ಶನಿವಾರ, ನವೆಂಬರ್ 28, 2020
22 °C
ಬಚ್ಚಲು ಗುಂಡಿ ನಿರ್ಮಾಣದಲ್ಲಿ ಖಾನಾಪುರ ಗ್ರಾಮ ಮಾದರಿ

ಔರಾದ್: ನೈರ್ಮಲ್ಯಕ್ಕೂ ನರೇಗಾ ಅನುದಾನ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ಲಾಕ್‌ಡೌನ್ ವೇಳೆ ಪರಿಣಾಮಕಾರಿ ಬಳಕೆಯಾದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಇದೀಗ ನೈರ್ಮಲ್ಯ ಸಮಸ್ಯೆ ಹೋಗಲಾಡಿಸಲು ನೆರವಿಗೆ ಬಂದಿದೆ.

ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಬಚ್ಚಲು ಗುಂಡಿ (ಸೋಕ್ ಪಿಟ್) ನಿರ್ಮಾಣ ಮಾಡಲು ಮುಂದಾಗಿದೆ.

ಪ್ರಥಮ ಹಂತದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ 50 ಬಚ್ಚಲು ಗುಂಡಿ ನಿರ್ಮಿಸುವ ಗುರಿ ನೀಡಲಾಗಿದೆ. ಪ್ರತಿ ಗುಂಡಿಗೆ ₹14 ಸಾವಿರದಿಂದ ₹17 ಸಾವಿರದವರೆಗೆ ಖರ್ಚು ಮಾಡಲು ಅವಕಾಶವಿದೆ. ತಾಲ್ಲೂಕಿನಲ್ಲಿ ಈಗಾಗಲೇ ಇಂತಹ 300 ಬಚ್ಚಲು ಗುಂಡಿಗಳು ನಿರ್ಮಾಣ ಮಾಡಲಾಗಿದೆ.

‘ವಡಗಾಂವ್ (ಡಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಖಾನಾಪುರ ಗ್ರಾಮ ಈ ಯೋಜನೆ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ಒಂದು ಹೆಜ್ಜೆ ಮುಂದೆ ಇದೆ. ಈಗಾಗಲೇ ಇಲ್ಲಿ 15 ಬಚ್ಚಲು ಗುಂಡಿ ನಿರ್ಮಾಣ ಆಗಿವೆ. 40 ಪ್ರಗತಿಯಲ್ಲಿವೆ. ಎರಡು ತಿಂಗಳಲ್ಲಿ 250 ಗುಂಡಿ ನಿರ್ಮಿಸಲಾಗುವುದು’ ಎಂದು ಪ್ರಭಾರಿ ಪಿಡಿಒ ಅನೀಲಕುಮಾರ ಚಿಟ್ಟಾ ಹೇಳುತ್ತಾರೆ.

‘ನಮ್ಮೂರಲ್ಲಿ ಬಚ್ಚಲು ಗುಂಡಿ ನಿರ್ಮಾಣ ಆಗುತ್ತಿರುವುದು ಸಂತಸ ತಂದಿದೆ. ಸರ್ಕಾರ ತನ್ನ ಸ್ವಂತ ಖರ್ಚಿನಿಂದ ನಮ್ಮ ಮನೆ ಬಚ್ಚಲ ನೀರು ಒಂದೆಡೆ ಸಂಗ್ರಹಿಸಿ ಅದೂ ಭೂಮಿಯಲ್ಲಿ ಇಂಗುವಂತೆ ಮಾಡಿದೆ. ಇದರಿಂದ ನಮ್ಮ ಮನೆ ಸುತ್ತಮುತ್ತ ಸ್ವಚ್ಛ ಪರಿಸರ ನಿರ್ಮಾಣ ಆಗಿ ಸೊಳ್ಳೆಗಳ ಕಾಟ ತಪ್ಪಿದೆ’ ಎಂದು ಖಾನಾಪುರ ಗ್ರಾಮದ ನಿವಾಸಿ ಸಂಜುಕುಮಾರ ಜ್ಯೋತಿ ತಿಳಿಸುತ್ತಾರೆ.

‘ನರೇಗಾ ಯೋಜನೆ ಆಯುಕ್ತರು ಬಚ್ಚಲು ಗುಂಡಿ ಯೋಜನೆ ಪರಿಕಲ್ಪನೆ ಜಾರಿಗೊಳಿಸುತ್ತಿದ್ದಂತೆ ಬೀದರ್ ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಈ ಕೆಲಸ ಮಾಡಲು ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಬಚ್ಚಲು ಗುಂಡಿ ನಿರ್ಮಿಸುವ ಗುರಿ ಇಟ್ಟುಕೊಳ್ಳಲಾಗಿದೆ. ನಮ್ಮ ತಾಲ್ಲೂಕು 1,500 ಸೇರಿದಂತೆ ಜಿಲ್ಲೆಯಾದ್ಯಂತ 3000ಕ್ಕೂ ಹೆಚ್ಚು ಗುಂಡಿಗಳ ಕೆಲಸ ಪ್ರಗತಿಯಲ್ಲಿವೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಹೇಳುತ್ತಾರೆ.

‘ಗ್ರಾಮೀಣ ಪ್ರದೇಶದ ಅನೇಕ ಕಡೆ ಚರಂಡಿ ವ್ಯವಸ್ಥೆ ಇಲ್ಲದೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಬಚ್ಚಲು ನೀರು ರಸ್ತೆಗೆ ಹರಿದು ಅನೇಕ ತೊಂದರೆಗಳಿಗೆ ಎಡೆಮಾಡಿಕೊಡುತ್ತಿದೆ. ಮಳೆಗಾಲದಲ್ಲಿ ಜನ ಸಾಂಕ್ರಾಮಿಕ ರೋಗಗಳಿಗೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಸರ್ಕಾರ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಬಚ್ಚಲು ಗುಂಡಿ ನಿರ್ಮಿಸಲು ಮುಂದಾಗಿರುವುದಕ್ಕೆ ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.

‘ಸದ್ಯ ತಾಲ್ಲೂಕಿನಲ್ಲಿ 1,500 ಬಚ್ಚಲು ಗುಂಡಿ ಪ್ರಗತಿಯಲ್ಲಿವೆ. ಜನ ಮುಂದೆ ಬಂದರೆ ಮಾರ್ಚ್‌ವರೆಗೆ ಅಗತ್ಯವಿರುವ ಎಲ್ಲರ ಮನೆ ಮುಂದೆ ಇಂತಹ ಬಚ್ಚಲ ಗುಂಡಿ ನಿರ್ಮಾಣ ಆಗಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ಮಾಣಿಕರಾವ ಪಾಟೀಲ

ಜಿ.ಪಂ ಸಿಇಒ ಅವರ ಕಾಳಜಿ ಮತ್ತು ಸಲಹೆ ಮೇರೆಗೆ ನಮ್ಮ ತಾಲ್ಲೂಕಿನಲ್ಲಿ ಗುರಿ ಮೀರಿ ಬಚ್ಚಲು ಗುಂಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ.
-ಮಾಣಿಕರಾವ ಪಾಟೀಲ, ತಾ.ಪಂ. ಇಒ, ಔರಾದ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು