ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಉದ್ದಿಮೆ ಬಂದ್‌ ಮಾಡಲು ನಗರಸಭೆ ಆದೇಶ!

ಪಾನಿಪುರಿ ಅಂಗಡಿ, ಬೇಕರಿ, ಖಾನಾವಳಿ ಮುಚ್ಚಲು ಸೂಚನೆ
Last Updated 18 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್‌ 19 ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದೆ. ನಗರಸಭೆ/ಪುರಸಭೆ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸುತ್ತಿರುವ ಉದ್ದಿಮೆಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಿನ ಆದೇಶ ಬರುವವರೆಗೆ ಮುಚ್ಚಬೇಕು ಎಂದು ನಗರಸಭೆ ಆಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಸಣ್ಣ ಅಂಗಡಿಗಳ ಮಾಲೀಕರಿಗೆ ನೋಟಿಸ್‌ ನೀಡಿರುವುದು ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದೆ.

ಬೀದರ್‌ ನಗರದಲ್ಲಿ ದಾಭಾ, ಕೂಲ್‌ ಡ್ರಿಂಕ್ಸ್‌, ಐಸ್‌ಕ್ರೀಮ್‌, ಬಾರ್‌ ಆ್ಯಂಡ್‌ ರೆಸ್ಟೋರಂಟ್‌ಗಳನ್ನು ಬಿಟ್ಟು ನಗರಸಭೆಯ ಸಿಬ್ಬಂದಿ ಪಾನಿಪುರಿ ಅಂಗಡಿ, ಬೇಕರಿ, ಖಾನಾವಳಿ ಮುಚ್ಚಲು ಸೂಚನೆ ನೀಡಿದ್ದಾರೆ. ಕೆಲ ಹೋಟೆಲ್‌ಗಳ ಮಾಲೀಕರಿಗೆ ಮೌಖಿಕವಾಗಿಯೂ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಆತಂಕಗೊಂಡಿರುವ ಹೋಟೆಲ್‌ ಮಾಲೀಕರು ಭಾರಿ ಮೊತ್ತದ ದಂಡ ವಿಧಿಸಲಿದ್ದಾರೆ ಎನ್ನುವ ಭಯದಿಂದ ಅಂಗಡಿಗಳಿಗೆ ಬೀಗ ಹಾಕಿಕೊಳ್ಳುತ್ತಿದ್ದಾರೆ. ಅಂಗಡಿಯಲ್ಲಿ ಕೆಲಸ ಮಾಡುವವರನ್ನು ಮನೆಗೆ ಕಳಿಸುತ್ತಿದ್ದಾರೆ.

ಬೀದರ್‌ ನಗರದಲ್ಲಿ ಒಟ್ಟು 200 ಪಾನಿಪುರಿ, ಭೇಲ್‌ಪುರಿ, ಮಿರ್ಚಿಭಜಿ ಹಾಗೂ ಸುಸಲಾ ಮಾರಾಟ ಮಾಡುವ ಅಂಗಡಿಗಳಿವೆ. ಅದರಲ್ಲಿ 150 ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಮತ್ತೆ ಯಾವಾಗ ಅಂಗಡಿಗಳನ್ನು ತೆರೆಯಬೇಕು ಎನ್ನುವ ಕುರಿತು ತಿಳಿಸಿಲ್ಲ. 15 ದಿನಗಳ ವರೆಗೆ ಅಂಗಡಿ ಬಂದ್‌ ಮಾಡಿದರೆ ಅಂಗಡಿಗಳ ಮಾಲೀಕರಿಗೆ ಬಾಡಿಗೆ ಕೊಡುವುದು ಹಾಗೂ ಕುಟುಂಬ ನಿರ್ವಹಣೆ ಮಾಡುವುದು ಹೇಗೆ ಎನ್ನುವ ಚಿಂತೆ ವ್ಯಾಪಾರಿಗಳನ್ನು ಕಾಡತೊಡಗಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ದಾಭಾ, ಕೂಲ್‌ಡ್ರಿಂಕ್ಸ್‌, ಐಸ್‌ಕ್ರೀಮ್‌, ಬಾರ್‌ ಆ್ಯಂಡ್‌ ರೆಸ್ಟೋರಂಟ್‌ಗಳನ್ನು ಬಂದ್‌ ಮಾಡಲಾಗಿದೆ. ಆದರೆ, ಬೀದರ್‌ ಜಿಲ್ಲೆಯಲ್ಲಿ ಅವು ಅಬಾಧಿತವಾಗಿ ಮುಂದುವರಿದಿವೆ. ಹೀಗಾಗಿ ಸಂಜೆಯಾಗುತ್ತಲೇ ಕಲಬುರ್ಗಿಯ ಯುವಕರು ಮದ್ಯ ಸೇವನೆ ಹಾಗೂ ಊಟಕ್ಕಾಗಿ ಹುಮನಾಬಾದ್‌ ತಾಲ್ಲೂಕಿನ ಗ್ರಾಮಗಳಲ್ಲಿ ಹೆದ್ದಾರಿ ಬದಿಯಲ್ಲಿರುವ ಧಾಬಾಗಳಿಗೆ ಬರುತ್ತಿದ್ದಾರೆ. ಅಲ್ಲಿ ಯಾವುದೇ ದಾಭಾಗಳ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ.

‘ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಬೆಳಿಗ್ಗೆ ಉಪಾಹಾರ ತಂದುಕೊಡಲು ಉದಗಿರ ರಸ್ತೆಯಲ್ಲಿರುವ ದೊಡ್ಡ ಹೋಟೆಲ್‌ಗೆ ಹೋಗಬೇಕಾಯಿತು. ಇದಕ್ಕಾಗಿ ನೂರು ರೂಪಾಯಿ ವ್ಯಯಿಸಬೇಕಾಯಿತು. ಸ್ವಚ್ಛತೆ ಕಾಪಾಡದ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಲಿ. ಅಂಗಡಿಯನ್ನೇ ಮುಚ್ಚಿದರೆ ಹಳ್ಳಿಯಿಂದ ಬಂದ ನಮ್ಮಂಥವರು ಕಷ್ಟ ಅನುಭವಿಸಬೇಕಾಗಲಿದೆ’ ಎಂದು ಬ್ರಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯ ಸಂಬಂಧಿಯೊಬ್ಬರು ಹೇಳಿದರು.

‘ರಾತ್ರಿ 9 ಗಂಟೆಯ ನಂತರ ಯಾವುದೇ ಖಾನಾವಳಿಯಲ್ಲಿ ಊಟ ದೊರೆಯುವುದಿಲ್ಲ. ಊಟ ಸಿಗದಿದ್ದಾಗ ಜನ ಬ್ರೆಡ್‌ ಖರೀದಿಸಿ ಒಯ್ಯುತ್ತಾರೆ. ನಗರಸಭೆ ಬೇಕರಿ ಮುಚ್ಚಲು ಆದೇಶ ನೀಡಿದೆ. ನಮ್ಮಲ್ಲಿ ಬಾರ್‌ನಲ್ಲಿ ಕುಳಿತುಕೊಳ್ಳುವಂತೆ ಯಾರೂ ಕುಳಿತುಕೊಳ್ಳುವುದಿಲ್ಲ. ಬ್ರೆಡ್, ಬನ್‌ ಇನ್ನಿತರ ತಿನಿಸು ಖರೀದಿಸಿ ತಕ್ಷಣ ಹೊರಟು ಹೋಗುತ್ತಾರೆ. ಜಿಲ್ಲಾ ಆಡಳಿತ ಬೇಕರಿಗಳನ್ನು ಏಕೆ ಗುರಿ ಮಾಡಿದೆ ಎನ್ನುವುದು ಅರ್ಥವಾಗುತ್ತಿಲ್ಲ’ ಎಂದು ಬೇಕರಿ ಮಾಲೀಕರೊಬ್ಬರು ತಮ್ಮ ಅಳಲು ತೋಡಿಕೊಂಡರು.

‘ಜಿಲ್ಲೆಯ ಯಾವುದೇ ಹೋಟೆಲ್‌ಗಳನ್ನು ಮುಚ್ಚಲು ಆದೇಶ ನೀಡಿಲ್ಲ. ಕೋವಿಡ್ 19 ಸೋಂಕು ಭೀತಿಯಿಂದಾಗಿ ಪಾನಿಪುರಿ ಮಾರಾಟಕ್ಕೆ ಮಾತ್ರ ನಿಷೇಧ ಹೇರಲಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT