ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಜಲಾಶಯಗಳು; ಬತ್ತಿದ ಕೆರೆಗಳು

ಯಾದಗಿರಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ತೀವ್ರ ಅಭಾವ
Last Updated 26 ಏಪ್ರಿಲ್ 2018, 14:09 IST
ಅಕ್ಷರ ಗಾತ್ರ

ಯಾದಗಿರಿ: ಯಾದಗಿರಿ ತಾಲ್ಲೂಕಿನ ‘ಹತ್ತಿಕುಣಿ’ ಮತ್ತು ‘ಸೌದಾಗರ’ ಜಲಾಶಯಗಳು ಬರಿದಾಗಿದ್ದು, ಸುತ್ತಮುತ್ತಲಿನ ರೈತರ ಹೊಲಗಳಲ್ಲಿನ ಕೊಳವೆಬಾವಿಗಳು ಜಿನುಗತೊಡಗಿವೆ. ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಕೇಳಿ ಬರತೊಡಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ ಒಟ್ಟು 3,98,359 ಜನಸಂಖ್ಯೆ ಇದೆ. ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರ ಕೊರತೆ ತೀವ್ರವಾಗಿ ಕಾಡುತ್ತಿದ್ದರೂ, ಜಿಲ್ಲಾಡಳಿತ ಚುನಾವಣಾ ಕಾರ್ಯದಲ್ಲಿ ಮೈಮರೆತಿದೆ.

ಯಾದಗಿರಿ ನಗರ ಪ್ರದೇಶಕ್ಕೆ ಭೀಮಾನದಿ ನೀರು ಆಧಾರವಾಗಿದೆ. ಆದರೆ, ನದಿಯ ನೀರಿನ ಹರಿವು ಸಂಪೂರ್ಣ ಕುಸಿದಿದೆ. ಜಾಕ್‌ವೆಲ್‌ಗೆ ನೀರು ನುಗ್ಗುವಷ್ಟು ನೀರಿನ ಒತ್ತಡ ಇಲ್ಲದಾಗಿದೆ. ಗುರಸಣಗಿ ಬ್ಯಾರೇಜ್ ನೀರನ್ನು ನದಿ ಹರಿಸಿದರೆ ಜಾಕ್‌ವೆಲ್‌ಗೆ ನೀರು ನಗ್ಗುತ್ತದೆ. ಆದರೆ, ಸರ್ಕಾರದ ಆದೇಶದ ಅನುಸಾರ ಬ್ಯಾರೇಜ್ ನೀರನ್ನು ಬೇಸಿಗೆ ಮುಗಿಯುವವರೆಗೂ ನದಿ ಬಿಡುವಂತಿಲ್ಲ. ಹಾಗಾಗಿ, ನಗರ ನಿವಾಸಿಗಳೂ ನೀರಿನ ಅಭಾವ ಎದುರಿಸುವಂತಾಗಿದೆ ಎಂದು ನಗರದ ನಿವಾಸಿಗಳು ಹೇಳುತ್ತಾರೆ.

ಯಾದಗಿರಿಯಲ್ಲಿನ ಶುದ್ಧೀಕರಣ ಘಟಕ ಕೇವಲ 10 ಲಕ್ಷ ಗ್ಯಾಲನ್‌ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಇಷ್ಟು ನೀರನ್ನು ನಿತ್ಯ 30 ಸಾವಿರ ಜನಸಂಖ್ಯೆಗೆ ಮಾತ್ರ ಪೂರೈಸಬಹುದು. ಉಳಿದ 70 ಸಾವಿರ ಜನಸಂಖ್ಯೆ ನಗರ ನಿವಾಸಿಗಳು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. 24X7 ಯೋಜನೆಯಡಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂಬುದಾಗಿ ನಗರಸಭೆ ಹೇಳಿದರೂ 17 ಬಡಾವಣೆಗಳಲ್ಲಿ ಕುಡಿಯುವ ನೀರಿನ ಸ್ಥಿತಿಗತಿ ಕಠೋರವಾಗಿದೆ.

ಗ್ರಾಮೀಣ ಭಾಗದ ಪರಿಸ್ಥಿತಿ ಭಿನ್ನವಿಲ್ಲ. ವರ್ಕನಹಳ್ಳಿ, ಅನಪುರ, ಯಲಸತ್ತಿ, ಕೌಳೂರು, ಚಂಡ್ರಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿವೆ. ಕಳೆದ ವರ್ಷದ ಬೇಸಿಗೆಯಲ್ಲೂ ಈ ಗ್ರಾಮಗಳಿಗೆ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಬೇಜವಾಬ್ದಾರಿ ತೋರಿವೆ. ಹಾಗಾಗಿ, ನೀರಿನ ಹಾಹಾಕಾರದಿಂದ ಜನರು ಗುಳೆ ಹೋದದ್ದು ಉಂಟು ಎಂದು ಕೌಳೂರಿನ ಬಸವರಾಜ, ಶಿವಣ್ಣ ಕುರುಬರ ಹೇಳುತ್ತಾರೆ.

ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಕೊಳವೆಬಾವಿಗಳು ಪ್ರಮುಖ ಜಲಮೂಲಗಳಾಗಿವೆ. ಅಂತರ್ಜಲಮಟ್ಟ ಚೆನ್ನಾಗಿರುವ ಕಡೆಗಳಲ್ಲಿ ತೆರೆದ ಬಾವಿಗಳಲ್ಲಿ ನೀರು ಸಂಗ್ರಹ ಇದೆ. ಏಪ್ರಿಲ್‌, ಮೇ ತಿಂಗಳಿನಲ್ಲಿ ತೆರೆದ ಬಾವಿಗಳ ಜತೆಗೆ ಕೊಳವೆ ಬಾವಿಗಳೂ ಸಹ ಬತ್ತುವುದರಿಂದ ಯಾದಗಿರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೀರಿನ ಅಭಾವ ತೀವ್ರಗೊಳ್ಳುವ ಎಲ್ಲ ಲಕ್ಷಣಗಳು ಇವೆ ಎನ್ನುತ್ತಾರೆ ಹತ್ತಿಕುಣಿಯ ಮಲ್ಲಯ್ಯ, ಲಿಂಗೇರಿಯ ಹಣಮಂತ.

ಕೆರೆಗಳಲ್ಲಿ ಕುಸಿದ ನೀರಿನ ಸಂಗ್ರಹ:
ಯಾದಗಿರಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ ಪ್ರಮಾಣ 81 ಮಿಲಿ ಮೀಟರ್ ಇದೆ. ಆದರೆ, ಪ್ರಸಕ್ತ ವರ್ಷದಲ್ಲಿ 137 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ 70ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಹೂಳಿನಿಂದಾಗಿ ಹೆಚ್ಚು  ಕೆರೆಗಳಲ್ಲಿ ಸಂಗ್ರಹವಾಗಿಲ್ಲ. ಇದರಿಂದಾಗಿ ಪ್ರತಿ ವರ್ಷದ ಬೇಸಿಗೆ ಆರಂಭದಲ್ಲಿಯೇ ಕೆರೆಗಳು ಬತ್ತುತ್ತಿವೆ. ಎಷ್ಟೋ ಕೆರೆಗಳು ಏಪ್ರಿಲ್ ಅಂತ್ಯದಲ್ಲಿ ಒಣಗಿವೆ. ಗುಂಡನಹಳ್ಳಿ, ಖಾನಾಪುರ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದೆ. ಹತ್ತಿಕುಣಿ ಜಲಾಶಯ ಬರಿದಾಗುತ್ತಾ ಬಂದಿದೆ.

ಕುಡಿಯುವ ನೀರಿಗೆ ₹35 ಕೋಟಿ ವೆಚ್ಚ:
ಸರ್ಕಾರದ ಮೇಲೆ ಒತ್ತಡ ಹಾಕಿದ್ದರಿಂದ ನಗರಕ್ಕೆ ಕುಡಿಯುವ ನೀರಿಗಾಗಿ ₹ 35ಕೋಟಿ ಅನುದಾನ ಮಂಜೂರು ಆಗಿದೆ. ಗುರಸಣಗಿ ಬ್ರಿಡ್ಜ್‌ ಕಂ ಬ್ಯಾರೇಜ್ ಬಳಿ ₹15 ಕೋಟಿ ವೆಚ್ಚದಲ್ಲಿ ಜಾಕ್‌ವೆಲ್‌ ಅಳವಡಿಸುವ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಲಾಗುವುದು. ₹ 6 ಕೋಟಿ ವೆಚ್ಚದಲ್ಲಿ ಲಕ್ಷ್ಮಿ ನಗರದಲ್ಲಿ, ಗಂಜ್‌ ಪ್ರದೇಶ, ಹತ್ತಿಕುಣಿ ಕ್ರಾಸ್ ಬಳಿ ತಲಾ ಒಂದೊಂದು ಸೇರಿದಂತೆ ಒಟ್ಟು ಮೂರು ಓವರ್‌ಹೆಡ್ ಟ್ಯಾಂಕ್‌ ಮತ್ತು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಾರ್ಚ್‌ ಆರಂಭಕ್ಕೆ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ತಿಳಿಸಿದರು.

ಬೇಸಿಗೆ ಎದುರಿಸಲು ಸಿದ್ಧತೆ: ಮಾರ್ಚ್ ತಿಂಗಳಿನಲ್ಲಿ ಯಾದಗಿರಿ ತಾಲ್ಲೂಕುಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಜತೆಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಯಾವ ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆ ಎಂಬುದನ್ನು ಅವರಿಂದ ಮಾಹಿತಿ ಪಡೆಯಲಾಗಿದೆ. ಅಂತಹ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

‘ಕೇಂದ್ರದ ಯೋಜನೆಗಳಾದ ಟಾಸ್ಕ್‌ಫೋರ್ಸ್, ಎನ್‌ಸಿಆರ್‌ಎಫ್ (ನ್ಯಾಷನಲ್‌ ಕಲಮಟಿ ರೂರಲ್ ಫಂಡ್), ಎನ್‌ಆರ್‌ಡಿಡಬ್ಲ್ಯುಪಿ (ನ್ಯಾಷನಲ್‌ ರೂರಲ್‌ ಡ್ರಿಂಕಿಂಗ್‌ ವಾಟರ್‌ ಪ್ರೋಗ್ರಾಂ) ಕ್ರಿಯಾ ಯೋಜನೆಯಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆಗಳನ್ನು ಸೇರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.

ಸಿಬ್ಬಂದಿಗೆ ಚುನಾವಣಾ ಕಾರ್ಯ ಇಲ್ಲ

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡುವ ಹೊಣೆಹೊತ್ತ ಸಿಬ್ಬಂದಿಗೆ ನಾವು ಚುನಾವಣಾ ಕಾರ್ಯದ ಜವಾಬ್ದಾರಿ ವಹಿಸಿಲ್ಲ. ಪ್ರತಿವರ್ಷ ಬೇಸಿಗೆಯಲ್ಲಿ ನಮಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸನ್ನದ್ಧರಾಗಬೇಕಿತ್ತು. ಪ್ರಸಕ್ತ ವರ್ಷ ನಮಗೆ ಚುನಾವಣೆ –ಕುಡಿಯುವ ನೀರು ಪೂರೈಕೆ ಎರಡು ಸಮಸ್ಯೆಗಳಿವೆ. ಹಾಗಾಗಿ, ಪ್ರತಿವರ್ಷ ಕುಡಿಯುವ ನೀರು ಪೂರೈಸುವ ಸಿಬ್ಬಂದಿಗೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಿಲ್ಲ. ಅವರು ಯಾವುದೇ ಸಮಸ್ಯೆ ಉಂಟಾಗದಂತೆ ಕುಡಿಯುವ ನೀರು ಪೂರೈಕೆ ಕಡೆಗೆ ಗಮನಹರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದರು.

ಖಾಸಗಿ ಬೋರ್‌ವೆಲ್‌ಗಳಿಗೆ ತಿಂಗಳಿಗೆ ₹ 10 ಸಾವಿರ

‘ನೀರಿನ ತೀವ್ರ ಅಭಾವ ಇರುವ ಕಡೆಗಳಲ್ಲಿ ಖಾಸಗಿ ಮಾಲೀಕತ್ವದ ಬೋರ್‌ವೆಲ್‌ಗಳನ್ನು ವಶಪಡಿಸಿಕೊಂಡು ಜನರಿಗೆ ನೀರಿನ ಪೂರೈಕೆ ಮಾಡುವಂತೆ ಸರ್ಕಾರ ಆದೇಶಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಸ್. ಮಂಜುನಾಥಸ್ವಾಮಿ ಹೇಳುತ್ತಾರೆ.

‘ಯಾದಗಿರಿ ತಾಲ್ಲೂಕಿನ ಗಡಿಗ್ರಾಮಗಳಲ್ಲಿ ನೀರಿನ ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ, ಖಾಸಗಿ ಮಾಲೀಕರ ಜಮೀನುಗಳಲ್ಲಿ ನೀರು ಇರುವ ಕೊಳವೆ ಬಾವಿಗಳನ್ನು ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಆಡಳಿತಕ್ಕೆ ವಹಿಸಿದರೆ ಅಂಥವರಿಗೆ ಮಾಸಿಕ ₹ 10 ಸಾವಿರ ನೀಡಲಾಗುತ್ತದೆ. ಮಳೆಗಾಲ ಆರಂಭದವರೆಗೂ ಅಂತಹ ಕೊಳವೆ ಬಾವಿಗಳನ್ನು ಬಳಕೆ ಮಾಡಿಕೊಂಡು ನಂತರ ಮಾಲೀಕರಿಗೆ ಬಿಟ್ಟುಕೊಡಲಾಗುತ್ತದೆ’ ಎಂದು ವಿವರಿಸಿದರು.

ಹೊಸ ಬಡಾವಣೆಗಳು

ವಿಶ್ವಾರಾಧ್ಯ ನಗರ

ಮಾತಾ ಮಾಣಿಕೇಶ್ವರಿ ನಗರ

ದುರ್ಗಾ ನಗರ

ಗ್ರಾಮೀಣ ಪೊಲೀಸ್‌ ಸ್ಟೇಷನ್‌ ಸುತ್ತಮುತ್ತ

ಎಪಿಎಂಸಿ ಸುತ್ತಮುತ್ತಲಿನ ಕಾಲೊನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT