ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಅರ್ಬನ್‌ ಬ್ಯಾಂಕ್‌ ಠೇವಣಿದಾರರ ಹಣ ಸುರಕ್ಷಿತ: ವಿಶ್ವನಾಥ ಹಿರೇಮಠ ಹೇಳಿಕೆ

ವಿಕಾಸ ಕೋ–ಅ‍‍‍ಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ವಿಶ್ವನಾಥ ಹಿರೇಮಠ ಹೇಳಿಕೆ
Last Updated 11 ಜನವರಿ 2022, 14:50 IST
ಅಕ್ಷರ ಗಾತ್ರ

ಬೀದರ್‌: ’ಬೀದರ್‌ ಮಹಿಳಾ ಅರ್ಬನ್‌ ಸೌಹಾರ್ದ ಕೋ–ಆಪರೇಟಿವ್‌ ಬ್ಯಾಂಕ್‌ನಲ್ಲಿ 2,970 ಗ್ರಾಹಕರು ಇಟ್ಟಿರುವ ಉಳಿತಾಯ ಹಣ ಹಾಗೂ ಠೇವಣಿ ಸುರಕ್ಷಿತವಾಗಿದೆ. ಠೇವಣಿದಾರರು ಅಪೇಕ್ಷಿಸಿದಲ್ಲಿ ಯಾವುದೇ ಸಂದರ್ಭದಲ್ಲೂ ಹಣ ಮರಳಿ ಪಡೆಯಬಹುದಾಗಿದೆ’ ಎಂದು ಹೊಸಪೇಟೆಯ ವಿಕಾಸ ಕೋ–ಅ‍‍‍ಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ವಿಶ್ವನಾಥ ಹಿರೇಮಠ ಹೇಳಿದರು.

ಎರಡು ವರ್ಷಗಳ ಹಿಂದೆ ಮಹಿಳಾ ಬ್ಯಾಂಕ್‌ ಆರ್ಥಿಕ ಸಂಕಷ್ಟ ಎದುರಿಸಿತ್ತು. ಈಗ ಎಲ್ಲ ಸಮಸ್ಯೆಗಳು ನಿವಾರಣೆಯಾಗಿವೆ. ವಿಕಾಸ ಬ್ಯಾಂಕಿನ ಮೇಲೆ ವಿಶ್ವಾಸ ಇಟ್ಟಿರುವವರು ಠೇವಣಿ ಅವಧಿಯನ್ನು ಮುಂದವರಿಸಬಹುದಾಗಿದೆ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ರಿಜರ್ವ್‌ ಬ್ಯಾಂಕು ಬೀದರ್‌ ಮಹಿಳಾ ಅರ್ಬನ್‌ ಸೌಹಾರ್ದ ಕೋ–ಆಪರೇಟಿವ್‌ ಬ್ಯಾಂಕ್‌ನ್ನು ಹೊಸಪೇಟೆಯ ಸಶಕ್ತ ವಿಕಾಸ ಕೋ–ಅ‍‍‍ಪರೇಟಿವ್‌ ಬ್ಯಾಂಕಿನಲ್ಲಿ ವಿಲೀನಗೊಳಿಸಲು ಅನುಮತಿಸಿದೆ. ಜನವರಿ 12 ರಂದು ಎರಡು ಬ್ಯಾಂಕ್‌ಗಳು ವಿಲೀನಗೊಳ್ಳಲಿವೆ ಎಂದು ಹೇಳಿದರು.

ಬಸವಲಿಂಗ ಪಟ್ಟದ್ದೇವರು ಮೋಹನ್‌ ಮಾರ್ಕೆಟ್‌ನ ಇಂದಿರಾ ಕಾಂಪ್ಲೆಕ್ಸ್‌ನಲ್ಲಿ ವಿಕಾಸ್‌ ಬ್ಯಾಂಕ್‌ ಶಾಖೆ ಉದ್ಘಾಟಿಸುವರು. ಬೀದರ್‌ ಮಹಿಳಾ ಅರ್ಬನ್‌ ಸೌಹಾರ್ದ ಕೋ–ಆಪರೇಟಿವ್‌ ಬ್ಯಾಂಕ್‌ ಬುಧವಾರದಿಂದ ವಿಕಾಸ ಕೋ–ಅ‍‍‍ಪರೇಟಿವ್‌ ಬ್ಯಾಂಕ್‌ ಆಗಿ ಮುಂದುವರಿಯಲಿದೆ. ಬ್ಯಾಂಕಿನಲ್ಲಿ ಸಂಪೂರ್ಣ ಗಣಕೀಕೃತ ವ್ಯವಸ್ಥೆ ಇದೆ. ಬ್ಯಾಂಕಿನ 7 ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ಬ್ಯಾಂಕಿನ ಎಟಿಎಂ ಅನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳ ಎಟಿಎಂಗಳಲ್ಲೂ ಬಳಸಬಹುದಾಗಿದೆ ಎಂದರು.

ಕೋವಿಡ್‌ ಸಂದರ್ಭದಲ್ಲೂ 365ದಿನ ಸೇವೆ ನೀಡಿದೆ. ಎಲ್ಲ ರೀತಿಯ ಡಿಜಿಟಲ್‌ ಸೇವೆಗಳನ್ನು ನೀಡುತ್ತಿರುವ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ವಿಕಾಸ್‌ ಬ್ಯಾಂಕ್ ಅಗ್ರಪಂಕ್ತಿಯಲ್ಲಿದೆ. ಬ್ಯಾಂಕಿಗೆ ಅನೇಕ ರಾಜ್ಯ ಮಟ್ಟದ ಪುರಸ್ಕಾರಗಳು ಬಂದಿವೆ. ಕಲಬುರಗಿ ಹಾಗೂ ಲಿಂಗಸೂರು ಸೇರಿ ಒಟ್ಟು 10 ಹೊಸ ಶಾಖೆಗಳನ್ನು ತೆರೆಯಲು ರಿಜರ್ವ್‌ ಬ್ಯಾಂಕಿನಿಂದ ಅನುಮತಿ ಕೇಳಲಾಗಿದೆ ಎಂದು ಹೇಳಿದರು.

ವಿಕಾಸ್‌ ಬ್ಯಾಂಕಿನ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ವರ್ಷದ 365 ದಿನ ಪ್ರತಿ ದಿನ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 143 ಕಾರ್ಯಕ್ರಮಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೀದರ್ ಮಹಿಳಾ ಬ್ಯಾಂಕ್ ನ ಅಧ್ಯಕ್ಷೆ ಮಹಾನಂದಾ ಹಾಲಹಳ್ಳಿ, ನಿರ್ದೇಶಕಿಯರಾದ ಶಕುಂತಲಾ ತಂಬಾಕಿ, ಬಿ.ಸುಜಾತಾ, ಸ್ವರೂಪಾ, ಜಯಶ್ರೀ ಶೆಟಕಾರ, ವಿಕಾಸ ಬ್ಯಾಂಕ್ ಆಡಳಿತ ಮಂಡಳಿ ರಾಜೇಶ್ ಹಿರೇಮಠ, ಎಂ ವೆಂಕಪ್ಪ, ಗಂಗಾಧರ ಪತ್ತಾರ, ಅನಂತ ಜೋಶಿ, ಮತ್ತು ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರಸನ್ನ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT