ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಹೊಸ ಶಿಕ್ಷಣ ನೀತಿ: ಗಣ್ಯರ ಪ್ರತಿಕ್ರಿಯೆಗಳು

Last Updated 30 ಜುಲೈ 2020, 16:43 IST
ಅಕ್ಷರ ಗಾತ್ರ

ಭವಿಷ್ಯದ ಭಾರತ ಕಟ್ಟಲು ಸಹಕಾರಿ

ಬೀದರ್: ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯ ಬಹಳಷ್ಟು ಅಂಶಗಳು ಭವಿಷ್ಯದ ಭಾರತ ಕಟ್ಟಲು ಸಹಕಾರಿಯಾಗಿವೆ. 5+3+3+4 ನಿಯಮ ಶಾಲಾ ಶಿಕ್ಷಣ ಉತ್ತಮಗೊಳಿಸಲಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಎರಡನೇ ತರಗತಿವರೆಗೆ ಉನ್ನತೀಕರಿಸಿರುವುದು ಒಳ್ಳೆಯ ಬೆಳವಣಿಗೆ. ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವುದು ಶಿಕ್ಷಣದ ಬಗ್ಗೆ ಸರ್ಕಾರಕ್ಕೆ ಇರುವ ದೂರದೃಷ್ಟಿಯನ್ನು ತೋರಿಸಿದೆ. ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡಿರುವುದರಿಂದ ದೇಶದ ಜ್ಞಾನ ಭಂಡಾರದ ಉನ್ನತೀಕರಣವಾಗಲಿದೆ.

ಅಬ್ದುಲ್ ಖದೀರ್, ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ

***

ಕ್ರಾಂತಿಕಾರಿ ಹೆಜ್ಜೆ

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 2020 ದೇಶದ ಶಿಕ್ಷಣ ವ್ಯವಸ್ಥೆ ಸುಧಾರಿಸುವ ದಿಸೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ.
ಮೌಲ್ಯ ಶಿಕ್ಷಣದ ಪರಿಣಾಮಕಾರಿ ಅಳವಡಿಕೆ ಕುರಿತು ಯಾವುದೇ ಆದೇಶಗಳಿಲ್ಲದಿದ್ದರೂ ಬರುವ ದಿನಗಳಲ್ಲಿ ಅದನ್ನು ಗಮನದಲ್ಲಿ ಇಟ್ಟುಕೊಂಡು ಪಠ್ಯಕ್ರಮ ರಚಿಸುವ ಮುನ್ಸೂಚನೆ ನೀಡಿದೆ.

ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ನೀಡಿದಂತೆ ಬರುವ ದಿನಗಳಲ್ಲಿ ಮಾಧ್ಯಮಿಕ ಹಂತದಲ್ಲೂ ಮೌಲ್ಯ ಶಿಕ್ಷಣಕ್ಕೆ ಪ್ರಾಶಸ್ತ್ಯ ಕಲ್ಪಿಸಬೇಕಾಗಿದೆ. ಒಟ್ಟಾರೆ ಶಿಕ್ಷಣ ನೀತಿ ಸ್ವಾಗತಾರ್ಹವಾಗಿದೆ.

ರಮೇಶ ಕುಲಕರ್ಣಿ, ಶಿಕ್ಷಣ ತಜ್ಞ

* * *
ಅಗತ್ಯ ಸೌಕರ್ಯಗಳನ್ನೂ ಒದಗಿಸಲಿ

ಶಿಕ್ಷಣ ನೀತಿ ಬದಲಾಗಬೇಕೆಂಬುದು ಎಲ್ಲರ ವಾದ ಆದರೆ ಬಹು ಸಂಸ್ಕೃತಿಯ ಭಾರತದಲ್ಲಿ ಅದು ಸ್ಥಳೀಯ ಭಾಷೆ ಸಂಸ್ಕೃತಿಯನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳುತ್ತದೆ ಎಂಬುದು ಬಹುದೊಡ್ಡ ಪ್ರಶ್ನೆ. ಬಿಸಿಯೂಟ, 5ನೆಯ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಸ್ವಾಗತಾರ್ಹ. ಆದರೆ ಕನಿಷ್ಠ ಹತ್ತನೆ ತರಗತಿಯವರೆಗೆ ಮಾತೃಭಾಷೆ, ರಾಜ್ಯ ಭಾಷೆಯಲ್ಲಿ ಶಿಕ್ಷಣ ಸಿಕ್ಕರೆ ಸ್ಥಳೀಯ ಸಂಸ್ಕೃತಿ ಉಳಿಯಲು ಸಾಧ್ಯ. ಶಿಕ್ಷಣ ನೀತಿ ಬದಲಾವಣೆ ಹೆಸರಲ್ಲಿ ಏಕರೂಪದ ಶಿಕ್ಷಣ, ಏಕಭಾಷೆ, ಏಕಸಂಸ್ಕೃತಿಯ ಹೇರಿಕೆಯಾಗಬಾರದು. ಅದಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಜ್ಞರ ಸಮಿತಿ ಅಗತ್ಯವಾಗಿರುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ ಬೇಕಾಗುವ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸದೆ ಶಿಕ್ಷಣ ನೀತಿ ಮಾತ್ರ ಬದಲಿಸಿದರೆ ಉಪಯೋಗವಿಲ್ಲ.

ಡಾ.ಬಸವರಾಜ ಬಲ್ಲೂರ, ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ

* * *
ಮಾತೃಭಾಷೆಯ ಅಭಿವೃದ್ಧಿಗೆ ಪೂರಕ

ಬೀದರ್: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಉಳಿಯುವಿಕೆಯ ನಿಟ್ಟಿನಲ್ಲಿ 5ನೇ ತರಗತಿವರೆಗೆ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಲ್ಲಿ ಕಲಿಕೆಗೆ ಒತ್ತು ನೀಡುವ ಹೊಸ ಶಿಕ್ಷಣ ನೀತಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದು ಮಹತ್ವದ ಹೆಜ್ಜೆಯಾಗಿದೆ.
8ನೇತರಗತಿ ವರೆಗೂ ಶಿಕ್ಷಣದ ಮಾಧ್ಯಮವು ಮಾತೃಭಾಷೆ ಆಗಿರಬೇಕು ಎಂಬ ಅಂಶಕ್ಕೆ ಒತ್ತು ನೀಡಿರುವುದು ಕನ್ನಡದ ಭಾಷೆಯ ಬೆಳವಣಿಗೆಯ ಆತಂಕದ ಸಂದರ್ಭದಲ್ಲಿ ಇಟ್ಟ ಸೂಕ್ತ ಕ್ರಮವಾಗಿದೆ. ಹಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಕನ್ನಡ ಹೋರಾಟಗಾರರು, ಬರಹಗಾರರು, ಸಾಹಿತಿಗಳು ,ಶಿಕ್ಷಣ ತಜ್ಞರು ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು. ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿ ಆದರೆ ಮಕ್ಕಳ ಕಲಿಕೆಯು ಸರಳ ಹಾಗೂ ಆಸಕ್ತಿದಾಯಕವಾಗುತ್ತದೆ, ಪಡೆದ ಶಿಕ್ಷಣದಿಂದಾಗಿ ಬದುಕು ಕಟ್ಟಿಕೊಳ್ಳುವಂತಾಗಬೇಕು,ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯು ಪೂರಕವಾಗಿದೆ.

ಸಂಜೀವಕುಮಾರ ಅತಿವಾಳೆ,ಆಣದೂರವಾಡಿಯ ಸಹ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ
* * *
ಶಿಕ್ಷಣ ಹಂತಗಳಲ್ಲೇ ಬದಲಾವಣೆ

ಬೀದರ್‌: ಹೊಸ ಶಿಕ್ಷಣದ ನೀತಿಯಲ್ಲಿ ಶಾಲಾ ಶಿಕ್ಷಣವನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ.
ಪ್ರೌಢ ಶಿಕ್ಷಣ 10ನೇ ತರಗತಿ ವರೆಗೂ ಇರಬೇಕಿತ್ತು. ಈವರೆಗೆ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಹಂತಗಳಿದ್ದವು. ಇದರ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಮಕ್ಕಳಿಗೆ ಸ್ವಲ್ಪ ಸಮಯ ಬೇಕಾಗಬಹುದು. ಆದರೆ, ಸರ್ಕಾರ 34 ವರ್ಷಗಳಲ್ಲೇ ಮಹತ್ವದ ಹೆಜ್ಚೆ ಇಟ್ಟಿರುವುದು ಸ್ವಾಗತಾರ್ಹವಾಗಿದೆ.

ಸಿದ್ರಾಮ ಪಾಟೀಲ, ಕೊಟಗ್ಯಾಳ,ಪೋಷಕ

* * *
ಗುಣಮಟ್ಟದ ಶಿಕ್ಷಣಕ್ಕೂ ಒತ್ತುಕೊಡಲಿ
ಬೀದರ್‌: ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ಭಾಷೆಯನ್ನು ಒತ್ತಾಯವಾಗಿ ಹೇರಲು ಅವಕಾಶ ಇಲ್ಲ. 1 ವರ್ಷದಿಂದ 14 ವರ್ಷದವರೆಗಿನ ಕಡ್ಡಾಯ ಶಿಕ್ಷಣವನ್ನು 18 ವರ್ಷದ ವರೆಗೆ ವಿಸ್ತರಿಸಲಾಗಿದೆ ಎಂದು ಹೊಸ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ. ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ ರಾಜ್ಯ ಸರ್ಕಾರದ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಬಗ್ಗೆಯೂ ಒತ್ತುಕೊಡಬೇಕು.ಶಾಲಾ ಶಿಕ್ಷಣ ಹಂತದ ಬದಲಾವಣೆಯೇ ಸುಧಾರಣೆಯಾಗಲಾರದು. ಬಡವರಿಗೂ ಗುಣಮಟ್ಟದ ಶಿಕ್ಷಣ ಕೊಡುವ ದಿಸೆಯಲ್ಲಿ ಒತ್ತುಕೊಡಬೇಕು.

ಮಲ್ಲಿಕಾರ್ಜುನ ಚಿಟ್ಟಾ, ಪೋಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT