ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಹೂಳೆತ್ತುವ ನೆಪದಲ್ಲಿ ಸ್ವಂತ ಮನೆ ನಿರ್ಮಾಣ: ಸಂಸದ ಭಗವಂತ ಖೂಬಾ ಅಸಮಾಧಾನ

ಸಮನ್ವಯ ಸಮಿತಿ ಸಭೆ
Last Updated 10 ಡಿಸೆಂಬರ್ 2018, 13:12 IST
ಅಕ್ಷರ ಗಾತ್ರ

ಬೀದರ್‌: ‘ಬಸವಕಲ್ಯಾಣ ತಾಲ್ಲೂಕಿನ ಪರತಾಪುರ ಹಾಗೂ ಬೀದರ್ ತಾಲ್ಲೂಕಿನ ಆಣದೂರಿನಲ್ಲಿ ಕೆರೆ ಹೂಳೆತ್ತಿ ಮಣ್ಣು ಅಲ್ಲೇ ಸುರಿಯಲಾಗುತ್ತಿದೆ. ಕೆರೆಯ ಆಚೆಗೆ ಹೂಳು ಸಾಗಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಹೂಳೆತ್ತುವ ನೆಪದಲ್ಲಿ ಕೆಲವರು ತಮ್ಮ ಮನೆ ಕಟ್ಟಿಕೊಂಡಿದ್ದಾರೆ’ ಎಂದು ಸಂಸದ ಭಗವಂತ ಖೂಬಾ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ
ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಅಧಿಕಾರಿಗಳು ಜನಪ್ರತಿನಿಧಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಕಚೇರಿಯಲ್ಲಿ ಕುಳಿತು ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳ ಬಗ್ಗೆ ಹೇಳಬಾರದು. ಕೈಗೊಂಡಿರುವ ಕಾಮಗಾರಿಯ ಬಗ್ಗೆ ಸ್ಪಷ್ಟವಾದ ಮಾಹಿತಿ ಕೊಡಬೇಕು’ ಎಂದು ಎಚ್ಚರಿಕೆ ನೀಡಿದರು.

‘ಒಂದು ವರ್ಷದ ಹಿಂದೆ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಸಮರ್ಪಕವಾಗಿ ನಡೆದಿತ್ತು. ಅದೇ ಮಾದರಿಯಲ್ಲಿ ಈಗ ಕಾಮಗಾರಿ ನಡೆಯಬೇಕು. ಅವ್ಯವಹಾರಗಳು ನಡೆಯದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

‘ಕೆಲ ಗ್ರಾಮಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಲಿಖಿತ ದೂರುಗಳು ಬಂದಿವೆ. ಡಿಸೆಂಬರ್ 15 ರಂದು ಜಿಲ್ಲೆಯ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿಶೋರ ದುಬೆ ಮಾತನಾಡಿ, ‘ನರೇಗಾದಲ್ಲಿ ವಿವಿಧ ಕಾಮಗಾರಿಗಳಿಗೆ ₹ 11.37 ಲಕ್ಷ ಖರ್ಚು
ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೆರೆ ಹೂಳೆತ್ತುವ ಕಾಮಗಾರಿಯನ್ನು ಆರಂಭಿಸಲಾಗಿದೆ’ ಎಂದು ಹೇಳಿದರು.

‘ಐದು ವರ್ಷಗಳಲ್ಲಿ 52 ಗೋದಾಮುಗಳನ್ನು ನಿರ್ಮಾಣ ಮಾಡಲಾಗಿದೆ. 71 ಗೋದಾಮು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. 596 ದನದ ಕೊಟ್ಟಿಗೆ, 33 ಕುರಿ ದೊಡ್ಡಿಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯ 185 ಶಾಲೆಗಳ ಪೈಕಿ 11ರಲ್ಲಿ ಆಟದ ಮೈದಾನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಒಂದು ಮೈದಾನ ಮಾತ್ರ ಪೂರ್ಣಗೊಂಡಿದೆ’ ಎಂದು ತಿಳಿಸಿದರು.

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ. ಗಾಮನಗಟ್ಟಿ ಮಾತನಾಡಿ, ‘ಜಿಲ್ಲೆಯ 11 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 25.04 ಲಕ್ಷ ಸಸಿಗಳನ್ನು ನೆಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50 ಜನರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಉಪಾಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಅವಧಿಯನ್ನು 100 ರಿಂದ 150ಕ್ಕೆ ವಿಸ್ತರಿಸಿದೆ. ಆದರೆ ಮಾರ್ಚ್‌ ಅಂತ್ಯದ ವೇಳೆಗೆ ನೂರು ದಿನಗಳು ಪೂರ್ಣಗೊಳ್ಳಲಿವೆ. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟವಾಗಲಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಇದ್ದರು.

ಹವಾ ನಿಯಂತ್ರಿತ ಕೊಠಡಿಗಳಿಂದ ಹೊರ ಬನ್ನಿ
‘ಜಿಲ್ಲೆಯಲ್ಲಿ ಬರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಧಿಕಾರಿಗಳು ಕಚೇರಿಯೊಳಗೆ ಕುಳಿತರೆ ಜನರ ಸಮಸ್ಯೆಗಳನ್ನು ಅರಿತುಕೊಳ್ಳಲಾಗದು. ತಾಲ್ಲೂಕು ಪಂಚಾಯಿತಿ ಇಒಗಳು ಹವಾ ನಿಯಂತ್ರಿತ ಕೊಠಡಿಗಳಿಂದ ಹೊರಗೆ ಬರಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.

‘ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗ್ರಾಮಗಳಿಗೆ ಭೇಟಿ ಕೊಟ್ಟಾಗ ಗ್ರಾಮಸ್ಥರು ಜನಪ್ರತಿನಿಧಿಗಳ ಎದುರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಜನಪರ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT