ಭಾನುವಾರ, ಮಾರ್ಚ್ 26, 2023
25 °C
ಕೇಂದ್ರ ರಾಸಾಯನ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅಭಿಮತ

ಕಾವ್ಯ ನವ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ: ಭಗವಂತ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಕಾವ್ಯ ಸೇರಿದಂತೆ ಯಾವುದೇ ಬರಹ ದೇಶ ಕಟ್ಟುವಲ್ಲಿ ಹಾಗೂ ನವ ಸಮಾಜ ನಿರ್ಮಿಸಲು ಇತರರಿಗೆ ಪ್ರೇರಣೆಯಾಗಬೇಕು’ ಎಂದು ಕೇಂದ್ರ ರಾಸಾಯನ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಭಾನುವಾರ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವುರ ಹಾಗೂ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ್ ಇವರು ಆಯೋಜಿಸಿದ್ದ ರಾಷ್ಟ್ರೀಯ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾವ್ಯಗಳು ವೈಯಕ್ತಿಕ ಹಿತಾಸಕ್ತಿಗಾಗಿ, ಒಬ್ಬರನ್ನು ಸಂತುಷ್ಟಪಡಿಸಲು, ಪ್ರಶಸ್ತಿ ಗಿಟ್ಟಿಸಲು ಬಳಕೆಯಾಗಬಾರದು. ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವಂತಾಗದೆ, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಪೂರಕ ಆಗಬೇಕು. ದೇಶದ ಸಮಗ್ರ ಅಭಿವೃದ್ಧಿಯಲ್ಲಿಯೂ ಸಾಹಿತ್ಯ ಹಾಗೂ ಸಂಸ್ಕೃತಿಯ ಪಾತ್ರ ಬಹಳಷ್ಟಿದೆ. ಸಾಮಾಜಿಕ ಬದುಕು ಹಾಗೂ ರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾವ್ಯ ನಿಲ್ಲಬೇಕು. ನಮ್ಮ ಪೂರ್ವಜರು ಬಳುವಳಿಯಾಗಿ ಬಿಟ್ಟು ಹೋದ ಕಲೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ’ ಎಂದರು.

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ.ಪಿ.ಡೋಣೂರ ಮಾತನಾಡಿ, ‘ಸಾಹಿತ್ಯ ಹಾಗೂ ಕಾವ್ಯ ಮನುಷ್ಯನ ವ್ಯಕ್ತಿತ್ವ ನಿರ್ಮಾಣ ಮಾಡುವುದಲ್ಲದೇ ದೇಶದ ವಿಕಾಸಕ್ಕೂ ಕಾರಣವಾಗುತ್ತದೆ. ಕಾವ್ಯ ರಚನೆ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ. ಕವಿತೆ ಮನ ಕದಿಯುವಂತಾಗಬೇಕೆ ಹೊರತು ಕದಡಬಾರದು. ಸತ್ಯವನ್ನು ಅರಗಿಸಿಕೊಳ್ಳುವ ಹಾಗೂ ಅಸತ್ಯವನ್ನು ತಳ್ಳಿ ಹಾಕುವ ಧೈರ್ಯ ಕಾವ್ಯದಲ್ಲಿರಬೇಕು. ನದಿ, ಭೂಮಿ, ಆಕಾಶ, ಕಲ್ಲು, ಮಣ್ಣು, ಮರ, ದೈವತ್ವ, ಆತ್ಮವನ್ನು ಮಾತನಾಡಿಸುವಂತಹ ಕಾವ್ಯ ರಚನೆಯಾದಲ್ಲಿ ಅದು ಗಟ್ಟಿ ಕಾವ್ಯವಾಗಿ ಹೊರ ಹೊಮ್ಮುತ್ತದೆ’ ಎಂದು ಹೇಳಿದರು.

ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತವಾವಿಕವಾಗಿ ಮಾತನಾಡಿ, ‘ಈ ವರ್ಷದ ನವೆಂಬರ್ ಇಲ್ಲವೇ ಡಿಸೆಂಬರ್‌ನಲ್ಲಿ ಬೀದರ್‌ನಲ್ಲಿ ಅಂತರರಾಷ್ಟ್ರೀಯ ಜಾನಪದ ಸಮ್ಮೇಳನ ನಡೆಯಲಿದೆ. 15 ಸಾವಿರ ದೇಶಿಯ ಹಾಗೂ 1,500 ವಿದೇಶಿ ಕಲಾವಿದರು ಅದರಲ್ಲಿ ಭಾಗವಹಿಸಲಿದ್ದಾರೆ. ಬೀದರ್ ಜಿಲ್ಲೆ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಗಡಿ ಮಧ್ಯೆ ಇರುವ ಕಾರಣ ಇಲ್ಲಿ 25 ಕೋಟಿ ವೆಚ್ಚದಲ್ಲಿ ಸಾಂಸ್ಕೃತಿಕ ಹಬ್ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದರು.

ಕೇಂದ್ರೀಯ ವಿಶ್ವವಿದ್ಯಾಲಯದ ಶಾಸ್ತ್ರೀಯ ವಿಭಾಗದ ಮುಖ್ಯಸ್ಥ ಡಾ.ಬಿ.ವಿ ಪುಜಾರಿ ಚುಟುಕು ಕವನಗಳ ವಾಚನ ಮಾಡಿದರು. ಕರ್ನಾಟಕ ಸಾಹಿತ್ಯ ಸಂಘದ ಉಪಾಧ್ಯಕ್ಷ ಪ್ರೊ.ಎಸ್.ಬಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ ಉಪಸ್ಥಿತರಿದ್ದರು.

ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು.

ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರು. ನಿಜಲಿಂಗಪ್ಪ ತಗಾರೆ ವಂದಿಸಿದರು. ವಿದ್ಯಾರ್ಥಿನಿ ವೀಣಾ ದೇವಿದಾಸ ಪ್ರಾರ್ಥನೆ ನಡೆಸಿ ಕೊಟ್ಟರು. ವಿದ್ಯಾರ್ಥಿನಿ ಸೃಷ್ಟಿ ಹಾಗೂ ಕೃಷ್ಣಾ ಹೆಬ್ಬಾಳೆ ಸಂಗೀತ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಕವಿಗಳು, ಸಾಹಿತಿಗಳು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು