ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಜೆಂಟರಂತೆ ಚುನಾವಣೆ ಆಯೋಗದ ದುರ್ಬಳಕೆ: ಈಶ್ವರ ಖಂಡ್ರೆ ಆರೋಪ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪ
Last Updated 28 ಸೆಪ್ಟೆಂಬರ್ 2019, 13:58 IST
ಅಕ್ಷರ ಗಾತ್ರ

ಬೀದರ್: ‘ಕೇಂದ್ರದ ಬಿಜೆಪಿ ಸರ್ಕಾರವು ಚುನಾವಣೆ ಆಯೋಗವನ್ನು ಏಜೆಂಟರಂತೆ ಬಳಸಿಕೊಳ್ಳುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

‘ಕೇಂದ್ರ ಸರ್ಕಾರ, ಸಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಚುನಾವಣೆ ಆಯೋಗವು ನಿಷ್ಪಕ್ಷಪಾತ ಚುನಾವಣೆ ನಡೆಸುವ ಮೂಲಕ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು’ ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದರು.

‘ಬಿಜೆಪಿಗೆ ಬರಲು ಒಪ್ಪದ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಇಡಿ ವಿಚಾರಣೆಗೆ ಒಳಪಡಿಸುತ್ತಿದೆ. ಐಟಿ ದಾಳಿಯನ್ನೂ ನಡೆಸುತ್ತಿದೆ’ ಎಂದು ಗಂಭೀರ ಆರೋಪ ಮಾಡಿದರು.

‘ಇಡಿ ದಾಳಿಗೆ ನಾನು ಹೆದರಲ್ಲ. ಕಾರಣ, ನನ್ನಿಂದ ಯಾವ ತಪ್ಪೂ ಆಗಿಲ್ಲ. ಬಿಜೆಪಿ ವೈಯಕ್ತಿಕ ದ್ವೇಷ ಇಟ್ಟುಕೊಂಡು ಸಂವಿಧಾನಿಕ ಸಂಸ್ಥೆಗಳ ಮೂಲಕ ಮುಖಂಡರ ಮೇಲೆ ದಾಳಿ ನಡೆಸುತ್ತಿದೆ. ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ನಾವು ಬಿಜೆಪಿಯಂತೆಯೇ ಮಾಡಬೇಕು ಎನ್ನುವ ಪರಿಪಾಠ ಹಾಕುತ್ತಿದೆ’ ಎಂದು ಹೇಳಿದರು.

‘ಉಪ ಚುನಾವಣೆಗೆ ಕಾಂಗ್ರೆಸ್‌ ಸಿದ್ಧವಿದೆ. ಉಪ ಚುನಾವಣೆಯಲ್ಲಿ ಬೇರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಪಕ್ಷದ ಹಿರಿಯರಿಗೆ ಬಿಟ್ಟ ವಿಷಯ. ಈ ವಿಷಯದಲ್ಲಿ ನಮ್ಮ ಪಾತ್ರ ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ವೈಯಕ್ತಿಕ ವರ್ಚಸ್ಸು ಅಲ್ಲ, ಪಕ್ಷದ ವರ್ಚಸ್ಸಿನ ಮೇಲೆ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಕಾಂಗ್ರೆಸ್‌ ಶಾಸಕರ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಅನುದಾನ ಕಡಿತಗೊಳಿಸಿ, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹಂಚಿಕೆ ಮಾಡಿದೆ. ಭಾಲ್ಕಿ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಟೆಂಡರ್‌ ಕರೆದ ಕಾಮಗಾರಿಯನ್ನೂ ಸ್ಥಗಿತಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕದ ಹೆಸರಿಟ್ಟು ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತಗೊಳಿಸುವುದು ಖಂಡನೀಯ’ ಎಂದರು.

ರೈತರಿಗೆ ಬೆಳೆ ನಷ್ಟ ಪರಿಹಾರ ಕೊಡಿ

‘ರಾಜ್ಯದ ಕೆಲ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಬಿಜೆಪಿ ಸರ್ಕಾರ, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ಕೈಗಾರಿಕೋದ್ಯಮಿಗಳಿಗೆ ಲಾಭ ಮಾಡುತ್ತಿದೆ. ಸಾಲದಲ್ಲೇ ಬೆಳೆ ವಿಮೆ ಕಂತು ಪಡೆದಿರುವ ರೈತರು ಸಂಕಷ್ಟದಲ್ಲಿರುವ ಕಾರಣ ಅವರಿಗೆ ವಿಮಾ ಕಂಪನಿಗಳು ಅಲ್ಪಾವಧಿ ಬೆಳೆ ನಷ್ಟ ಪರಿಹಾರ ಕೊಡಬೇಕು’ ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಕೃಷಿಗೆ ₹ 25 ರಿಂದ ₹30 ಸಾವಿರ ಕೋಟಿ ಅನುದಾನ ಇಟ್ಟಿದೆ. ಒಂದು ಎಕರೆಗೆ ₹ 5 ಸಾವಿರದಿಂದ ₹ 10 ಸಾವಿರ ಪರಿಹಾರ ಕೊಡಬಹುದಾಗಿದೆ. ಜಿಲ್ಲಾ ಆಡಳಿತ ಸಮೀಕ್ಷೆ ನಡೆಸಿ ವರದಿ ತರಸಿ ಕೊಂಡು ರೈತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿತ್ತು. ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ. ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.
‘ರೈತರು ಬೆಳೆದ ಹೆಸರು ಹಾಗೂ ಉದ್ದು ಬೆಂಬಲ ಬೆಲೆಯಲ್ಲಿ ಖರೀದಿಗೆ ಮಿತಿ ವಿಧಿಸುವ ಮೂಲಕ ದಲ್ಲಾಳಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ರೈತರ ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ. ತಕ್ಷಣ ಮಿತಿ ತೆರವುಗೊಳಿಸಿ ರೈತರು ಬೆಳೆದ ಎಲ್ಲ ಹೆಸರು, ಉದ್ದು ಖರೀದಿಸಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 100 ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಪ್ರಸ್ತುತ ಕೇವಲ 30 ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರ ಬಗ್ಗೆ ಕಾಳಜಿ ಇದ್ದರೆ ಹೆಚ್ಚಿನ ಖರೀದಿ ಕೇಂದ್ರಗಳನ್ನು ತೆರೆಯಬೇಕು’ ಎಂದು ತಿಳಿಸಿದರು.

ಪೆಗ್‌ ಹಾಕಿದರೂ ನಿದ್ದೆ ಬರುತ್ತಿಲ್ಲ

‘ಬಿಜೆಪಿ ಸೇರಿದವರಿಗೆ ಒಂದು ಪೆಗ್‌ ಹಾಕಿದರೂ ರಾತ್ರಿ ನಿದ್ದೆ ಬರುತ್ತಿಲ್ಲ. ಹೀಗಾಗಿ ಇನ್ನೊಂದು ಪೆಗ್‌ ಕುಡಿದು ನಿದ್ದೆ ಮಾಡುತ್ತಿದ್ದಾರೆ. ಹಾಗಂತ ಬಿಜೆಪಿ ಜತೆ ಗುರುತಿಸಿಕೊಂಡ ಮುಖಂಡರೊಬ್ಬರು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ’ ಎಂದು ಈಶ್ವರ ಖಂಡ್ರೆ ಹೇಳಿದರು.

‘ಪಕ್ಷದ ಸಭೆಯಲ್ಲಿ ಮುಖಂಡರಾದ ಸಿದ್ದರಾಮಯ್ಯ ಹಾಗೂ ಕೆ.ಎಚ್‌.ಮುನಿಯಪ್ಪ ಏಕವಚನದಲ್ಲಿ ಮಾತನಾಡಿರುವುದು ನಿಜ. ಸಲುಗೆ ಹಾಗೂ ಪ್ರೀತಿಯಿಂದಾಗಿ ಮಾತನಾಡಿರುವುದನ್ನೇ ತಪ್ಪಾಗಿ ಅರ್ಥೈಸುವ ಅಗತ್ಯ ಇಲ್ಲ’ ಎಂದು ಹೇಳಿದರು.

ಬೀದರ್ ನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ತನಿಖೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಹಿಂದೆಯೇ ಹೇಳಿದ್ದೇನೆ. ತೋರಿಕೆಗೆ ಸಮಿತಿ ರಚನೆ, ಹೇಳಿಕೆ ಬೇಡ. ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT