ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ವೈದ್ಯಕೀಯ ಸೌಲಭ್ಯಕ್ಕೆ ಹೊಸ ತಾಲ್ಲೂಕು ಜನರ ಪರದಾಟ

Last Updated 13 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕಾಗಿ ರಾಜ್ಯ ಸರ್ಕಾರ 2017–2018ರಲ್ಲಿ ಹೊಸ ತಾಲ್ಲೂಕುಗಳಿಗೆ ಅನುಮೋದನೆ ನೀಡಿದೆ. ನಾಲ್ಕು ವರ್ಷ ಕಳೆದರೂ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೇರಿಸುವುದಿರಲಿ, ಒಂದು ಹುದ್ದೆಗೂ ಮಂಜೂರಾತಿ ನೀಡಿಲ್ಲ.

ಚಿಟಗು‍ಪ್ಪ, ಕಮಲನಗರ ಹಾಗೂ ಹುಲಸೂರಿನ ಸಮುದಾಯ ಆಸ್ಪತ್ರೆಗಳಲ್ಲಿ ವಾರ್ಷಿಕ ಸರಾಸರಿ 45 ಸಾವಿರ ಹೊರ ರೋಗಿಗಳು ಚಿಕಿತ್ಸೆ ಪಡೆದರೆ, ಒಳ ರೋಗಿಗಳ ವಿಭಾಗಗಳಲ್ಲಿ 15 ಸಾವಿರ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ತಜ್ಞ ವೈದ್ಯರ ಕೊರತೆಯಿಂದ ರೋಗಿಗಳಿಗೆ ಹೆಚ್ಚಿನ ವೈದ್ಯಕೀಉಯ ಸೌಲಭ್ಯ ದೊರಕುತ್ತಿಲ್ಲ.

ಹೊಸ ತಾಲ್ಲೂಕು ಘೋಷಣೆಯಾದರೂ ಹಳೆಯ ತಾಲ್ಲೂಕಿಗೆ ಹೋಗುವುದು ತಪ್ಪಿಲ್ಲ. ಗಂಭೀರ ಸ್ವರೂಪದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬೀದರ್, ಕಲಬುರ್ಗಿ, ಹೈದರಾಬಾದ್ ಹಾಗೂ ಸೋಲಾಪುರಕ್ಕೆ ಹೋಗಿ ಬರುವುದು ಅನಿವಾರ್ಯವಾಗಿದೆ. ಸರ್ಕಾರ ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಆಸಕ್ತಿ ತೋರಿಸದಿರುವುದು ಹೊಸ ತಾಲ್ಲೂಗಳ ಜನರಿಗೆ ನಿರಾಸೆ ಉಂಟು ಮಾಡಿದೆ.

‘2021ರ ಜುಲೈನಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರುವ 30 ಹಾಸಿಗೆಗಳ ಆಸ್ಪತ್ರೆಗಳನ್ನು 100 ಹಾಸಿಗೆಗಳ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೆ ಏರಿಸಿದರೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಸಂಖ್ಯೆಯೂ ಹೆಚ್ಚಾಗಲಿದೆ. ಪ್ರಸ್ತಾವದಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಇದೆಲ್ಲ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಹೇಳುತ್ತಾರೆ.

ಸರ್ಕಾರ ತುರ್ತು ಅಗತ್ಯವಿಲ್ಲದ ಹಾಗೂ ಬೇಕಿಲ್ಲದ ಕಾಮಗಾರಿಗಳಿಗೆ ಹಣ ಮಂಜೂರು ಮಾಡಿ ಪೋಲು ಮಾಡುತ್ತಿದೆ. ಜಾತಿಗೊಂದು ಸಮುದಾಯ ಭವನ, ಜನರು ಬಯಸದಿದ್ದರೂ ಮಹಾತ್ಮರ ಮೂರ್ತಿಗಳ ಸ್ಥಾಪನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಜನರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಹಿಂದೇಟು ಹಾಕುತ್ತಿದೆ’ ಎಂದು ಕಮಲನಗರ ತಾಲ್ಲೂಕಿನ ಕಿರಣ್‌ ಹಾಗೂ ಬಸವರಾಜ ಬೇಸರ ವ್ಯಕ್ತಪಡಿಸುತ್ತಾರೆ.

ಬಿಜೆಪಿ ಸರ್ಕಾರವೇ ಹೊಸ ತಾಲ್ಲೂಕುಗಳ ಘೋಷಣೆ ಮಾಡಿದೆ. ಬಸವಕಲ್ಯಾಣ ಹಾಗೂ ಕಮಲನಗರದಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಬಡ ಜನರಿಗೆ ಬೇಕಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶಾಸಕರು ವಿಫಲವಾಗಿದ್ದಾರೆ ಎಂದು ಹುಲಸೂರಿನ ಕಮಲಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಪ್ಪದ ರೋಗಿಗಳ ಬವಣೆ

ಚಿಟಗುಪ್ಪ: ಚಿಟಗುಪ್ಪದ ಸಮುದಾಯ ಆರೋಗ್ಯ ಕೇಂದ್ರ ಆರಂಭವಾದಾಗಿನಿಂದಲೂ ಸಮಸ್ಯೆಗಳ ಸುಳಿಯಲ್ಲೇ ಇದೆ. ಚಿಟಗುಪ್ಪ ತಾಲ್ಲೂಕಿನ ಒಟ್ಟು 37 ಗ್ರಾಮಗಳ ಜನ ವೈದ್ಯಕೀಯ ಸೇವೆ ಪಡೆಯಲು ಜಿಲ್ಲಾ ಕೇಂದ್ರಕ್ಕೆ ತೆರಳುವುದು ತಪ್ಪಿಲ್ಲ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟು 8 ಹುದ್ದೆಗಳ ಪೈಕಿ ಅರಿವಳಿಕೆ ತಜ್ಞ ಹುದ್ದೆ ಖಾಲಿ ಇದೆ. ಏಳು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶುಶ್ರೂಷಕ ಅಧಿಕಾರಿಗಳ ಹುದ್ದೆಗಳನ್ನೇ ಮಂಜೂರು ಮಾಡಿಲ್ಲ. ಏಳು ಜನ ಗ್ರೂಪ್‌ ಡಿ ನೌಕರರಿದ್ದಾರೆ. ಅದರಲ್ಲಿ ಐವರು ಗುತ್ತಿಗೆ ಅಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ರಕ್ತ ಪರೀಕ್ಷಾ ತಂತ್ರಜ್ಞ, ಔಷಧ ವಿತರಕ ಹುದ್ದೆಯಲ್ಲೂ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ಕಿರಣ ಪಾಟೀಲ ಹೇಳುತ್ತಾರೆ.

ಚಿಟಗುಪ್ಪ ಹೊಸ ತಾಲ್ಲೂಕು ಘೋಷಣೆಯಾದ ನಂತರ ಸರ್ಕಾರ 2021-2022ನೇ ಸಾಲಿನಲ್ಲಿ ಎನ್.ಎಚ್.ಎಂ ಯೋಜನೆ ಅಡಿಯಲ್ಲಿ ₹ 66.72 ಕೋಟಿ ವೆಚ್ಚದಲ್ಲಿ ತಾಲ್ಲೂಕು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ತಾಲ್ಲೂಕು ಆಡಳಿತ ಕುಡಂಬಲ್ ರಸ್ತೆ ಪಕ್ಕದ 5 ಎಕರೆ ಜಾಗವನ್ನು ಗುರುತಿಸಿದೆ. ಇನ್ನೂ ಸರ್ಕಾರದಿಂದ ಜಾಗ ಮಂಜೂರಾಗಿಲ್ಲ.

ಸುಮಾರು ಮೂರು ಲಕ್ಷ ಜನಸಂಖ್ಯೆ ಹೊಂದಿರುವ ಚಿಟಗುಪ್ಪ ತಾಲ್ಲೂಕಿನಲ್ಲಿ ಒಂದೂ ಸುಸಜ್ಜಿತವಾದ ಆಸ್ಪತ್ರೆ ಇಲ್ಲ. ಹೈದರಾಬಾದ್–ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮೇಲಿದ್ದರೂ ವೈದ್ಯಕೀಯ ಸೌಲಭ್ಯಕ್ಕಾಗಿ ಅಲೆಯಬೇಕಾಗಿದೆ

ಚಿಟಗುಪ್ಪದಲ್ಲಿ ಹೈಟೆಕ್ ಮಾದರಿ ಚಿಕಿತ್ಸೆ ಲಭಿಸುತ್ತಿಲ್ಲ. ಅಪಘಾತದ ಸಂದರ್ಭದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ತುರ್ತು ಚಿಕಿತ್ಸಾ ವಿಭಾಗವೇ ಇಲ್ಲ. ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯುವಾಗ ಅನೇಕ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪುರಸಭೆ ಮಾಜಿ ಸದಸ್ಯ ವಿಜಯಕುಮಾರ ಬಮ್ಮಣಿ ಹೇಳುತ್ತಾರೆ.

ತಾಲ್ಲೂಕು ಆಸ್ಪತ್ರೆ ಕಟ್ಟಡಕ್ಕೆ ಖಾಸಗಿ ವ್ಯಕ್ತಿಯಿಂದ ಭೂದಾನ

ಕಮಲನಗರದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗಾಯತ್ರಿ ವಿಜಯಕುಮಾರ ಹೇಳುತ್ತಾರೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳಿದ್ದರೂ ಸಿಬ್ಬಂದಿ ಕೊರತೆ ಇದೆ. ತಾಲ್ಲೂಕು ಆಸ್ಪತ್ರೆ ಕಟ್ಟಡಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಮಲ್ಲಿಕಾರ್ಜುನ ಬಾಬುರಾವ್ ಅವರು ತಮ್ಮ ಮಾಲೀಕತ್ವದ ಜಮೀನನ್ನು 2021ರ ಮಾರ್ಚ್ 19 ರಂದು ದೇಣಿಗೆ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಭು ಚವಾಣ್‌ ಅವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸುತ್ತಾರೆ.

ಕಮಲನಗರ ಆಸ್ಪತ್ರೆಗೆ ನಿತ್ಯ ಸರಾಸರಿ 400 ಹೊರ ರೋಗಿಗಳು ಬರುತ್ತಾರೆ. ಕೋವಿಡ್‌ ಅವಧಿಯಲ್ಲಿ ಈ ಸಂಖ್ಯೆ 250ಕ್ಕೆ ಕುಸಿದಿದೆ. ಸೌಲಭ್ಯ ಕೊರತೆಯಿಂದ ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆಯೂ ಇಳಿದಿದೆ.

ತಾಲ್ಲೂಕು ಘೋಷಣೆಯಾದರೂ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳು ಇಂದಿಗೂ ಮರೀಚಿಕೆಯಾಗಿವೆ. ಆಸ್ಪತ್ರೆ ಮೇಲ್ದರ್ದಜೆಗೆ ಏರಿಲ್ಲ. ತಜ್ಞ ವೈದ್ಯರೂ ಇಲ್ಲ. ಹೀಗಾಗಿ ಜಿಲ್ಲೆಯ ಬಡ ಜನ ನೆರೆಯ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ಇದೆ. ಪ್ರಸ್ತಾವಗಳು ಸರ್ಕಾರಿ ಕಚೇರಿಯಲ್ಲಿ ದೂಳು ತಿನ್ನುತ್ತಿವೆ. ಬಡವರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ ಎಂದು ಕಮಲನಗರ ನಿವಾಸಿ ಸಂತೋಷ ಬನವಾಸೆ ಬೇಸರ ವ್ಯಕ್ತಪಡಿಸುತ್ತಾರೆ.

ಜನರ ಸಮಸ್ಯೆ ಕೇಳುವವರಿಲ್ಲ

ಹುಲಸೂರು: ಹುಲಸೂರು ತಾಲ್ಲೂಕು ಮೂರೂವರೆ ಲಕ್ಷ ಜನಸಂಖ್ಯೆ ಹೊಂದಿದ್ದರೂ ಜನ ವೈದ್ಯಕೀಯ ಸೌಲಭ್ಯಕ್ಕಾಗಿ ಪರದಾಡುವುದು ತಪ್ಪಿಲ್ಲ. ಹುಲಸೂರಿನ ಸಮುದಾಯ ಆರೋಗ್ಯ ಕೇಂದ್ರ ನಾಲ್ಕು ವರ್ಷವಾದರೂ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಲ್ಲ.ಹಿರಿಯ ವೈದ್ಯಾಧಿಕಾರಿ, ಸ್ತ್ರೀರೋಗ ತಜ್ಞ ವೈದ್ಯ, ಮಕ್ಕಳ ತಜ್ಞ ವೈದ್ಯ, ಅರಿವಳಿಕೆ ತಜ್ಞವೈದ್ಯ, ದಂತ ವೈದ್ಯ, ನೇತ್ರ ವೈದ್ಯ, ಕಚೇರಿ ಅಧೀಕ್ಷಕ, ಶುಶ್ರೂಷಾಧಿಕಾರಿ, ಕ್ಷ- ಕಿರಣ ತಂತ್ರಜ್ಞ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆಗಳು ಖಾಲಿ ಇವೆ ಎಂದು ಹುಲಸೂರು ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರವೀಣಕುಮಾರ ಹೂಗಾರ ಹೇಳುತ್ತಾರೆ.

ನಿತ್ಯ 300 ರಿಂದ 350 ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದನ್ನು ಕೇಳಿ ಸರ್ಕಾರಕ್ಕೆ ಶಾಪ ಹಾಕುತ್ತ ಬಸವಕಲ್ಯಾಣ, ಬೀದರ್ ಹಾಗೂ ಮಹಾರಾಷ್ಟ್ರದ ಪಟ್ಟಣಗಳಿಗೆ ಹೋಗುತ್ತಾರೆ. ಸರ್ಕಾರ ಗಡಿ ಭಾಗದ ಜನರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲು ತ್ವರಿತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಧೀರ್ ಕಾಡಾದಿ ಒತ್ತಾಯಿಸುತ್ತಾರೆ.

ಹುಲಸೂರು ತಾಲ್ಲೂಕಿನ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರು ಹಾಗೂ ಮಕ್ಕಳ ಸಮಸ್ಯೆಯನ್ನು ಇಲ್ಲಿ ಕೇಳುವವರೇ ಇಲ್ಲ. ಆಸ್ಪತ್ರೆಯಲ್ಲಿ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸೇವೆ ಇಲ್ಲ. ಗರ್ಭಿಣಿಯರು ಹಾಗೂ ಮಕ್ಕಳು ತುರ್ತು ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಪಕ್ಕದ ತಾಲ್ಲೂಕು ಅಥವಾ ಮಹಾರಾಷ್ಟ್ರಕ್ಕೆ ಹೋಗಬೇಕಾದ ಸ್ಥಿತಿ ಇದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ ಬೇಸರ ವ್ಯಕ್ತಪಡಿಸುತ್ತಾರೆ.

ಸಹಕಾರ: ವೀರೇಶ ಮಠಪತಿ, ಮನೋಜಕುಮಾರ ಹಿರೇಮಠ, ಬಸವಕುಮಾರ ಕವಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT