ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದ ಸಂಸದ ಭಗವಂತ ಖೂಬಾ

ಪಿಪಿಇ ಕಿಟ್ ಧರಿಸಿ ಬ್ರಿಮ್ಸ್ ಕೋವಿಡ್ ಆಸ್ಪತ್ರೆಗೆ ಭೇಟಿ
Last Updated 23 ಏಪ್ರಿಲ್ 2021, 5:06 IST
ಅಕ್ಷರ ಗಾತ್ರ

ಬೀದರ್: ಸಂಸದ ಭಗವಂತ ಖೂಬಾ ಅವರು ಗುರುವಾರ ಪಿಪಿಇ ಕಿಟ್ ಧರಿಸಿ ಇಲ್ಲಿಯ ಬ್ರಿಮ್ಸ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದರು.

ಸೋಂಕಿತರ ವಾರ್ಡ್‍ಗಳಿಗೆ ಭೇಟಿ ಕೊಟ್ಟು ಅವರಿಂದ ಚಿಕಿತ್ಸೆ ಕುರಿತು ಮಾಹಿತಿ ಪಡೆದರು.

ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಆಸ್ಪತ್ರೆಗೆ ಬಂದ ನಂತರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಸೋಂಕಿನಿಂದ ಗುಣಮುಖರಾಗುತ್ತಿದ್ದೇವೆ ಎಂದು ರೋಗಿಗಳು ತಿಳಿಸಿದರು.

ರೆಮ್‍ಡಿಸಿವಿರ್ ಇಂಜಕ್ಷನ್ ಬಗ್ಗೆ ತಪ್ಪು ತಿಳಿವಳಿಕೆ ಇದೆ. ತಜ್ಞರ ಪ್ರಕಾರ, ಎಚ್.ಆರ್.ಸಿ.ಟಿ (ಸಿಟಿ ಸ್ಕ್ಯಾನ್) ಪರೀಕ್ಷೆಯಲ್ಲಿ ಸಿ.ಟಿ ಸಿವಿಯಾರಿಟಿ ಸ್ಕೋರ್ 8ಕ್ಕಿಂತ ಹೆಚ್ಚು ಇದ್ದವರಿಗೆ ಮಾತ್ರ ರೆಮ್‍ಡಿಸಿವಿರ್ ಇಂಜಕ್ಷನ್ ಅಗತ್ಯ ಇರುತ್ತದೆ. ಆದರೆ, ಖಾಸಗಿ ಆಸ್ಪತ್ರೆಯವರು ಸಿ.ಟಿ ಸಿವಿಯಾರಿಟಿ ಸ್ಕೋರ್ 2,3,4 ಮತ್ತು 5 ಇದ್ದವರಿಗೂ ರೆಮ್‍ಡಿಸಿವಿರ್ ಕೊಡುತ್ತಿರುವುದು ತಪ್ಪು. ಈ ಬಗ್ಗೆ ಜನರಿಗೆ ಅರ್ಥವಾಗುತ್ತಿಲ್ಲ. ಎಲ್ಲರೂ ರೆಮ್‍ಡಿಸಿವಿರ್ ಇಂಜಕ್ಷನ್ ಕೇಳುತ್ತಿದ್ದಾರೆ ಎಂದು ವೈದ್ಯರು ಸಂಸದರ ಗಮನಕ್ಕೆ ತಂದರು.

ಯಾರಿಗೆ ಅವಶ್ಯಕವೋ ಅವರಿಗೆ ರೆಮ್‍ಡಿಸಿವಿರ್ ಕೊಡುತ್ತಿದ್ದೇವೆ. ಸರ್ಕಾರ 2020 ರ ಏಪ್ರಿಲ್ 1 ರಿಂದ ಈವರೆಗೆ ಒಟ್ಟು 10,375 ರೆಮ್‍ಡಿಸಿವಿರ್ ಇಂಜಕ್ಷನ್‍ಗಳನ್ನು ಒದಗಿಸಿದೆ. ಪ್ರಸಕ್ತ ತಿಂಗಳ 21 ದಿನಗಳಲ್ಲಿ 3,528 ಇಂಜಕ್ಷನ್‍ಗಳನ್ನು ಪೂರೈಸಿದೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಯಾವುದೇ ಕೊರತೆ ಇಲ್ಲ. ತಾಲ್ಲೂಕು ಆಸ್ಪತ್ರೆಗಳಲ್ಲೂ ಕೋವಿಡ್ ಸೋಂಕಿತರಿಗೆ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಬೀದರ್‍ನಲ್ಲಿ ನೀಡಲಾಗುವ ಚಿಕಿತ್ಸೆಯನ್ನೇ ಅಲ್ಲೂ ನೀಡಲಾಗುತ್ತಿದೆ ಎಂದು ಹೇಳಿದರು.

ಕೋವಿಡ್‍ಗೆ ಸಂಬಂಧಿಸಿದ ಊಹಾಪೋಹಗಳಿಂದ ಜನ ಭಯಭೀತರಾಗಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪವೂ ಏರುಪೇರಾದರೂ ಗಾಬರಿಪಡುತ್ತಿದ್ದಾರೆ. ಕಾರಣ, ವೈದ್ಯರು ರೋಗಿಗಳಲ್ಲಿ ಮೊದಲು ಆತ್ಮಸ್ಥೈರ್ಯ ತುಂಬಬೇಕು. ಅವರೊಂದಿಗೆ ತಾಳ್ಮೆಯಿಂದ ವರ್ತಿಸಿ, ತಿಳಿ ಹೇಳಿ ಚಿಕಿತ್ಸೆ ನೀಡಬೇಕು ಎಂದು ಖೂಬಾ ನಿರ್ದೇಶನ ನೀಡಿದರು.

ಸರ್ಕಾರ ರೆಮ್‍ಡಿಸಿವಿರ್ ಒದಗಿಸುತ್ತಿಲ್ಲ. ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ವಿನಾಕಾರಣ ಆರೋಪಿಸಿ ಜನರ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ. ಎಲ್ಲರೂ ಸೇರಿ ಕೋವಿಡ್ ಜಾಗೃತಿ ಮೂಡಿಸಬೇಕು. ಕೋವಿಡ್‍ನಿಂದ ಜನರನ್ನು ಪಾರು ಮಾಡಲು ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕರು ಕೋವಿಡ್ ಬರದಂತೆ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು. ಕೋವಿಡ್ ಬಂದರೂ ಎದೆಗುಂದಬಾರದು. ಕೋವಿಡ್‍ನಿಂದ ಜನರನ್ನು ರಕ್ಷಿಸಲು ವೈದ್ಯರು ಸಶಕ್ತರಾಗಿದ್ದಾರೆ. ಜನ ವೈದ್ಯರು ಹಾಗೂ ಜಿಲ್ಲಾಡಳಿತಕ್ಕೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT