ಬೀದರ್: ‘ಕೌಶಲ ಹೊಂದಿದವರಿಗೆ ವಿದೇಶಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿವೆ’ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕೌಶಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೌಶಲ್ಯ ಅಭಿವೃದ್ಧಿ ನಿಗಮದಿಂದ ಯುವಕರಿಗೆ ತರಬೇತಿ ನೀಡಿ ಅವರಿಗೆ ದೇಶದೊಳಗೆ ಹಾಗೂ ಹೊರದೇಶಗಳಲ್ಲಿ ಉದ್ಯೋಗ ಕಲ್ಪಿಸಿಕೊಡುವ ಕೆಲಸ ನಿಗಮ ಮಾಡುತ್ತಿದೆ ಎಂದು ತಿಳಿಸಿದರು.
ಜೂನ್ ತಿಂಗಳಲ್ಲಿ ಐ.ಟಿ.ಐ., ಡಿಪ್ಲೊಮಾ, ಎಂಜಿನಿಯರಿಂಗ್ ಪೂರ್ಣಗೊಳಿಸಿದ 94 ವಿದ್ಯಾರ್ಥಿಗಳಿಗೆ ಸ್ಲೋವೆಕಿಯಾ ದೇಶದಲ್ಲಿ ಉದ್ಯೋಗ ಕಲ್ಪಿಸಿಕೊಡಲಾಗಿದೆ. ದುಬೈನಲ್ಲಿ ಅಪ್ರೆಂಟಿಸಗಳಿಗೆ ₹27 ಸಾವಿರ ವೇತನ ಸಿಗುತ್ತಿದೆ. ಉದ್ಯೋಗದ ಜೊತೆಗೆ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಕಂಪನಿಯೆ ಮಾಡಿಕೊಡುತ್ತಿದೆ ಎಂದು ವಿವರಿಸಿದರು.
ಯು.ಎ.ಇಯಲ್ಲಿ ಪುರುಷ ನರ್ಸ್ಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಸಂಬಳವನ್ನು ನೀಡಲಾಗುತ್ತದೆ. ಈ ರೀತಿಯಲ್ಲಿ ಯುವಕರಿಗೆ ಹೊರ ದೇಶಗಳಲ್ಲಿ ಬಹಳಷ್ಟು ಉದ್ಯೋಗ ಅವಕಾಶಗಳಿವೆ. ಈ ಮಾಹಿತಿಯನ್ನು ಎಲ್ಲ ನಿರುದ್ಯೋಗ ಯುವಕ/ಯುವತಿಯರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೌಶಲ್ಯ ಅಭಿವೃದ್ಧಿ ನಿಗಮದಿಂದ ತರಬೇತಿ ನೀಡಿದರೆ ಸಾಲದು. ಅವರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡಬೇಕಿದೆ. ನಾನು ಈ ಹಿಂದೆ ಕೇರಳ ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ ಭೇಟಿ ನೀಡಿದದೇನೆ. ಆ ರಾಜ್ಯದಲ್ಲಿ ಹೆಚ್ಚು ಕೌಶಲ್ಯ ಭರಿತ ಜನರಿದ್ದಾರೆ. ಅವರು ಜಗತ್ತಿನ ಯಾವುದೇ ದೇಶಗಳಿಗೆ ಹೋದರು ಸಿಗುತ್ತಾರೆ. ಜಗತ್ತಿನ ಬಹುತೇಕ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೌಶಲ್ಯ ಅಭಿವೃದ್ಧಿ ಇಲಾಖೆ ಜೊತೆಗೆ ವಿವಿಧ ಇಲಾಖೆಯ ಸಹಯೋಗ ಮತ್ತು ಜಿಲ್ಲಾಡಳಿತದಿಂದ ಯುವಕರಿಗೆ ಕೌಶಲ್ಯ ತರಬೇತಿ ನೀಡುವದರ ಜೊತೆಗೆ ಅವರಿಗೆ ಯಾವ- ಯಾವ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿವೆ ಎಂಬ ಮಾಹಿತಿಯನ್ನು ನೀಡಬೇಕಿದೆ. ಯಾವ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿವೆ ಎಂಬ ನಿಖರ ಮಾಹಿತಿಯನ್ನು ಸಂಗ್ರಹಿಸಿ ಯುವಕರಿಗೆ ನೀಡಬೇಕು. ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಬೆಂಗಳೂರಿನಲ್ಲಿ ಉದ್ಯೋಗ ಮೇಳ ಏರ್ಪಡಿಸಿದ್ದಾಗ ಶೇ. 80ರಷ್ಟು ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳು ಕೈಗಾರಿಕೆಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿ ಯಾವ ತರಹದ ಕೌಶಲ್ಯ ಕೆಲಸಗಾರರ ಅವಶ್ಯಕತೆ ಇದೆ. ಮತ್ತು ಎಷ್ಟು ಜನರು ಕೆಲಸಕ್ಕೆ ಭೇಕಾಗಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಆ ರೀತಿಯ ಕೌಶಲ್ಯ ತರಬೇತಿ ಯುವಕರಿಗೆ ನೀಡಿದಾಗ ಯುವ ನಿಧಿಗೆ ಅರ್ಜಿ ಹಾಕುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಯುವಕರಿಗೆ ಕೌಶಲ್ಯ ತರಬೇತಿ ನೀಡುವುದರಲ್ಲಿ ಕಾಲೇಜುಗಳ ಪಾತ್ರ ಬಹಳ ದೊಡ್ಡದಿದೆ. ಅವರಿಗೆ ಕೌಶಲ್ಯ ತರಬೇತಿಗಳನ್ನು ನೀಡುವುದರೊಂದಿಗೆ ಉದ್ಯೋಗ ಅವಕಾಶಗಳ ಮಾಹಿತಿಯನ್ನು ನೀಡಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತನಾಡಿ, ಎಂಜಿನಿಯರಿಂಗ್ ಸೇರಿದಂತೆ ಇತರೆ ಕೋರ್ಸ್‌ಗಳನ್ನು ಮುಗಿಸಿದವರಿಗೆ ನೇರವಾಗಿ ಉದ್ಯೋಗ ಸಿಗುವದಿಲ್ಲ. ಯುವಕರಿಗೆ ಕೌಶಲ್ಯ ತರಬೇತಿಯ ಅವಶ್ಯಕತೆ ಇರುತ್ತದೆ. ಸಂಪನ್ಮೂಲ ವ್ಯಕ್ತಿಗಳ ಮೂಲಕ ಕೌಶಲ್ಯ ತರಬೇತಿಗಳನ್ನು ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಲೋಕೇಶ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಸುರೇಖಾ, ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಬಸವರಾಜ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅವಿನಾಶ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.