ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಸೋಯಾಗೆ ಹೆಚ್ಚಿದ ಬೇಡಿಕೆ

ಮಳೆ ಕೊರತೆ: ಇನ್ನೂ ಆರಂಭಗೊಳ್ಳದ ಬಿತ್ತನೆ
Last Updated 15 ಜೂನ್ 2019, 19:45 IST
ಅಕ್ಷರ ಗಾತ್ರ

ಬೀದರ್: ಮುಂಗಾರು ಮತ್ತೆ ಒಂದು ವಾರ ಮುಂದೆ ಹೋಗಿರುವ ಕಾರಣ ರೈತರು ಆತಂಕದಲ್ಲಿ ಇದ್ದಾರೆ. ಕಳೆದ ವರ್ಷ ಬರದಿಂದ ಕಂಗಾಲಾಗಿದ್ದ ಜಿಲ್ಲೆಯ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಹಣವೂ ದೊರೆತಿಲ್ಲ. ವರ್ಷಪೂರ್ತಿ ದುಡಿದರೂ ಕೈಗೆ ಹಣ ಸೇರದ ಕಾರಣ ರೈತರು ಕಬ್ಬು ಬಿಟ್ಟು ಸೋಯಾದತ್ತ ಒಲವು ತೋರುತ್ತಿದ್ದಾರೆ.

ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಜೂನ್‌ 12ಕ್ಕೆ ಜಿಲ್ಲೆಗೆ ಮುಂಗಾರು ಪ್ರವೇಶ ಮಾಡಬೇಕಿತ್ತು. ಆದರೆ ಅಕಾಲಿಕ ಮಳೆಯೂ ಸುರಿದಿಲ್ಲ. ಜಿಲ್ಲೆಯಲ್ಲಿ 3.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಇದೆ. 1.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾಬೀನ್‌ ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ.

ಕಬ್ಬಿಗೆ ಹೆಚ್ಚು ನೀರು ಬೇಕು. ಸೋಯಾಅವರೆ ಹಾಗಲ್ಲ. ಕಡಿಮೆ ಮಳೆ ಬಿದ್ದರೂ ಬರುವುದರಿಂದ ರೈತರು ಸೋಯಾ ಬಿತ್ತನೆ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಖರ್ಚು ಸಹ ಕಡಿಮೆ. ಅಂತೆಯೇ ಪ್ರತಿ ವರ್ಷ ಕಬ್ಬು ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಸೋಯಾ ಬೆಳೆಯುವ ಪ್ರದೇಶ ಹೆಚ್ಚುತ್ತಿದೆ. ಪ್ರಸಕ್ತ ವರ್ಷ ಸೋಯಾ 1.74 ಲಕ್ಷ ಹೆಕ್ಟೇರ್‌ ಪ್ರದೇಶ ವರೆಗೆ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ 36 ಸಾವಿರ ಕ್ವಿಂಟಲ್‌ ಸೋಯಾಅವರೆ ಬಿತ್ತನೆ ಬೀಜ ಇಟ್ಟುಕೊಳ್ಳುತ್ತಿದ್ದ ಕೃಷಿ ಇಲಾಖೆ ಈ ಬಾರಿ 44,500 ಕ್ವಿಂಟಲ್‌ ಬೀಜ ಸಂಗ್ರಹಿಸಿದೆ.

‘ಕೃಷಿ ಇಲಾಖೆಯು ರೈತರ ಬೇಡಿಕೆಗೆ ಅನುಗುಣವಾಗಿ ಪ್ರಸಕ್ತ ವರ್ಷ 44,500 ಕ್ವಿಂಟಲ್ ಸೋಯಾ, 154.8 ಕ್ವಿಂಟಲ್ ಹೈಬ್ರೀಡ್್ ಜೋಳ, 50.4 ಕ್ವಿಂಟಲ್ ತೊಗರಿ, 78.4 ಕ್ವಿಂಟಲ್ ಹೆಸರು ಹಾಗೂ 5 ಕ್ವಿಂಟಲ್ ಭತ್ತವನ್ನು ಸಂಗ್ರಹಿಸಿದೆ. ಕಾಂಪ್ಲೆಕ್ಸ್್ ಗೊಬ್ಬರವನ್ನು ದಾಸ್ತಾನು ಮಾಡಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ಹೇಳುತ್ತಾರೆ.

‘ಈ ಬಾರಿ ಸೋಯಾ ಹಾಗೂ ಹೈಬ್ರೀಡ್‌ ಜೋಳಕ್ಕೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ಮುಂಗಾರಲ್ಲಿ 1,50,000 ಹೆಕ್ಟೇರ್್ ಪ್ರದೇಶದಲ್ಲಿ ಸೋಯಾ, 80,000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 25,000 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, ತಲಾ 30,000 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಹಾಗೂ ಹೈಬ್ರೀಡ್‌ ಜೋಳ ಬಿತ್ತನೆ ಮಾಡಲು ಸಿದ್ಧತೆ ನಡೆದಿದೆ’ ಎನ್ನುತ್ತಾರೆ.

‘ಎಣ್ಣೆಕಾಳುಗಳ ಉತ್ಪಾದನೆಗೆ ರೈತರು ಹೆಚ್ಚು ಒಲವು ಹೊಂದಿದ್ದಾರೆ. ತಲಾ 3,000 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, ಬಿಳಿ ಎಳ್ಳು, 2,200 ಹೆಕ್ಟೇರ್ ಪ್ರದೇಶದಲ್ಲಿ ಗುರೆಳ್ಳು, 500 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲು ಸಿದ್ಧತೆ ಆರಂಭಿಸಲಾಗಿದೆ’ ಎಂದು ಹೇಳುತ್ತಾರೆ.

‘ಕೃಷಿ ಇಲಾಖೆ 30,000 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯುವ ಗುರಿ ಇಟ್ಟುಕೊಂಡಿದೆ. ಆದರೆ, ಮಳೆಯ ಕೊರತೆ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಹಣ ಬಾರದ ಕಾರಣ ರೈತರು ಕಬ್ಬು ನಾಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳುತ್ತಾರೆ.

₹ 78.38 ಕೋಟಿ ಕಬ್ಬಿನ ಬಿಲ್‌ ಬಾಕಿ

ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳು ರೈತರಿಗೆ ₹ 78.38 ಕೋಟಿ ಕಬ್ಬಿನ ಬಾಕಿ ಕೊಡಬೇಕಿದೆ. ಕಳೆದ ವರ್ಷ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ ಶ್ರವಣ ಹಾಗೂ ಮೇ 16 ರಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಸರ್ಕರೆ ಕಾರ್ಖಾನೆಗಳ ಅಧ್ಯಕ್ಷರಿಗೆ ರೈತರ ಬಿಲ್‌ ಪಾವತಿಸುವಂತೆ ಖಡಕ್‌ ಆಗಿ ಆದೇಶ ನೀಡಿದ್ದಾರೆ. ಆದರೂ ಸಕ್ಕರೆ ಕಾರ್ಖಾನೆಗಳು ಹಣ ಬಿಡುಗಡೆ ಮಾಡಿಲ್ಲ.

ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ₹ 16 ಕೋಟಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ₹ 31.72 ಕೋಟಿ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ₹ 3 ಕೋಟಿ, ಭಾಲ್ಕೇಶ್ವರ ಶುಗರ್ಸ್‌ ಲಿಮಿಟೆಡ್ ₹ 24.85 ಕೋಟಿ ಹಾಗೂ ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆ ₹ 2.81 ಕೋಟಿ ಬಾಕಿ ಉಳಿಸಿಕೊಂಡಿದೆ. ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರೂ ಹಣ ರೈತರ ಕೈಗೆ ಸೇರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT