ಶುಕ್ರವಾರ, ನವೆಂಬರ್ 15, 2019
22 °C
ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಭರವಸೆ

ಶುಕ್ಲತೀರ್ಥ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧ

Published:
Updated:
Prajavani

ಬೀದರ್: ‘ಶುಕ್ಲತೀರ್ಥ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧವಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಹೇಳಿದರು.

ಇಲ್ಲಿಯ ನಾವದಗೇರಿಯ ಮಡಿವಾಳೇಶ್ವರ ಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕ, ಶ್ರೀ ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಆಯೋಜಿಸಿದ್ದ ‘ನಮ್ಮೂರ ನಾವದಗೇರಿ ಜಾನಪದ ಜಾತ್ರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆ ಜಾನಪದದ ತವರೂರು. ಇಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 5 ಎಕರೆ ಹಾಗೂ ಜಾನಪದ ಭವನ ನಿರ್ಮಾಣಕ್ಕೆ 2 ಗುಂಟೆ ಭೂಮಿ ಮಂಜೂರು ಮಾಡಲಾಗಿದೆ’ ಎಂದು ತಿಳಿಸಿದರು.

ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ,‘ಮಠ, ಮಂದಿರಗಳು ಇರುವ ಕಡೆ ಸುಖ, ಶಾಂತಿ ನೆಲೆಸಿರುತ್ತದೆ. ಮಠ, ಮಂದಿರಗಳು ಮನುಷ್ಯ ವಾಮ ಮಾರ್ಗದಲ್ಲಿ ನಡೆಯದಂತೆ ರಕ್ಷಿಸುತ್ತವೆ. ಭಾವೈಕ್ಯ ಹಾಗೂ ಸೌಹಾರ್ದದ ವಾತಾವರಣ ಸೃಷ್ಟಿಗೆ ಅನುವು ಮಾಡಿಕೊಡುತ್ತವೆ’ ಎಂದು ತಿಳಿಸಿದರು.

ಸಾಹಿತಿ ಎಸ್.ಎಂ.ಜನವಾಡಕರ್ ಮಾತನಾಡಿ,‘ಜಗತ್ತು ಹುಟ್ಟಿದಾಗಲೇ ಜನಪದ ಉದಯಿಸಿತು. ಜನಪದ ಇದ್ದರೆ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಮಾತನಾಡಿ,‘12ನೇ ಶತಮಾನದಲ್ಲಿ ಶುಕ್ಲಮುನಿ ಇಲ್ಲಿ ತಪಸ್ಸು ಮಾಡಿದ್ದರು. ಮಡಿವಾಳೇಶ್ವರರು ಬಿಡಾರ ಹೂಡಿ, ಬಾಳಿ ಬದುಕಿದ ಪುಣ್ಯ ಕ್ಷೇತ್ರ ಇದು’ ಎಂದು ತಿಳಿಸಿದರು.

‘ಬರಗಾಲದಲ್ಲೂ ಬತ್ತದೇ ಇಡೀ ನಗರಕ್ಕೆ ನೀರುಣಿಸಿದ ಪವಿತ್ರ ಝರಿ ಶುಕ್ಲತೀರ್ಥ.ಇದರ ಜೀರ್ಣೋದ್ಧಾರ ಅಗತ್ಯವಿದೆ’ ಎಂದರು.

ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಜಾನಪದ ಗೀತೆ ಹಾಡಿದರು. ಬರ್ದಿಪುರ ಆಶ್ರಮದ ಸಿದ್ದೇಶ್ವರ ಸ್ವಾಮಿಜಿ, ಚಾಂಬೋಳ ಶ್ರೀಮಠದ ರುದ್ರಮುನಿ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಉಪಸ್ಥಿತರಿದ್ದರು.

ಬೆಳಿಗ್ಗೆ ನಾವದಗೇರಿಯ ಹನುಮಾನ ಮಂದಿರದಿಂದ ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದ ವರೆಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಕಳಸ ಹೊತ್ತು ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಕುಮಾರ ಪಾಟೀಲ ಗಾದಗಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ದೇವರಿಗೆ ಅಭಿಷೇಕ, ಮಹಾ ಮಂಗಳಾರತಿ ನಡೆದವು.

ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಸಿದ್ದಗೊಂಡ ಚಿಟಗೊಂಡ, ಜೆಸ್ಕಾಂನ ಕಿರಿಯ ಎಂಜಿನಿಯರ್ ಶಿವಾನಂದ ಧನಗರ, ಕಿರಣ ಪಾಟೀಲ, ಸಚಿನ್‌ ಸಿರಗೆರೆ, ಸಂತೋಷ ಧನಗರ, ವೈಷ್ಣವಿ ಗುನ್ನಳ್ಳಿಕರ್, ವಿಶಾಲ ಹೆಬ್ಬಾಳೆ ಅವರನ್ನು ಸನ್ಮಾನಿಸಲಾಯಿತು.

ದತ್ತಗಿರಿ ಮಹಾರಾಜ ಆಶ್ರಮದ ವೈದಿಕ ಪಾಠಶಾಲೆ ವಿದ್ಯಾರ್ಥಿಗಳು ವೇದಶ್ಲೋಕ ಮತ್ತು ಸಂಗೀತ ಕಲಾವಿದ ಸಂಜೀವಕುಮಾರ ಸ್ವಾಮಿ ಉಜನಿ ಹಾಗೂ ಸಂಗಡಿಗರು ಪ್ರಾರ್ಥನೆ ನಡೆಸಿಕೊಟ್ಟರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಸಂಯೋಜಕ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಕಜಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ.ಕುಚಬಾಳ ನಿರೂಪಿಸಿದರು.

ಪ್ರತಿಕ್ರಿಯಿಸಿ (+)