ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಗುವ ಮೊದಲೇ ಸ್ತಬ್ಧಗೊಂಡರು...

ಸೌಂಡ್‌ಬಾಕ್ಸ್‌ಗಳ ಅಬ್ಬರದಲ್ಲಿ ಮಾಳಿಗೆ ಕುಸಿದಿದ್ದು ಕೇಳಿಸಲೇ ಇಲ್ಲ
Last Updated 27 ಜೂನ್ 2019, 4:26 IST
ಅಕ್ಷರ ಗಾತ್ರ

ಬೀದರ್‌: ಬಸವಕಲ್ಯಾಣದ ರಾಜಾ ಬಾಗಸವಾರ್ ದರ್ಗಾ ಉರುಸ್‌ನಲ್ಲಿ ಪಾಲ್ಗೊಂಡು ಶೇಖ ನದೀಮ್ ಶೇಖ ಯುಸೂಫ್ ತನ್ನ ನಾಲ್ವರು ಮಕ್ಕಳಿಗೆ ಪ್ರೀತಿಯಿಂದ ತಿಂಡಿ ಕೊಡಿಸಿ ಮಧ್ಯರಾತ್ರಿ ಮನೆಗೆ ಬಂದು ಮಲಗಿದ್ದರು. ಆದರೆ, ಸೂರ್ಯೋದಯವಾದಾಗ ಒಬ್ಬರೂ ಬದುಕಿರಲಿಲ್ಲ.

ಉರುಸ್‌ನಲ್ಲಿ ತೆರೆದಿದ್ದ ಮಳಿಗೆಗಳಲ್ಲಿ ಅಳವಡಿಸಿದ್ದ ಸೌಂಡ್‌ಬಾಕ್ಸ್‌ಗಳಲ್ಲಿ ತಡ ರಾತ್ರಿ ವರೆಗೂ ಸಂಗೀತ ಕೇಳಿ ಬರುತ್ತಿತ್ತು. ನದೀಮ್‌ ಶೇಖ ತನ್ನ ಪತ್ನಿ, ಮಕ್ಕಳೊಂದಿಗೆ ಗಾಢ ನಿದ್ರೆಗೆ ಜಾರಿದ ಸಂದರ್ಭದಲ್ಲಿ ಮಾಳಿಗೆ ಕುಸಿಯಿತು. ಸೌಂಡ್‌ಬಾಕ್ಸ್‌ಗಳ ಅಬ್ಬರದಲ್ಲಿ ಪಕ್ಕದ ಮನೆಯವರಿಗೂ ಶಬ್ದ ಕೇಳಿಸಲಿಲ್ಲ. ಇವರೆಲ್ಲ ರಕ್ಷಣೆಗಾಗಿ ಕೂಗುವ ಮೊದಲೇ ಸ್ತಬ್ಧಗೊಂಡರು. ಬೆಳಿಗ್ಗೆ 6.30ಕ್ಕೆ ವಟಾರದವರು ಮನೆಯ ಮೇಲಿನ ಮಾಳಿಗೆ ಕುಸಿದಿರುವುದನ್ನು ಕಂಡು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಹಳೆಯ ಕಟ್ಟಡದ ಅವಶೇಷಗಳನ್ನು ಒಂದೊಂದಾಗಿ ಹೊರಗೆ ತೆಗೆದಿದ್ದಾರೆ. ನಿಧಾನವಾಗಿ ಮಣ್ಣು ಸರಿಸಿದಾಗ ಒಂದೇ ಹಾಸಿಗೆ ಮೇಲೆ ಎಲ್ಲರೂ ಸಾಲಾಗಿ ಮಲಗಿದಾಗ ಮಣ್ಣು ಬಿದ್ದು ಸಾವಿಗೀಡಾಗಿರುವುದು ಕಂಡು ಬಂದಿತು. ನಂತರ ನೆರೆ ಹೊರೆಯವ ರೂ ನೆರವಿಗೆ ಬಂದು ಅವಶೇಷಗಳ ಅಡಿ ಸಿಲುಕಿದ್ದ ಶವಗಳನ್ನು ಒಂದೊಂದಾಗಿ ಹೊರಗೆ ತೆಗೆದರು.

ಮಣ್ಣು ಸರಿಸುವಾಗ ಮಕ್ಕಳ ಶಾಲಾ ನೋಟ್‌ಬುಕ್‌ಗಳು ದೊರೆತವು. ಅವುಗಳ ಮೇಲೆ ಗೌಸಿಯಾ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಆಯಿಷಾಬೇಗಂ, 8ನೇ ತರಗತಿಯ ಮೆತಹಾಬಿ, 1ನೇ ತರಗತಿಯ ಫೈಜಾನ್‌ಅಲಿ ಎಂದು ಬರೆದಿರುವುದು ಕಂಡು ಬಂದಿತು. ನೋಟ್‌ಬುಕ್‌ಗಳಿಂದ ಮಕ್ಕಳ ಹೆಸರು ಸುಲಭವಾಗಿ ತಿಳಿಯಿತು.

ಒಂದೇ ವಟಾರದಲ್ಲಿ 8 ಕುಟುಂಬಗಳು ನೆಲೆಸಿವೆ. 70 ವರ್ಷಗಳ ಹಿಂದೆ ನಿರ್ಮಿಸಿದ ಹಳೆಯ ಮನೆಯ ಮಾಳಿಗೆಯ ಅರ್ಧ ಭಾಗದಲ್ಲಿ ತಗಡುಗಳಿದ್ದು, ಇನ್ನುಳಿದ ಭಾಗದಲ್ಲಿ ಕಟ್ಟಿಗೆಯ ತೊಲೆಗಳಿದ್ದವು. ಅಲ್ಲಲ್ಲಿ ಮೇಟಿಗಂಬ ನಿಲ್ಲಿಸಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಬಸವಕಲ್ಯಾಣದಲ್ಲಿ ಮಳೆ ಸುರಿದಿತ್ತು. ಮಳೆಗೆ ನೆನೆದು ಮಾಳಿಗೆ ಕುಸಿದಿದೆ ಎಂದು ನೆರೆ ಹೊರೆಯವರು ಹೇಳಿದರು.

ಶೇಖ ನದೀಮ್ ಚಿಕ್ಕದಾದ ಹಣ್ಣಿನ ಅಂಗಡಿ ಇಟ್ಟುಕೊಂಡು ಅಚ್ಚುಕಟ್ಟಾದ ಬದುಕು ನಡೆಸಿದ್ದರು. ಶೇಖ ನದೀಮ್‌ ಅವರ ತಂದೆ, ತಾಯಿ ಈಚೆಗೆ ಮುಂಬೈಗೆ ತೆರಳಿದ್ದರು. ಹೀಗಾಗಿ ಅವರು ಸಾವಿನ ದವಡೆಯಿಂದ ಬದುಕಿ ಉಳಿಯುವಂತಾಯಿತು. ಸಾರ್ವಜನಿಕರೇ ಪೊಲೀಸರ ಸಹಕಾರದೊಂದಿಗೆ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಿದರು.

ಮುಖ್ಯಮಂತ್ರಿಯಿಂದ ಇಂದು ಪರಿಹಾರ ವಿತರಣೆ

ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾರಾಯಣ ಅವರು ಹಳೆಯ ಮನೆಯೊಂದರ ಮಾಳಿಗೆ ಕುಸಿದು ಒಂದೇ ಕುಟುಂಬದ ಆರು ಮಂದಿ ಸಾವಿಗೀಡಾದ ಬಸವಕಲ್ಯಾಣದ ಛಿಲ್ಲಾ ಗಲ್ಲಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

‘ಬಸವಕಲ್ಯಾಣ ತಹಶೀಲ್ದಾರರು ತಮ್ಮ ಮಟ್ಟದಲ್ಲಿ ತುರ್ತು ಪರಿಹಾರ ವಿತರಿಸಲಿದ್ದಾರೆ. ಅತಿವೃಷ್ಟಿ ಪರಿಹಾರ ಯೋಜನೆ ಅಡಿಯಲ್ಲಿ ಮೃತ ಕುಟುಂಬದ ಸಂಬಂಧಿಕರಿಗೆ ಪರಿಹಾರ ಒದಗಿಸಲಾಗುವುದು. ಗುರುವಾರ ಮುಖ್ಯಮಂತ್ರಿ ಅವರಿಂದ ₹ 5 ಲಕ್ಷ ಪರಿಹಾರ ಕೊಡಿಸಲಾಗುವುದು’ ಎಂದು ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

‘ವಸತಿ ಯೋಜನೆಯಲ್ಲಿ ಬಸವಕಲ್ಯಾಣಕ್ಕೆ 2,500 ಮನೆಗಳು ಮಂಜೂರಾಗಿವೆ. ಇದರಲ್ಲಿ ಒಂದು ಮನೆಯನ್ನು ಮೃತರ ಕುಟುಂಬಕ್ಕೆ ಮಂಜೂರು ಮಾಡಲಾಗುವುದು. ಬಸವಕಲ್ಯಾಣದಲ್ಲಿರುವ ಹಳೆಯದಾದ ಮಣ್ಣಿನ ಮನೆಗಳ ಸಮೀಕ್ಷೆ ನಡೆಸಿ ಹೊಸ ಮನೆಗಳನ್ನು ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾರಾಯಣ, ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT