ಸೋಮವಾರ, ಡಿಸೆಂಬರ್ 5, 2022
21 °C
ಸ್ನಾತಕೋತ್ತರ ಕೇಂದ್ರಗಳಲ್ಲಿ ಸಮಸ್ಯೆ ಕೂಪ; ವಿದ್ಯಾರ್ಥಿಗಳಿಗೆ ತಾಪ| ನೂತನ ಬೀದರ್‌ ವಿಶ್ವವಿದ್ಯಾಲಯಕ್ಕೆ ಒಬ್ಬರೇ ಕಾಯಂ ಅಧಿಕಾರಿ

ಬೀದರ್‌ ವಿಶ್ವವಿದ್ಯಾಲಯ| ಕಳಚಿಕೊಳ್ಳಬೇಕಿದೆ ಸಮಸ್ಯೆ ಕೂಪ: 2023ರಲ್ಲಿ ಹೊಸ ರೂಪ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹುಮನಾಬಾದ್–ಬೀದರ್‌ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವನ್ನು ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲು ಆಗಸ್ಟ್‌ನಲ್ಲಿ ತೀರ್ಮಾನ ಕೈಗೊಂಡರೂ ಪ್ರಸಕ್ತ ವರ್ಷ ವಿಶ್ವವಿದ್ಯಾಲಯ ಅಧಿಕೃತವಾಗಿ ಕಾರ್ಯಾರಂಭ ಮಾಡುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಸ್ನಾತಕೋತ್ತರ ಕೇಂದ್ರವು ಹೆದ್ದಾರಿಗೆ ಹೊಂದಿಕೊಂಡು ಒಟ್ಟು 322 ಎಕರೆ ಪ್ರದೇಶ ಹೊಂದಿದೆ. ಗಣಿತ, ರಸಾಯನ ವಿಜ್ಞಾನ, ಕಂಪ್ಯೂಟರ್‌ ವಿಜ್ಞಾನ, ಸಕ್ಕರೆ ತಂತ್ರಜ್ಞಾನ, ವಾಣಿಜ್ಯ, ಕನ್ನಡ, ಉರ್ದು, ಇಂಗ್ಲಿಷ್, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ಸಮಾಜ ಕಾರ್ಯ ಹಾಗೂ ಮಹಿಳಾ ಅಧ್ಯಯನ ವಿಭಾಗಗಳಲ್ಲಿ 400 ವಿದ್ಯಾರ್ಥಿನಿಯರು ಹಾಗೂ 200 ವಿದ್ಯಾರ್ಥಿಗಳು ಸೇರಿ ಒಟ್ಟು 650 ವಿದ್ಯಾರ್ಥಿಗಳು ಇಲ್ಲಿ ಇದ್ದಾರೆ.

2022–2023ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಗುಲಬರ್ಗಾ ವಿಶ್ವವಿದ್ಯಾಲಯದ ಅಧೀನದಲ್ಲೇ ಶಿಕ್ಷಣ ಪೂರ್ಣಗೊಳಿಸಬೇಕಾಗಿದೆ. ಇನ್ನಷ್ಟು ಕಚೇರಿಗಳು ತೆರೆದುಕೊಂಡ ಮೇಲೆ ಹೊಸ ವಿಶ್ವವಿದ್ಯಾಲಯ ಆರಂಭವಾಗಲಿದೆ. ಈಗಿನ ಸ್ನಾತಕೋತ್ತರ ಕೇಂದ್ರದ ಸ್ಥಿತಿಗತಿ ನೋಡಿದರೆ ಎರಡು, ಮೂರು ವರ್ಷಗಳಾದರೂ ಬೇಕಾಗಲಿವೆ.

ಹೊಸ ವಿಶ್ವವಿದ್ಯಾಲಯಕ್ಕೆ ಆಡಳಿತ ಕಚೇರಿ, ಮೌಲ್ಯಮಾಪನ, ಪ್ರಸಾರಾಂಗ ವಿಭಾಗ ಹಾಗೂ ಜಿಮ್‌ಖಾನಾ ಕಟ್ಟಡ ಇಲ್ಲ. ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ ಹೇರಲಾಗಿದೆ. ಇರುವ ಕಟ್ಟಡಳನ್ನೇ ಆಡಳಿತ ಕಚೇರಿಗೆ ಬಳಸಿಕೊಳ್ಳಬೇಕಾಗಿದೆ.

ಕೇಂದ್ರಕ್ಕೆ ಮೈದಾನ ಇಲ್ಲ. ಗ್ರಂಥಾಲಯ ಗಣಕೀಕರಣಗೊಂಡಿಲ್ಲ. ಸ್ನಾತಕೋತ್ತರ ಕೇಂದ್ರದಲ್ಲಿ ಪೂರ್ಣಾವಧಿಯ ಒಬ್ಬ ಉಪನ್ಯಾಸಕರೂ ಇಲ್ಲ. 55 ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಜಟಿಲ ಸಮಸ್ಯೆಗಳಲ್ಲಿ ಇರುವ ಕೇಂದ್ರಕ್ಕೆ ವಿಶ್ವವಿದ್ಯಾಲಯ ರೂಪ ನೀಡುವ ಪ್ರಯತ್ನ ಆರಂಭವಾಗಿಲ್ಲ.

ಹಿಂದೆ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಪ್ರತ್ಯೇಕ ವಸತಿ ನಿಲಯ ಕಟ್ಟಲಾಯಿತಾದರೂ ಅದಕ್ಕೆ ವಿಶ್ವವಿದ್ಯಾಲಯವು ಅಗತ್ಯ ಸಿಬ್ಬಂದಿ ನೇಮಕ ಮಾಡಲೇ ಇಲ್ಲ. ಕಾವಲುಗಾರರು ಇರದ ಕಾರಣ ವಿದ್ಯಾರ್ಥಿನಿಯರು ಅಲ್ಲಿ ವಾಸ ಮಾಡಲು ಹಿಂದೇಟು ಹಾಕಿದ್ದರು. ಹೀಗಾಗಿ ಕಟ್ಟಡ ಹಾಳು ಬಿದ್ದಿತ್ತು. ಕಟ್ಟಡವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ವಿಶ್ವವಿದ್ಯಾಲಯವು ಕಟ್ಟಡವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಬಾಡಿಗೆ ನೀಡಿದೆ. ಇಲ್ಲಿ 80 ವಿದ್ಯಾರ್ಥಿಗಳು ಇದ್ದಾರೆ. ಹುಡುಗರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ವಾಸವಾಗಿದ್ದಾರೆ.

ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ವಿ.ಟಿ.ಕಾಂಬಳೆ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಸೌಲಭ್ಯಗಳ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈಗಾಗಲೇ ಸರ್ಕಾರ ನವೆಂಬರ್ 5ರಂದು ಅಧಿಸೂಚನೆಯನ್ನೂ ಹೊರಡಿಸಿದೆ. ಅದರ ಜತೆಗೆ ಕೆಲ ಷರತ್ತುಗಳನ್ನು ಸಹ ವಿಧಿಸಿದೆ.

ಪ್ರಸ್ತುತ ಸ್ನಾತಕೋತ್ತರ ಕೇಂದ್ರದಲ್ಲಿ ಒಬ್ಬರು ವಿಶೇಷ ಅಧಿಕಾರಿ ಹಾಗೂ ಒಬ್ಬ ಸೇವಕ ಮಾತ್ರ ಕಾಯಂ ಇದ್ದಾರೆ. 65 ಅತಿಥಿ ಉಪನ್ಯಾಸಕರು, ಕಚೇರಿ ಸಹಾಯಕರು, ಸಹಾಯಕರು ಹಾಗೂ ಕಾವಲುಗಾರರು ಸೇರಿ 12 ಮಂದಿ ಶಿಕ್ಷಕೇತರ ಸಿಬ್ಬಂದಿ ಇದ್ದಾರೆ. ಜವಾಬ್ದಾರಿ ವಹಿಸಿಕೊಳ್ಳುವಂಥ ಕಾಯಂ ಸಿಬ್ಬಂದಿ ಇಲ್ಲ.

‘ಮೂರು ವರ್ಷ ಕಳೆದರೂ ತಾಲ್ಲೂಕು ಕಚೇರಿಗಳಿಗೆ ಹೊಸ ಕಟ್ಟಡ ನಿರ್ಮಿಸುವುದು ಇರಲಿ. ಕಟ್ಟಡಕ್ಕೆ ಅಗತ್ಯವಿರುವ ಜಾಗ ಸಿಗುತ್ತಿಲ್ಲ. ಬೀದರ್‌ನಲ್ಲಿ 10 ವರ್ಷಗಳಿಂದ ತಾಲ್ಲೂಕು ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಸರ್ಕಾರ ಮೊದಲು ಸ್ನಾತಕೋತ್ತರ ಕೇಂದ್ರದ ಮೂಲಸೌಕರ್ಯ ಅಭಿವೃದ್ಧಿ ಪಡಿಸಬೇಕಿತ್ತು. ರಾಜಕೀಯ ಕಾರಣಕ್ಕೆ ತರಾತುರಿಯಲ್ಲಿ ವಿಶ್ವವಿದ್ಯಾಲಯ ಘೋಷಣೆ ಮಾಡಿರುವುದು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಹೇಳುತ್ತಾರೆ.

‘ವಿಶ್ವವಿದ್ಯಾಲಯಕ್ಕೆ ಆಡಳಿತ ಕಚೇರಿ, ಮೌಲ್ಯಮಾಪನ ವಿಭಾಗದ ಕಟ್ಟಡ ಹಾಗೂ ಜಿಮ್‌ಖಾನಾ ಅಗತ್ಯವಿದೆ. ಇದ್ದ ಕಟ್ಟಡಗಳಲ್ಲೇ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿನಿಲಯವನ್ನೇ ಆಡಳಿತ ಕಚೇರಿಯಾಗಿ ಮಾಡಲಿರುವ ಕಾರಣ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಲಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹೊಸ ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ಬೀದರ್‌ ನಗರ ವಿಸ್ತಾರವಾಗಲಿದೆ. ವಿಶ್ವವಿದ್ಯಾಲಯಕ್ಕೆ ಜಾಗದ ಕೊರತೆ ಇಲ್ಲ. ಈಗಾಗಲೇ ರಾಜ್ಯ ಸರ್ಕಾರ ₹ 2 ಕೋಟಿ ಘೋಷಣೆ ಮಾಡಿದೆ. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರೆ ವಿಶ್ವವಿದ್ಯಾಲಯ ಸಕಾಲದಲ್ಲಿ ಕಾರ್ಯಾರಂಭ ಮಾಡಬಹುದು’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ, ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ವಿಶ್ವಾಸ ವ್ಯಕ್ತಪಡಿಸುತ್ತಾರೆ.

 ‘ಒಂದು ಸ್ವತಂತ್ರ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಇವೆ. ಹೊಸ ಸಿಬ್ಬಂದಿ ನೇಮಕಾತಿ ಹಾಗೂ ಸಿಬ್ಬಂದಿ ವಸತಿ ಗೃಹ ನಿರ್ಮಾಣ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳಿಸಬಹುದು ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಮನವರಿಕೆ ಮಾಡಿದೆ. ಇದೇ ಆಧಾರದ ಮೇಲೆಯೇ ಸರ್ಕಾರ ತೀರ್ಮಾನ ಪ್ರಕಟಿಸಿದೆ ಎಂದು ಬಿಜೆಪಿ ಮುಖಂಡರು ಸಮಜಾಯಿಸಿ ನೀಡುತ್ತಾರೆ.

‘ಕುಲಪತಿ, ಕುಲಸಚಿವ ಹಾಗೂ ಇನ್ನಿತರ ಪ್ರಮುಖ ಹುದ್ದೆಗಳ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಬೇಕಿದೆ. ಹೊಸ ವಿಶ್ವವಿದ್ಯಾಲಯಕ್ಕೆ ಬಜೆಟ್‌ನಲ್ಲಿ ಹಣವನ್ನೂ ಕಾಯ್ದಿರಿಸಿದೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ಹೇಳುತ್ತಾರೆ.

 ‘ಜಿಲ್ಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ 1996–97ರಲ್ಲಿ ಆರಂಭವಾಗಿದೆ. ಮೊದಲು ಸಕ್ಕರೆ ತಂತ್ರಜ್ಞಾನದ ಕೋರ್ಸ್‌, ನಂತರ ಉರ್ದು ಹೀಗೆ ಒಂದೊಂದಾಗಿ ವಿವಿಧ ವಿಭಾಗಗಳು ಆರಂಭವಾಗಿ ಪ್ರಸ್ತುತ ಒಟ್ಟು 13 ವಿಭಾಗಗಳು ನಡೆಯುತ್ತಿವೆ. ಪ್ರಸಕ್ತ ವರ್ಷದ ಪ್ರವೇಶಾತಿ ಈಗಾಗಲೇ ಮುಗಿದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಬಹುದು’ ಎನ್ನುತ್ತಾರೆ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ರವೀಂದ್ರ ಗಬಾಡಿ.

ಹೊಸ ವಿಶ್ವವಿದ್ಯಾಲಯಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳು

* ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಯಾವುದೇ ಜಮೀನು, ವಾಹನ ಖರೀದಿಸುವಂತಿಲ್ಲ. ಹೊಸ ಕಟ್ಟಡಗಳನ್ನೂ ನಿರ್ಮಿಸುವಂತಿಲ್ಲ. ಈಗಾಗಲೇ ಮಾತೃ ವಿಶ್ವವಿದ್ಯಾಲಯಕ್ಕೆ ಮಂಜೂರಾದ ಹುದ್ದೆಗಳಲ್ಲಿ ಅವಶ್ಯಕ ಹುದ್ದೆಗಳನ್ನು ಬಳಸಿಕೊಂಡು ವಿಶ್ವವಿದ್ಯಾಲಯ ಶುರು ಮಾಡಬೇಕು. ಯಾವುದೇ ಹೊಸ ಹುದ್ದೆಗಳನ್ನು ಸೃಷ್ಟಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

* ಸಂಪೂರ್ಣವಾಗಿ ಡಿಜಿಟಲ್‌ ಹಾಗೂ ಕೌಶಲಾಧಾರಿತ ಮಾದರಿ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಬೇಕು. ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಸಂಯೋಜಿತ ಕಾಲೇಜುಗಳ ಆಧಾರದ ಮೇಲೆ ಬೋಧಕ, ಬೋಧಕೇತರ ಹುದ್ದೆಗಳನ್ನು ಮರು ಹಂಚಿಕೆ ಮಾಡಬೇಕು. ವಿಶ್ವವಿದ್ಯಾಲಯದ ಕುಲಸಚಿವರು ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು.

* ವಿಶ್ವವಿದ್ಯಾಲಯಕ್ಕೆ ಮಂಜೂರಾಗಿರುವ ₹ 2 ಕೋಟಿ ಮೊತ್ತವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಿಲೀನದ ಆದೇಶ ಹೊರಡಿಸಿದ ನಂತರ ಬಿಡುಗಡೆಗೊಳಿಸಲಾಗುವುದು.

* ಪೀಠೋಪಕರಣ ಹಾಗೂ ಸಾಮಗ್ರಿಗಳ ದಾಖಲೆ ವರ್ಗಾವಣೆ ಸಹ ಕುಲಸಚಿವರು ಆದೇಶ ಹೊರಡಿಸಿದ ತಿಂಗಳಲ್ಲಿ ಪೂರ್ಣಗೊಳ್ಳಬೇಕು. ಜಿಲ್ಲಾಧಿಕಾರಿ ಜಮೀನು ವರ್ಗಾವಣೆಗೆ ಸಂಬಂಧಪಟ್ಟಂತೆ ಅಗತ್ಯ ಸಹಕಾರ ನೀಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್‌ ಹಿರೇಮಠ ನವೆಂಬರ್ 5ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.