ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: 23 ಸ್ಥಳಗಳಲ್ಲೇ ಹೆಚ್ಚು ಅಪಘಾತ

ಇನ್ನೂ ಬೇಕಿದೆ ಎಚ್ಚರಿಕೆ ಫಲಕ, ಸರಿಯಾದ ರಸ್ತೆ
Last Updated 14 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಅಪಘಾತಗಳು ಸಂಭವಿಸದಂತೆ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಮಾಡಬೇಕು ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ, ಲೋಕೋಪಯೋಗಿ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ರಸ್ತೆಯನ್ನು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅಪಘಾತಗಳಿಗೆ ಕಾರಣವಾಗುತ್ತಿದೆ.

ಜಿಲ್ಲೆಯ ಪೊಲೀಸರು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿ ವಿವಿಧೆಡೆ ಒಂದೇ ಸ್ಥಳದಲ್ಲಿ ಹೆಚ್ಚು ಅಪಘಾತ ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಅಪಘಾತ ವಲಯಗಳನ್ನು ಗುರುತಿಸಿದ್ದಾರೆ. ಜಿಲ್ಲೆಯಲ್ಲಿ 23 ಸ್ಥಳಗಳಲ್ಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬಂದಿದೆ.

ಬೀದರ್‌ ತಾಲ್ಲೂಕಿನಲ್ಲೇ ಅತಿ ಹೆಚ್ಚು ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ನಗರದ ಹಾರೂರಗೇರಿ ಕಮಾನ್, ಬೀದರ್‌–ಜಹೀರಾಬಾದ್‌ ಹೆದ್ದಾರಿಯಲ್ಲಿರುವ ದೇವ ದೇವ ವನ, ಮನ್ನಳ್ಳಿ ರಸ್ತೆಯ ಹೊನ್ನಡ್ಡಿ ಕ್ರಾಸ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ, ಬೀದರ್‌–ಹುಮನಾಬಾದ್‌ ಹೆದ್ದಾರಿಯಲ್ಲಿ ಇರುವ ಬೀದರ್ ನಗರದ ಯಲ್ಲಾಲಿಂಗ ಕಾಲೊನಿ, ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ, ಕಟ್ಟಿತೂಗಾಂವ, ಜಲಸಂಘಿ ಕ್ರಾಸ್, ಚೀನಕೇರಾ ಕ್ರಾಸ್, ಹೈದರಾಬಾದ್–ಸೋಲಾಪುರ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನೂರ್ ಧಾಬಾ, ರಾಜೇಶ್ವರ, ಚಂಡಕಾಪುರ, ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಕ್ರಾಸ್‌ನಲ್ಲಿ ಈವರೆಗೆ ಅತಿ ಹೆಚ್ಚು ಅಪಘಾತ ಸಂಭವಿಸಿರುವುದನ್ನು ಪೊಲೀಸರು ಗುರುತಿಸಿದ್ದಾರೆ.

ರಸ್ತೆ ಮಧ್ಯದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಕೆಲ ಪ್ರತಿಮೆಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಆದರೂ ಕೆಲ ಕಡೆ ಇನ್ನೂ ಪ್ರತಿಮೆಯ ಕಟ್ಟೆಗಳು ಉಳಿದುಕೊಂಡಿವೆ. ಪ್ರತಿಮೆ ಸ್ಥಾಪನೆಗೆ ನಿರ್ಮಿಸಿರುವ ಕಟ್ಟೆಗಳಿಗೆ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಲೇ ಇವೆ. ರಸ್ತೆ ಮಧ್ಯದ ಪ್ರತಿಮೆಗಳನ್ನು ತೆರವುಗೊಳಿಸಲು ಸಾರ್ವನಿಕರಿಂದಲೇ ಸಹಕಾರ ದೊರೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಅಪಘಾತ ವಲಯಗಳಲ್ಲಿ ಎಚ್ಚರಿಕೆ ಫಲಕ ಅಳಡಿಸುವುದು, ಚಿಹ್ನೆ ಮೂಲಕ ಮುನ್ನೆಚ್ಚರಿಕೆ ಕೊಡುವುದು ಹಾಗೂ ಡೊಂಕು ರಸ್ತೆಗಳನ್ನು ಸರಿಪಡಿಸುವುದು ಆಗಬೇಕು. ಜಿಲ್ಲೆಯ ಬಹುತೇಕ ಕಡೆ ಎಚ್ಚರಿಕೆ ಫಲಕಗಳೇ ಕಾಣಸಿಗುವುದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಬೇಸರ ವ್ಯಕ್ತಪಡಿಸುತ್ತಾರೆ.

‘ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಪಘಾತ ವಲಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌. ನಾಗೇಶ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ತಗ್ಗಿಸುವ ದಿಸೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಪಘಾತ ವಲಯಗಳಲ್ಲಿ ಕ್ಯಾಟ್‌ಲೈಟ್‌ ಅಳವಡಿಸಲಾಗಿದೆ. ರಸ್ತೆ ವಿಭಜಕಗಳಿಗೆ ಪ್ರತಿಫಲಕ ಸ್ಟಿಕರ್‌ ಅಳವಡಿಸಲಾಗಿದೆ. ರಾತ್ರಿ ವೇಳೆಯಲ್ಲಿ ಪೊಲೀಸರು ಇಲ್ಲದ ಕಡೆಗೆ ರಸ್ತೆಗಳ ಮಧ್ಯೆ ಬ್ಯಾರಿಕೇಡ್‌ ಅಳವಡಿಸದಂತೆ ತಿಳಿವಳಿಕೆ ನೀಡಲಾಗಿದೆ. ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ’ ಎಂದು ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ತಿಳಿಸುತ್ತಾರೆ.

ವೇಗದ ಚಾಲನೆಯಿಂದ ಅಪಘಾತ
ಬಸವಕಲ್ಯಾಣ:
ರಸ್ತೆಗಳು ಅಗಲವಿದ್ದರೂ ಅತಿವೇಗದ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬರುತ್ತಿದೆ.

ವೃತ್ತಗಳ ಸ್ಥಳಗಳಲ್ಲಿ ಹಾಗೂ ಕೂಡು‌ ರಸ್ತೆ ‌ಇದ್ದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚು. ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮುಡಬಿ ಕ್ರಾಸ್, ಮಂಠಾಳ ಕ್ರಾಸ್, ಚಂಡಕಾಪುರ ಹತ್ತಿರದ ಮನ್ನಳ್ಳಿ ಕ್ರಾಸ್ ಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಅಕ್ಕಪಕ್ಕದ ರಸ್ತೆಗಳಿಂದ ವಾಹನಗಳು ವೇಗವಾಗಿ ಬರುವ ಕಾರಣ ಅಪಘಾತ ಆಗುತ್ತಿವೆ. ಈ ಸ್ಥಳಗಳಲ್ಲಿ ಅಪಘಾತ ವಲಯ ಎಂದು ಫಲಕ ಅಳವಡಿಸಬೇಕು ಎಂದು ಮಂಠಾಳದ ವೀರೇಶ ಪಾಟೀಲ ಮನವಿ ಮಾಡುತ್ತಾರೆ.

ಬಸವಕಲ್ಯಾಣದ ಹರಳಯ್ಯ ವೃತ್ತದಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ ನಾಲ್ಕು ಅಪಘಾತಗಳು ಸಂಭವಿಸಿದ್ದು ಕೆಲವರಿಗೆ ಬಲವಾದ ಗಾಯಗಳಾಗಿವೆ. ಈ ವೃತ್ತದಲ್ಲಿ ಹಾಗೂ ನಾರಾಯಣಪುರ ಕ್ರಾಸ್ ನಲ್ಲಿ ನಾಲ್ಕು ಕಡೆಗಳಿಂದ ಬರುವ ವಾಹನಗಳಿಗೆ ಕಡಿವಾಣ‌ ಇಲ್ಲದಂತಾಗಿದೆ.

ಹರಳಯ್ಯ ವೃತ್ತದಲ್ಲಿ ಟ್ರಾಫಿಕ್‌ ಲೈಟ್‌ ಅಳವಡಿಸಬೇಕು. ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್ ನಿಯೋಜಿಸಬೇಕು’ ಎಂದು ವ್ಯಾಪಾರಿ ಮಹೇಶ ಹೇಳುತ್ತಾರೆ.

ಹುಲಸೂರಿನ ಹೊರವಲಯದ ಬೀದರ್– ಲಾತೂರ್ ರಾಷ್ಟ್ರೀಯ ಹೆದ್ದಾರಿ(ಸಂಖ್ಯೆ 752)ಯಲ್ಲಿ ಅಂತರಭಾರತಿ ತಾಂಡಾ ಬಳಿಯ ಜಾಗವನ್ನು ಅಪಘಾತ ವಲಯ ಎಂದು ಗುರುತಿಸಿದರೂ ಫಲಕ ಹಾಕಿಲ್ಲ. ಬಸವೇಶ್ವರ ವೃತ್ತ ಹಾಗೂ ದೇವನಾಳ ಸಮೀಪ ಆಗಾಗ ಅಪಘಾತ ಸಂಭವಿಸುತ್ತವೆ. ಲೋಕಪಯೋಗಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ಫಲಕಗಳನ್ನೇ ಅಳವಡಿಸಿಲ್ಲ.

ಸರ್ವಿಸ್‌ ರಸ್ತೆಯೇ ಇಲ್ಲ
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸರ್ವಿಸ್‌ ರಸ್ತೆಯನ್ನೇ ನಿರ್ಮಿಸಿಲ್ಲ. ಗ್ರಾಮದಿಂದ ಹುಮನಾಬಾದ್, ಚಿಟಗುಪ್ಪ ಮತ್ತು ಮನ್ನಾಎಖ್ಖೆಳ್ಳಿಗೆ ವಿರುದ್ಧ ದಿಕ್ಕಿನಿಂದ ಹೋಗಬೇಕಾದ ಸ್ಥಿತಿ ಇದೆ. ಸರ್ವಿಸ್‌ ರಸ್ತೆ ನಿರ್ಮಿಸದ ಕಾರಣ ಹಾಗೂ ರಸ್ತೆ ದಾಟಿ ಆಚೆಗೆ ಹೋಗುವಾಗ ವಾಹನ ಡಿಕ್ಕಿ ಹೊಡೆದು ಈವರೆಗೆ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ರಸ್ತೆ ಸುರಕ್ಷತಾ ಸಮಿತಿ ಸಭೆಗಳು ಜಿಲ್ಲಾ ಮಟ್ಟದಲ್ಲಿ ಕಾಟಾಚಾರಕ್ಕೆ ನಡೆಯುತ್ತವೆ. ಇಂತಹ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆಯೇ ಆಗುವುದಿಲ್ಲ. ಅಧಿಕಾರಿಗಳು ಸಾರ್ವಜನಿಕರಿಗೆ ಆಹ್ವಾನ ನೀಡುವುದಿಲ್ಲ. ಹೀಗಾಗಿ ಅಧಿಕಾರಿಗಳಿಗೆ ನೈಜ ಸಮಸ್ಯೆಯೇ ಗೊತ್ತಾಗುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಕೆಲ ಕಡೆ ಮಾತ್ರ ಎಚ್ಚರಿಕೆ ಫಲಕ
ಔರಾದ್:
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕಿನ ಕೆಲ ರಸ್ತೆಗಳನ್ನು ಮಾತ್ರ ಅಪಘಾತ ವಲಯ ಎಂದು ಗುರುತಿಸಲಾಗಿದೆ. ಔರಾದ್-ಉದಗಿರ್ ಮುಖ್ಯ ರಸ್ತೆಯ ಗಣೇಶಪುರ ಬಳಿ ಅಪಘಾತ ವಲಯ ಪ್ರದೇಶವೆಂದು ಗುರುತಿಸಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಬೀದರ್- ಔರಾದ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಪ್ಪಿಸಲಾಗಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭವಾದ ನಂತರ ಪ್ರಾಧಿಕಾರದವರು ನಿರ್ವಹಣೆ ಮಾಡಲಿದ್ದಾರೆ ಎಂದು ಲೋಕೋಪಯೋಗಿ ‌ಇಲಾಖೆ ಎಂಜಿನಿಯರ್ ವೀರಶೆಟ್ಟಿ ರಾಠೋಡ್ ಹೇಳುತ್ತಾರೆ.

ಅಪಘಾತಕ್ಕೆ ಕಾರಣವಾದ ಡೊಂಕು ರಸ್ತೆ
ಕಮಲನಗರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಪಟ್ಟದ್ದೇವರು ವೃತ್ತ, ಕಮಲನಗರ ಮತ್ತು ಡಿಗ್ಗಿ ಗ್ರಾಮ ಮಧ್ಯೆ ಬರುವ ದೊಡ್ಡ ಸೇತುವೆ, ಇಂಗ್ಲಿಷ್‌ನ ‘S’ ಆಕಾರದ ರಸ್ತೆ, ಹಂದಿಕೇರಾ- ದಾಬಕಾ, ಹಂದಿಕೇರಾ-ಭಂಡಾರಕುಮಟಾ ನಡುವಿನ ‘S’ ಆಕಾರದ ರಸ್ತೆ, ಸಂಗಮ-ಖೇಡ್ ಮಧ್ಯದ ನೀಲಾಂಬಿಕಾ ಆಶ್ರಮ ಬಳಿಯ ನಡುವಿನ ‘S’ ಆಕಾರದ ರಸ್ತೆಯಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಸರಳವಾದ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವ ಸಾರ್ವಜನಿಕರ ಬೇಡಿಕೆ ಈಡೇರಿಲ್ಲ. ಪಿಡಬ್ಲ್ಯೂಡಿ ಅಧಿಕಾರಿಗಳಿಂದ ಸ್ಪಂದನೆ ದೊರೆಯುತ್ತಿಲ್ಲ. ರಸ್ತೆ ಸುರಕ್ಷತಾ ಸಮಿತಿ ಸಭೆಗಳನ್ನು ಕಚೇರಿ ಕೊಠಡಿಯೊಳಗೆ ನಡೆಸಿದರೆ ಪ್ರಯೋಜನವಿಲ್ಲ. ಸಾರ್ವಜನಿಕವಾಗಿ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕಮಲನಗರದ ನಿವಾಸಿ ಮಲ್ಲಿಕಾರ್ಜುನ ಮನವಿ ಮಾಡುತ್ತಾರೆ.

ಜಾಗೃತಿ ಕಾರ್ಯಕ್ರಮ ನಡೆಯಲಿ
ಭಾಲ್ಕಿ: ಪಟ್ಟಣದ ಹೊರ ವಲಯದ ರಾಜ್ಯ ಹೆದ್ದಾರಿಯ ಡೋಣಗಾಪುರ ಕ್ರಾಸ್, ಮದಕಟ್ಟಿ ಕ್ರಾಸ್ ಸಮೀಪದ ಬಾಜೋಳಗಾ ಕ್ರಾಸ್, ನಿಟ್ಟೂರ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಶಿವಾಜಿ ವೃತ್ತದ ಪ್ರದೇಶವನ್ನು ಅಪಘಾತ ವಲಯಗಳನ್ನಾಗಿ ಗುರುತಿಸಲಾಗಿದೆ.

ಖಟಕಚಿಂಚೋಳಿಯ ಮುಖ್ಯ ರಸ್ತೆಯಲ್ಲಿರುವ ಬಸವೇಶ್ವರ ವೃತ್ತ ಸೇರಿದಂತೆ ತಾಲ್ಲೂಕಿನ ಜಿಲ್ಲಾ ಮುಖ್ಯ ರಸ್ತೆಯಲ್ಲಿರುವ ನಾಲ್ಕು ಸ್ಥಳಗಳು ಜಿಲ್ಲಾ ಅಪಘಾತ ವಲಯಗಳಾಗಿವೆ ಎಂದು ಪಿಡಬ್ಲ್ಯೂಡಿ ಎಇಇ ಶಿವಶಂಕರ ಕಾಮಶೆಟ್ಟಿ ಹೇಳುತ್ತಾರೆ.

‘ಈ ಅಪಘಾತ ವಲಯಗಳಲ್ಲಿ ಅಪಘಾತ ತಡೆಯಲು ಎಚ್ಚರಿಕೆ, ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ. ಜಾಗೃತಿ ಕಾರ್ಯಕ್ರಮದ ಮೂಲಕ ಜನರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ದತ್ತಾತ್ರಿ ಮೂಲಗೆ.

ಪೂರಕ ಮಾಹಿತಿ:
ಮಾಣಿಕ ಭುರೆ, ಗುಂಡು ಅತಿವಾಳ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ಬಸವಕುಮಾರ, ನಾಗೇಶ ಪ್ರಭಾ, ಮನೋಜಕುಮಾರ ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT