ಶ್ರಾವಣ ಮಾಸದಲ್ಲಿ ಕೈಬೀಸಿ ಕರೆಯುವ ಮೈಲಾರ

7
ದೇವರ ದರ್ಶನಕ್ಕೆ ಬರುತ್ತಿರುವ ಭಕ್ತರ ದಂಡು

ಶ್ರಾವಣ ಮಾಸದಲ್ಲಿ ಕೈಬೀಸಿ ಕರೆಯುವ ಮೈಲಾರ

Published:
Updated:
Deccan Herald

ಭಾಲ್ಕಿ: ತಾಲ್ಲೂಕಿನಲ್ಲಿ ಶ್ರಾವಣ ಮಾಸದ ದೇವರ ದರ್ಶನಕ್ಕೆ ಪ್ರಮುಖ ಧಾರ್ಮಿಕ ಕ್ಷೇತ್ರಗಳಿದ್ದು, ತಾಲ್ಲೂಕು ಕೇಂದ್ರದಿಂದ 23 ಕಿ.ಮೀ ದೂರದಲ್ಲಿರುವ ಮೈಲಾರ ಮಲ್ಲಣ್ಣ, ಶನೇಶ್ವರ, ಗಾಯಮುಖ ದೇವಸ್ಥಾನಗಳಿಗೆ ಭಕ್ತರು ಸಾಗರೋಪಾದಿಯಲ್ಲಿ ಭೇಟಿ ನೀಡುತ್ತಿದ್ದಾರೆ. 

ದಕ್ಷಿಣ ಕಾಶಿ ಮಲ್ಲಣ್ಣ ದೇವಸ್ಥಾನ:  ಬೀದರ್–ಉದಗೀರ್ ರಾಜ್ಯ ಹೆದ್ದಾರಿ ಮೇಲಿರುವ ಗ್ರಾಮ ಮೈಲಾರ. ಈ ಐತಿಹಾಸಿಕ ಸ್ಥಳವನ್ನು ದಕ್ಷಿಣ ಕಾಶಿ, ಪ್ರೇಮಪುರ ಮತ್ತು ಖಾನಾಪುರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಜಿಲ್ಲೆಯ ಪ್ರಮುಖ ಧಾರ್ಮಿಕ ಮತ್ತು ಪ್ರೇಕ್ಷಣಿಯ ಸ್ಥಳ. ಇಲ್ಲಿ ಶಿವನ ಇನ್ನೊಂದು ರೂಪವಾಗಿರುವ ಖಂಡೋಬಾ (ಮಲ್ಲಣ್ಣ)ಗೆ ಸಮರ್ಪಿಸಲಾಗಿದೆ. ಇದರ ಪ್ರಮುಖ ಪೂಜಾರಿಗಳು ಕುರುಬ ಜನಾಂಗಕ್ಕೆ ಸೇರಿದವರು. ಪ್ರತಿ ನಿತ್ಯ ನೂರಾರು, ಪ್ರತಿ ಭಾನುವಾರ ದನಗಳ ಸಂತೆ ನಡೆಯುವುದರಿಂದ ಸಾವಿರಾರು ಹಾಗೂ ಪ್ರತಿ ಅಮಾವಾಸ್ಯೆ, ಈಗಂತೂ ಶ್ರಾವಣ ಮಾಸ ಇರುವುದರಿಂದ ಉತ್ತರ ಕರ್ನಾಟಕ, ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ಸ್ಥಳಗಳಿಂದ ಪ್ರವಾಸಿಗರು, ಯಾತ್ರಾರ್ಥಿಗಳು, ಭಕ್ತರು ಮಲ್ಲಣ್ಣನ ದರುಶನ ಪಡೆಯಲು ಬರುತ್ತಿದ್ದಾರೆ.

ದೇವಸ್ಥಾನದ ಪರಿಸರದಲ್ಲಿ ಶನೇಶ್ವರ ಗುಂಡ (ಪುಷ್ಕರಣಿ), ಕಾಶಿ ಗುಂಡ, ಬೈರವ ಕೊಳ, ವಿಠಲ್‌–ರುಕ್ಮೀಣಿ ಗುಂಡ ಸೇರಿದಂತೆ 108 ಗುಂಡಗಳಿದ್ದವು ಎಂದು ಹಿರಿಯರು ಹೇಳುತ್ತಾರೆ. ಗ್ರಂಥಗಳಲ್ಲೂ ಉಲ್ಲೇಖವಿದೆ. ಆದರೆ, ಈಗ ಕೆಲವು ಮಾತ್ರ ಕಾಣ ಸಿಗುತ್ತವೆ. ಉಳಿದವು ಕಾಲಗರ್ಭ ಸೇರಿವೆ ಎನ್ನುತ್ತಾರೆ ಗ್ರಾಮದ ಜನರು.

ಶನೇಶ್ವರ ದೇವಸ್ಥಾನ:  ಮಲ್ಲಣ್ಣ ದೇವಸ್ಥಾನದಿಂದ 2 ಕಿ.ಮೀ ದೂರದ ನಿಸರ್ಗ ರಮಣೀಯ, ಪ್ರಶಾಂತ ವಾತಾವರಣದ ಮಧ್ಯೆ ಶನೇಶ್ವರ ದೇವಸ್ಥಾನವಿದೆ. ಇಲ್ಲಿ ಪ್ರತಿ ಶನಿವಾರ, ಶನಿವಾರ ಅಮಾವಾಸ್ಯೆಯಂದು ಅಪಾರ ಭಕ್ತರ ದಂಡು ಆಗಮಿಸುತ್ತದೆ. ದೇವಸ್ಥಾನಕ್ಕೆ ಮೇಲ್ಛಾವಣಿ ಇಲ್ಲದಿರುವುದು ವಿಶೇಷ.

ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನ:  ಸುತ್ತಮುತ್ತ ಕಾಡು, ಪ್ರಶಾಂತ ವಾತಾವರಣ, ಸದಾ ಪಕ್ಷಿಗಳ ಚಿಲಿಪಿಲಿ ಕಲರವ, ಜೋಗ ಜಲಪಾತದಂತೆ ಮನಮೋಹಕವಾಗಿ ಮೇಲಿನಿಂದ ಧುಮ್ಮಿಕ್ಕುವ ನೀರಿನ ರಮಣೀಯ ದೃಶ್ಯ ಇಲ್ಲಿಗೆ ಬರುವ ಭಕ್ತರ ಮನ ಸೆರೆ ಹಿಡಿಯುತ್ತವೆ.

ಗುಪ್ತಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲು ನೂರಕ್ಕಿಂತ ಜಾಸ್ತಿ ಮೆಟ್ಟಿಲುಗಳನ್ನು ಇಳಿಯಬೇಕು. ಇಲ್ಲಿ ಶ್ರಾವಣ ಮಾಸದಲ್ಲಿ ಪ್ರತಿದಿನ ಮೂರು ಸಾರಿ ಅಭಿಷೇಕ ನಡೆಯುತ್ತದೆ. ಇಲ್ಲಿನ ಅಂಬಲಿ ಪ್ರಸಾದ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ವರ್ಷದಲ್ಲಿ 30 ಭಜನಾ ಕಾರ್ಯಕ್ರಮಗಳು, ಪ್ರತಿ ತಿಂಗಳು ದಶಮಿ ಕಾರ್ಯಕ್ರಮ, ನಿತ್ಯ ಶಾಶ್ವತ ರುದ್ರಾಭಿಷೇಕ, ಅಮಾವಾಸ್ಯೆ ಚತುರ್ದಶಿ, ಶಿವರಾತ್ರಿಯಲ್ಲಿ ಏಳು ದಿವಸ ಹಗಲು–ರಾತ್ರಿ ಸಪ್ತಾಹ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಹಾಗಾಗಿ, ಈ ಸ್ಥಳ ಸದಾ ಭಕ್ತರಿಂದ ಕೂಡಿರುತ್ತದೆ. ಇಲ್ಲಿನ ನೀರು ಅಮೃತಕ್ಕೆ ಸಮ ಎಂಬುದು ಭಕ್ತರ ಭಾವನೆ.

ಇಷ್ಟೆಲ್ಲಾ ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿರುವ ಗಾಯಮುಖ ಗುಪ್ತಲಿಂಗೇಶ್ವರ, ಶನೇಶ್ವರ ದೇವಸ್ಥಾನಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲ. ದೂರದ ಸ್ಥಳಗಳಿಂದ ಬರುವ ಪ್ರವಾಸಿಗರು ಮತ್ತು ಭಕ್ತರಿಗೆ ಉಳಿದುಕೊಳ್ಳಲು ವಸತಿ, ಶೌಚ ಗೃಹ ಇಲ್ಲ ಎಂದು ಭಕ್ತರು ಬೇಸರ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಮೂರು ದೇವಸ್ಥಾನಗಳ ಪ್ರಗತಿಗೆ ಉತ್ತಮ ಯೋಜನೆ ರೂಪಿಸಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನಾಗಿ ರೂಪಿಸಬೇಕು ಎಂದು ಪ್ರಮುಖರಾದ ಅಮರೇಶ್ವರ, ಮಾಣಿಕರಾವ್‌ ಪಾಟೀಲ ಒತ್ತಾಯಿಸುತ್ತಾರೆ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !