ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಪ್ರೇಕ್ಷಣೀಯ ತಾಣವಾದ ‘ಮುಲ್ಲಾಮಾರಿ’

ನೀರು ನಾಲೆಗೆ ಹರಿಯುತ್ತಿರುವುದರಿಂದ ಅಲ್ಲಲ್ಲಿ ಚಿಕ್ಕ ಜಲಪಾತಗಳು ಸೃಷ್ಟಿ
Last Updated 26 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಖೇರ್ಡಾ(ಬಿ) ಹತ್ತಿರದ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯ ಸಂಪೂರ್ಣ ಭರ್ತಿಯಾಗಿ ನಾಲೆಗೆ ನೀರು ಹರಿಯುತ್ತಿರುವ ಕಾರಣ ಅಲ್ಲಲ್ಲಿ ಜತಪಾತಗಳು ಸೃಷ್ಟಿಯಾಗಿವೆ. ಅದನ್ನು ನೋಡಲು ಜನಜಂಗುಳಿ ನೆರೆಯುತ್ತಿದೆ.

ಕೋವಿಡ್ ಕಾರಣ ಶಾಲಾ ಕಾಲೇಜುಗಳು ಆರಂಭ ಆಗಿಲ್ಲ. ನೌಕರರಿಗೂ ಯಾವುದೇ ಕೆಲಸವಿಲ್ಲ. ದೂರದ ಯಾತ್ರಾ ಸ್ಥಳಗಳಿಗೆ ಹೋಗುವಂತಿಲ್ಲ. ಹೀಗಾಗಿ ಮಕ್ಕಳು ಮಹಿಳಾದಿಯಾಗಿ ಬೇಸರ ಕಳೆಯಲು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ನಾಲೆಯಲ್ಲಿ ಹರಿಯುವ ನೀರಲ್ಲಿ ಹಾಗೂ ಅಲ್ಲಲ್ಲಿ ಸೃಷ್ಟಿಯಾದ ಚಿಕ್ಕ ಜಲಾಪಾತಗಳಲ್ಲಿ ಮಿಂದು ಆಯಾಸವನ್ನು ಅರಗಿಸಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಪ್ರಮುಖ ಜಲಾಶಯವಾದ ಇದನ್ನು 45 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ತಾಲ್ಲೂಕಿನಲ್ಲೇ ಈ ನಾಲೆಯ ಉಗಮ ಸ್ಥಾನವಿದೆ. ಮಂಠಾಳ-ಉಮಾಪುರ ಭಾಗದಲ್ಲಿ ಜನ್ಮಪಡೆಯುವ ಮುಲ್ಲಾಮಾರಿ ನಾಲೆಗೆ ಅಡ್ಡಲಾಗಿ ಜಲಾಶಯ ನಿರ್ಮಾಣಗೊಂಡಿದೆ. ಶರಣನಗರ ಮತ್ತು ಲಿಂಗದಳ್ಳಿ ಗಡಿ ವ್ಯಾಪ್ತಿಯಿಂದ ಖೇರ್ಡಾ(ಬಿ) ಗ್ರಾಮದ ಉತ್ತರದ ಭಾಗದವರೆಗೆ ಜಲಾಶಯ ಹರಡಿಕೊಂಡಿದೆ. ಶಿವಲಿಂಗೇಶ್ವರ ಶಿವಯೋಗಿ ಮಠದಿಂದ ಸ್ವಲ್ಪ ದೂರಕ್ಕೆ ಎತ್ತರದ ಪ್ರದೇಶಕ್ಕೆ ಹೋದರೆ ವಿಶಾಲವಾಗಿ ಹರಡಿರುವ ನೀರು ಕಾಣುತ್ತದೆ. ಜಲಾಶಯದಲ್ಲಿ 1 ಟಿಎಂಸಿಯಷ್ಟು ನೀರು ಸಂಗ್ರಹಣಾ ಸಾಮರ್ಥ್ಯವಿದೆ.

‘ಪ್ರತಿವರ್ಷ ನೀರು ನಾಲೆಯಿಂದ ಹೊರಕ್ಕೆ ಹೋಗುತ್ತದೆ. ಆದರೆ, ಈ ಸಲ ಈ ಭಾಗದಲ್ಲಿ ಮಳೆ ಅಧಿಕ ಪ್ರಮಾಣದಲ್ಲಿ ಆಗಿದ್ದರಿಂದ ನೀರು ಹೆಚ್ಚಾಗಿ ಹರಿಯುತ್ತಿದೆ. ಅಲ್ಲದೆ ಮಕ್ಕಳಿಗೆ, ಯುವಕರಿಗೆ ಕೋವಿಡ್ ನಿರ್ಬಂಧದ ಕಾರಣ ಮನೆಯಲ್ಲಿ ಕುಳಿತು ಬೇಸರ ಆಗುತ್ತಿದೆ. ಆದ್ದರಿಂದ ಈ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೈಭೀಮ ಕಾಂಬಳೆ ಹೇಳಿದ್ದಾರೆ.

‘ಜಲಾಶಯದ ಕಾಲುವೆಗಳ ಸುಧಾರಣೆಗೆ ಶಾಸಕ ರಾಜಶೇಖರ ಪಾಟೀಲ ಅವರ ಪ್ರಯತ್ನದಿಂದ ₹78 ಕೋಟಿ ಅನುದಾನ ದೊರೆತಿದ್ದು, ಕೆಲಸ ಪ್ರಗತಿಯಲ್ಲಿದೆ. ಇದರ ಎತ್ತರ ಮೂರು ಅಡಿಯಷ್ಟು ಹೆಚ್ಚಿಸುವುದಕ್ಕೆ ಯೋಜನೆ ಸಿದ್ಧಪಡಿಸಿ ಮುಳುಗಡೆಯಾಗುವ ಜಮೀನುಗಳಿಗೆ ಪರಿಹಾರ ಕೂಡ ನೀಡಲಾಗಿದೆ. ಆದರೂ, ಈ ಕೆಲಸ ಇದುವರೆಗೆ ಆಗಿಲ್ಲ. ಈ ಕೆಲಸವಾದರೆ ಕಾಲುವೆಗಳಿಂದ ರೈತರ ಹೊಲಗಳಿಗೆ ಹೆಚ್ಚಿನ ನೀರು ಹರಿಸಬಹುದು’ ಎಂದು ಗ್ರಾಮ ನೀರು ನಿರ್ವಹಣಾ ಸಮಿತಿ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

‘ನಾಲೆಗೆ ಬಿಡುವ ನೀರಿಗೆ ನಿಯಂತ್ರಿಸುವುದಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಆದ್ದರಿಂದ ಮಳೆ ನೀರು ಒಮ್ಮೆಲೆ ಹೆಚ್ಚಿಗೆ ಬಂದು ಅಪಾಯ ಸಂಭವಿಸಬಹುದು. ಹೀಗಾಗಿ ನಾಲೆಯಲ್ಲಿ ಸೃಷ್ಟಿಯಾಗಿರುವ ಜಲಪಾತಗಳಲ್ಲಿ ಜನರು ಸ್ನಾನ ಮಾಡದಂತೆ ಎಚ್ಚರಿಕೆ ನೀಡಬೇಕು’ ಎಂದು ಗ್ರಾಮಸ್ಥರಾದ ರಾಜಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT