ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ನರಸಿಂಹ ದೇವರ ಅವತರಣ ಉತ್ಸವ

ಮಹಾರಾಷ್ಟ್ರ, ತೆಲಂಗಾಣ, ಆಂಧ್ರದಿಂದ ಹರಿದು ಬಂದ ಭಕ್ತ ಸಾಗರ
Last Updated 14 ಮೇ 2022, 14:24 IST
ಅಕ್ಷರ ಗಾತ್ರ

ಬೀದರ್: ನಗರದ ಹೊರ ವಲಯದಲ್ಲಿರುವ ಝರಣಿ ನರಸಿಂಹ ಗುಹಾ ದೇಗುಲದಲ್ಲಿ ಉಗ್ರ ನರಸಿಂಹ ದೇವರ ಅವತರಣ ಉತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು.

ಬೆಳಿಗ್ಗೆ 6 ಗಂಟೆಗೆ ಪ್ರವೇಶ ದ್ವಾರ ತೆಗೆದ ತಕ್ಷಣ ನರಸಿಂಹ ದೇವರಿಗೆ ವಿಶೇಷ ಅಭಿಷೇಕ ಮಾಡಲಾಯಿತು. ನಂತರ ಗಣ ಹೋಮ, ವಿಷ್ಣುಯಾಗ, ನವಗ್ರಹ ಪೂಜೆ ಹಾಗೂ ಸಂಜೆ ನರಸಿಂಹ ದೇವರ ಅವತರಣ ಉತ್ಸವ ಜರುಗಿತು.

ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಖಾಸಗಿ ವಾಹನಗಳಲ್ಲಿ ಬಂದು ದೇವರ ದರ್ಶನ ಪಡೆದು ಕೃತಾರ್ಥರಾದರು. ಬೆಳಿಗ್ಗೆ 11 ಗಂಟೆಯ ವರೆಗೆ ಮಾತ್ರ ದರ್ಶನ ಟಿಕೆಟ್‌ ಕೊಡಲಾಗಿತ್ತು. ಆದರೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ಮಧ್ಯಾಹ್ನದ ವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಭಕ್ತರು ಕುಟುಂಬ ಸಹಿತ ಎದೆಮಟ್ಟದ ನೀರಿನಲ್ಲಿ ಸಾಗಿದರು. ನವ ದಂಪತಿಗಳು ಹಾಗೂ ಪಾಲಕರು ಜಾವುಳ ತೆಗೆದ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಗುಹಾದೇಗುಲದೊಳಗೆ ಪ್ರವೇಶಿಸಿ ದೇವರ ದರ್ಶನ ಪಡೆದರು.

ದೇವಸ್ಥಾನ ಆಡಳಿತ ಮಂಡಳಿಯ ಕಾವಲುಗಾರರು ಹಾಗೂ ಪೊಲೀಸರು ಹಂತ ಹಂತವಾಗಿ ಭಕ್ತರನ್ನು ಒಳಗಡೆ ಕಳಿಸಿಕೊಟ್ಟರು. ಗುಹೆಯಲ್ಲಿ ಶುದ್ಧ ಗಾಳಿ ಪೂರೈಕೆ ವ್ಯವಸ್ಥೆ ಇದ್ದ ಕಾರಣ ಯಾವುದೇ ತೊಂದರೆ ಇಲ್ಲದೇ ಭಕ್ತರು ಸರಳವಾಗಿ ಹೋಗಿ ಬರಲು ಸಾಧ್ಯವಾಯಿತು.

ಮುಸ್ಲಿಮ್ ಮಹಿಳೆಯರು ಹಾಗೂ ಸಿಖ್‌ರು ಸಹ ಪುಷ್ಕರಣಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಭಕ್ತರ ಜನದಟ್ಟಣೆ ಇದ್ದ ಕಾರಣ ಕೆಲ ಭಕ್ತರು ದೂರದಿಂದಲೇ ದೇವರಿಗೆ ಕೈ ಮುಗಿದರು. ಔರಾದ್‌ ತಾಲ್ಲೂಕಿನ ಭಕ್ತರು ದೇವಸ್ಥಾನದ ಆವರಣದಲ್ಲಿ ತೊಟ್ಟಿಲೋತ್ಸವ ಹಾಗೂ ನಂತರ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಔರಾದ್‌ನ ಭಜನಾ ಮಂಡಳಿ 23 ವರ್ಷಗಳಿಂದ ಝರಣಿ ನರಸಿಂಹ ದೇಗುಲದಲ್ಲಿ ನಡೆಯುವ ಉಗ್ರ ನರಸಿಂಹ ದೇವರ ಅವತರಣ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ಈ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ ಎಂದು ಭಜನಾ ಮಂಡಳಿಯ ರಾಮರಾವ್‌ ತಿಳಿಸಿದರು.

ಝರಣಿ ನರಸಿಂಹ ದೇವಸ್ಥಾನಕ್ಕೆ ಆಗಾಗ ಬರುತ್ತೇನೆ. 20 ವರ್ಷಗಳಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಮೂರು ವರ್ಷ ಗುಹಾ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಜಾತ್ರೆಯೂ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು 9 ಸಾವಿರ ಭಕ್ತರು ಬಂದು ಹೋಗಿದ್ದಾರೆ ಎಂದು ಭಕ್ತರಾದ ಅಶೋಕ ದಿಡಗೆ ಹೇಳಿದರು.

ಎಣ್ಣೆ ಹೋಳಿಗೆ ನೈವೇದ್ಯ

ಬೀದರ್‌: ನರಸಿಂಹನ ಭಕ್ತರು ಹಾಗೂ ಹರಕೆ ಹೊತ್ತವರು ದೇವಸ್ಥಾನದ ಆವರಣದಲ್ಲೇ ಒಲೆ ಹೊತ್ತಿಸಿ ಎಣ್ಣೆ ಹೋಳಿಗೆ ಮಾಡಿ ದೇವರಿಗೆ ನೈವೇದ್ಯ ಸಮರ್ಪಿಸಿದರು. ಅಡುಗೆ ಮಾಡಿಕೊಳ್ಳುವ ಭಕ್ತರಿಗೆ ದೇವಸ್ಥಾನ ಆಡಳಿತ ಮಂಡಳಿ ದೇಗುಲದ ಸಮೀಪದಲ್ಲಿ ಪ್ರತ್ಯೇಕ ಶೆಡ್‌ ನಿರ್ಮಿಸಿ ವ್ಯವಸ್ಥೆ ಮಾಡಿಕೊಟ್ಟಿತ್ತು. ಹೀಗಾಗಿ ನೈವೇದ್ಯ ಸಿದ್ಧಪಡಿಸಲು ಭಕ್ತಾದಿಗಳಿಗೆ ತೊಂದರೆಯಾಗಲಿಲ್ಲ.

ಕೆಲವರು ಮನೆಯಿಂದ ಸ್ಟೌ ಹಾಗೂ ಅಡುಗೆ ಅನಿಲ ಸಿಲಿಂಡರ್‌ ತಂದಿದ್ದರು. ಬೆಳಗಿನ ಜಾವ ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವರ ಪೂಜೆ ಸಲ್ಲಿಸಿದ ನಂತರ ಇಲ್ಲಿಯೇ ಉಪಾಹಾರ ಸಿದ್ಧಪಡಿಸಿ ಸೇವಿಸಿದರು. ದೇವರಿಗೆ ನೈವೇದ್ಯ ಸಮರ್ಪಿಸಿದ ನಂತರ ಭಕ್ತರಿಗೂ ಹಂಚಿದರು.


ಭಕ್ತರಿಂದಲೇ ಅನ್ನ ಪ್ರಸಾದ ವಿತರಣೆ:

ತೆಲಂಗಾಣದ ಉದ್ಯಮಿಯೊಬ್ಬರು ಉತ್ಸವಕ್ಕೆ ಬಂದ ಎಲ್ಲ ಭಕ್ತರಿಗೂ ಪ್ರಸಾದ ವ್ಯವಸ್ಥೆ ಮಾಡಿದ್ದರು. ಭಕ್ತರು ಮಜ್ಜಿಗೆ, ಶಿರಾ, ಅನ್ನ ಹಾಗೂ ಸಾಂಬಾರು ಸವಿದರು. ಊಟದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನದ ಟಿಕೆಟ್‌ ಕೌಂಟರ್‌ ಬಳಿ ಶುದ್ಧ ನೀರಿನ ಘಟಕ ಅಳವಡಿಸಲಾಗಿತ್ತು. ಭಕ್ತರು ಇಲ್ಲಿಂದ ನೀರು ಪಡೆದರು. ಕೆಲವರು ಬಾಟಲಿಗಳಲ್ಲಿ ತುಂಬಿಕೊಂಡು ಹೋದರು.


ಮಾರಾಟ ಮಳಿಗೆ:

ಉತ್ಸವದ ಪ್ರಯುಕ್ತ ಮಕ್ಕಳ ಆಟಿಕೆ, ಪೂಜಾ ಸಾಮಗ್ರಿ, ಮಹಿಳೆಯರ ಅಲಂಕಾರಿಕ ವಸ್ತುಗಳು ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಅಂಗಡಿಗಳು ತೆರೆದುಕೊಂಡಿದ್ದವು. ಮಹಿಳೆಯರು, ಮಕ್ಕಳು ಗುಂಪು ಗುಂಪಾಗಿ ಮಳಿಗೆಗಳಿಗೆ ತೆರಳಿ ತಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸಿದರು.

ವಿಪರೀತ ಬಿಸಿಲು ಹಾಗೂ ಸೆಕೆ ಇದ್ದ ಕಾರಣ ಕಬ್ಬಿನ ರಸ, ಹಣ್ಣಿನ ರಸ ಹಾಗೂ ತಂಪು ಪಾನೀಯ ಮಾರಾಟ ಜೋರಾಗಿ ನಡೆಯಿತು. ಬಾಯಾರಿಕೆಯಿಂದ ಬಳಲಿ ಅನೇಕರು ಜ್ಯೂಸ್‌ ಹಾಗೂ ಕಬ್ಬಿನ ರಸ ಕುಡಿಯುತ್ತಿದ್ದದ್ದು ಸಾಮಾನ್ಯವಾಗಿತ್ತು.


ಪಾರ್ಕಿಂಗ್‌ ವ್ಯವಸ್ಥೆ

ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದಿಂದ ನಗರದ ಹೊರವಲಯದಲ್ಲಿರುವ ಝರಣಿ ನರಸಿಂಹ ದೇವಾಲಯದ ವರೆಗೂ ನಗರ ಸಾರಿಗೆಯ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನೆರೆಯ ರಾಜ್ಯಗಳ ಭಕ್ತರು ಸ್ವಂತ ಹಾಗೂ ಖಾಸಗಿ ವಾಹನಗಳಲ್ಲೇ ಅಧಿಕ ಸಂಖ್ಯೆಯಲ್ಲಿ ಬಂದಿದ್ದರು.

ಸಂಚಾರ ದಟ್ಟಣೆ ಉಂಟಾಗದಂತೆ ದೇವಸ್ಥಾನದ ಆವರಣದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಕ್ರೂಸರ್‌ ಹಾಗೂ ಕಾರುಗಳು ಸಾಲುಗಟ್ಟಿ ನಿಂತಿದ್ದವು. ಗಡಿ ಗ್ರಾಮಗಳ ಭಕ್ತರು ಆಟೊಗಳಲ್ಲಿ ಬಂದರು. ದೇವಸ್ಥಾನಕ್ಕೆ ಹೋಗುವ ಹಾಗೂ ಬರುವ ವಾಹನಗಳಿಗೆ ದೇವಸ್ಥಾನದಿಂದ ಮಲ್ಕಾಪುರ ಮುಖ್ಯ ರಸ್ತೆ ವರೆಗೂ ಪ್ರತ್ಯೇಕ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಸಂಚಾರ ದಟ್ಟಣೆ ಉಂಟಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT