ಬುಧವಾರ, ನವೆಂಬರ್ 13, 2019
23 °C

ಡಿ.1ರಿಂದ ಬೀದರ್‌ಗೆ ಹೊಸ ವಿಮಾನ

Published:
Updated:
Prajavani

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಿಂದ ಬೀದರ್‌ ನಗರಕ್ಕೆ ಡಿಸೆಂಬರ್ 1ರಿಂದ ‘ಟ್ರೂಜೆಟ್’  ಕಂಪನಿಯ ಹೊಸ ವಿಮಾನ ಹಾರಾಟ ಆರಂಭಿಸಲಿದೆ.

ಅದರ ಜೊತೆಗೆಯೇ ನಿಲ್ದಾಣದಿಂದ ಆರು ಹೊಸ ಮಾರ್ಗಗಳಿಗೆ ವಿಮಾನಗಳು ಹಾರಾಟ ನಡೆಸಲಿದ್ದು, ಎರಡು ನೂತನ ಏರ್‌ಲೈನ್ಸ್‌ಗಳೂ ಸೇವೆ ಆರಂಭಿಸಿವೆ. 

‘ನಿಲ್ದಾಣದ ಬಳಕೆ ಪ್ರಮಾಣ ಹಾಗೂ ವಿಮಾನಯಾನಗಳ ಲಭ್ಯತೆ ನೋಡಿಕೊಂಡು ಚಳಿಗಾಲದ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ಅಡ್ಡೀಸ್ ಅಬಾಬಾ, ಆ್ಯಮ್‌ಸ್ಟರ್ ಡ್ಯಾಮ್‌, ಜೋಧಪುರ, ಜಾರ್ಸುಗುಡಾ, ಬೀದರ್ ಮತ್ತು ಟುಟಿಕೋರಿನ್‍ ಮಾರ್ಗಗಳಲ್ಲಿ ಹೊಸ ವಿಮಾನಗಳು ಹಾರಾಟ ನಡೆಸಲಿವೆ. 2020ರ ಮಾರ್ಚ್ 28ರವರೆಗೂ ಈ ಸೇವೆ ಇರಲಿದೆ’ ಎಂದು ಮೂಲಗಳು ತಿಳಿಸಿವೆ.

‘ಇಥಿಯೋಪಿಯನ್ ಏರ್‌ಲೈನ್ಸ್ ಹಾಗೂ ಕೆಎಲ್‍ಎಂ ರಾಯಲ್ ಡಚ್ ವಿಮಾನಯಾನ ಕಂಪನಿಗಳೂ ನಿಲ್ದಾಣಕ್ಕೆ ಲಗ್ಗೆ ಇಟ್ಟಿವೆ. ಇದು ನಿಲ್ದಾಣದ ಮತ್ತೊಂದು ಮೈಲಿಗಲ್ಲು’ ಎಂದು ಮೂಲಗಳು ಹೇಳಿವೆ.

‘ಹೊಸ ಮಾರ್ಗಗಳ ಆರಂಭದಿಂದಾಗಿ ನಿಲ್ದಾಣವು 25 ಅಂತರರಾಷ್ಟ್ರೀಯ ಸೇರಿದಂತೆ 82 ಸ್ಥಳಗಳಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯ ಹೊಂದಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)