ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಉದ್ಯೋಗ ಖಾತ್ರಿ ಕಾಮಗಾರಿ ಕೈಗೊಳ್ಳಿ: ಶಾಸಕ ರಾಜಶೇಖರ ಪಾಟೀಲ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಹೆಚ್ಚಿನ ಕಾಮಗಾರಿ ಕೈಗೊಂಡು ಗ್ರಾಮದ ವಿಕಾಸಕ್ಕೆ ಪ್ರಯತ್ನಿಸುವ ಜತೆಗೆ ನಿರುದ್ಯೋಗಿಗಳಿಗೆ ಕೆಲಸ ಒದಗಿಸಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಸಲಹೆ ನೀಡಿದರು.

ತಾಲ್ಲೂಕಿನ ರಾಜೋಳಾದಲ್ಲಿ ಶನಿವಾರ ಕೊಳವೆ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ಮತ್ತು ಗ್ರಾಮ ಪಂಚಾಯಿತಿ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಕೆಆರ್‌ಡಿಬಿ ₹60 ಲಕ್ಷ ಅನುದಾನ ದಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ. ಹುಮನಾಬಾದ್ ವಿಧಾನಸಭಾ ಕ್ಷೇತ್ರದ ರಾಜೇಶ್ವರ ಹೋಬಳಿಯ ಗ್ರಾಮಗಳಲ್ಲಿ ಈಚೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ. ಗೊಗ್ಗಕ್ಕೆ ರಸ್ತೆ ಇರಲಿಲ್ಲ. ಈ ಗ್ರಾಮದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿ ಸಲಾಯಿತು. ₹4 ಕೋಟಿ ವೆಚ್ಚದಲ್ಲಿ ಘೋರವಾಡಿ ದರ್ಗಾದ ಕೆರೆ ಸುಧಾರಣೆ ಕೈಗೊಳ್ಳಲಾಗುತ್ತಿದೆ’ ಎಂದರು.

‘ನನಗೆ ಈ ಭಾಗದಲ್ಲಿ ಮತಗಳು ಕಡಿಮೆ ಪ್ರಮಾಣದಲ್ಲಿ ದೊರೆತರೂ ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ನಡೆಸಿಲ್ಲ’ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರೆಡ್ಡಿ ಯಾಚೆ ಮಾತನಾಡಿ, ‘ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿವಿಧ ಸಮುದಾಯಗಳಿಗಾಗಿ ಸಮುದಾಯ ಭವನಗಳನ್ನು ಕಟ್ಟಿಸಿಕೊಡಬೇಕು. ಹಳೆಯ ವಿದ್ಯುತ್ ತಂತಿ ಬದಲಾಯಿಸಬೇಕು. ಕೆಲವೆಡೆ ಸಿ.ಸಿ ರಸ್ತೆ ನಿರ್ಮಿಸಬೇಕು’ ಎಂದು ಕೇಳಿಕೊಂಡರು.

ಮುಖಂಡ ಯಲ್ಲಾರೆಡ್ಡಿ ಮಾತನಾಡಿದರು. ಕೋವಿಡ್‌ನಿಂದ ನಿಧನರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಹೇಬ್ ಪಟೇಲ್ ಅವರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಯಲ್ಲಾರೆಡ್ಡಿ ಶಾಸಕರಿಗೆ ಮನವಿಪತ್ರ ಸಲ್ಲಿಸಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೆ ಎಇಇ ಶಿವಕುಮಾರ, ಪ್ರಮುಖರಾದ ವೀರಣ್ಣ ಪಾಟೀಲ, ನರಸಾರೆಡ್ಡಿ, ಅಭಿಷೇಕ ಪಾಟೀಲ, ಉಪಾಧ್ಯಕ್ಷ ಸಂದೀಪ ಒಗ್ಗೆ, ಬಾಲರೆಡ್ಡಿ ಯಾಚೆ, ರುದ್ರಮಣಿ ಸ್ವಾಮಿ, ಸುರೇಶ ಚಿಕ್ಕುರ್ತೆ, ವೆಂಟಕರೆಡ್ಡಿ, ರವಿ ಮಾಲೆ, ಪಿಡಿಒ ವಿನಯಕುಮಾರ, ಪೆಂಟಾರೆಡ್ಡಿ, ಸೈಯದ್ ಔಲಿಯಾಪಾಶಾ, ಅರುಣ ಪವಾರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು