿದ್ದ ಎನ್‌. ಗಾಂಧಿ ಅವರನ್ನು ಅಮಾನತುಗೊಳಿಸುವಂತೆ ಸೂಚಿಸಿದಾಗ ‘ಇದೊಂದು ಬಾರಿ ಗಾಂಧಿ ಅವರನ್ನು ಕ್ಷಮಿಸಿ ಸರ್’ ಎಂದು ಉಪ ನಿರ್ದೇಶಕ ರವಿಕುಮಾರ ಭುರೆ ಸಚಿವರಲ್ಲಿ ವಿನಂತಿಸಿಕೊಂಡರು. ‘ನೀವು ಸಹ ಕಚೇರಿಗೆ ತಡವಾಗಿ ಬಂದಿದ್ದೀರಿ. ನಿಮ್ಮ ವಿರುದ್ಧವೂ ಏಕೆ ಕ್ರಮ ಕೈಗೊಳ್ಳಬಾರದು’ ಎಂದು ಪ್ರಶ್ನಿಸುವ ಮೂಲಕ ಅವರಿಗೂ ಬಿಸಿ ಮುಟ್ಟಿಸಿದರು.

ನಂತರ ಓಲ್ಡ್‌ಸಿಟಿಯಲ್ಲಿರುವ ಪಶು ಆಸ್ಪತ್ರೆಗೂ ತೆರಳಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಒಳಗೆ ಚೀಲವೊಂದರಲ್ಲಿ ಕಸ ಸಂಗ್ರಹಿಸಿ ಇಟ್ಟಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಪ್ರಧಾನಮಂತ್ರಿ ಸ್ವಚ್ಛ ಭಾರತ ಅಭಿಯಾನ ನಡೆಸುತ್ತಿದ್ದರೆ, ನೀವು ಇಲ್ಲಿ ಕಸ ಸಂಗ್ರಹಿಸಿ ಇಟ್ಟುಕೊಂಡಿದ್ದೀರಿ ಇದೇನಾ? ನಿಮ್ಮ ಸ್ವಚ್ಛತೆ’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ವೈದ್ಯರು ಒಂದೂ ಮಾತನಾಡದೆ ಮೌನವಾಗಿ ನಿಂತರು.

ನಗರದ ಗಾಂಧಿ ಗಂಜ್‌ನಲ್ಲಿರುವ ಪಶು ಆಸ್ಪತ್ರೆ ಹಾಗೂ ಜೈವಿಕ ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಚಿಕಿತ್ಸಾಲಯದಲ್ಲಿ ಅವಧಿ ಮೀರಿದ ಔಷಧಗಳನ್ನು ಇಟ್ಟಿರುವುದು ಕಂಡು ಬಂದಿತು. ‘ಮೂಕಪ್ರಾಣಿಗಳಿಗೆ ಇಂತಹ ಔಷಧಿ , ಚುಚ್ಚುಮದ್ದು ಕೊಟ್ಟರೆ ಹೇಗೆ? ನಿಮಗೆ ಯಾರು ಹೇಳುವವರು ಕೇಳುವವರು ಇಲ್ಲವೇ’ ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ನಾರಾಯಣ ಸ್ವಾಮಿ ಅವರಿಗೂ ಕರೆ ಮಾಡಿ ಬಿಸಿ ಮುಟ್ಟಿಸಿದರು. ಅವಧಿ ಮೀರಿದ ಔಷಧ ಪೂರೈಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ನಿರ್ದೇಶನ ನೀಡಿದರು.

 ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಗೌತಮ ಅರಳಿ ಇದ್ದರು.
 

Post Comments (+)